ಸುರ್ಜೇ​ವಾಲಾ ಜತೆ ಡಿಕೆಶಿ ಇದ್ದಾಗ ಅಧಿ​ಕಾ​ರಿ​ಗಳು ಬಂದಿ​ದ್ದ​ರು, ನಗ​ರ ಪ್ರದ​ಕ್ಷಿ​ಣೆಗೆ ಡಿಕೆಶಿ ಕರೆ​ದು​ಕೊಂಡು ಹೋಗಲು ಬಂದಿದ್ದ ಅಧಿ​ಕಾ​ರಿ​ಗ​ಳು 

ಬೆಂಗಳೂರು(ಜೂ.15):  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಅವರು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದಾರೆಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಮಾಡಿರುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಹಲವು ಸಚಿವರು, ಸುರ್ಜೆವಾಲ ಅಧಿಕಾರಿಗಳ ಸಭೆ ನಡೆಸಿಲ್ಲ, ಅದು ಅಧಿಕೃತ ಸಭೆ ಸಹ ಅಲ್ಲ. ಸುರ್ಜೇವಾಲ ಅವರ ಜೊತೆ ಉಪ ಮುಖ್ಯಮಂತ್ರಿಗಳು ಇದ್ದಾಗ ಡಿಕೆಶಿ ಅವ​ರನ್ನು ನಗರ ಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಅಧಿಕಾರಿಗಳು ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಬಿಜೆಪಿ ಮುಖಂಡರು ಮಾಡಿರುವ ಟೀಕೆ ಹಾಗೂ ರಾಜ್ಯಪಾಲರಿಗೆ ದೂರು ನೀಡಿರುವ ಕುರಿತಂತೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಈ ಬಗ್ಗೆ ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡಲಿ, ಅದನ್ನು ರಾಜ್ಯಪಾಲರು ಪರಿಶೀಲಿಸುತ್ತಾರೆ ಎಂದಿದ್ದಾರೆ.

ಸುರ್ಜೇವಾಲಾ ನಡೆಸಿದ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು: ವಿವಾದ

ಸುರ್ಜೇವಾಲ ಭಾಗಿಯಾಗಿಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿಯಾಗಿರಲಿಲ್ಲ. ಅವರು ಶಾಂಗ್ರಿಲಾ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಅವರನ್ನು ಭೇಟಿ ಮಾಡಲು ಡಿ.ಕೆ. ಶಿವಕುಮಾರ್‌ ಹೋಗಿದ್ದರು. ಈ ವೇಳೆ ಉಪ ಮುಖ್ಯಮಂತ್ರಿಯವರನ್ನು ಸಿಟಿ ರೌಂಡ್‌್ಸಗೆ ಕರೆದುಕೊಂಡು ಹೋಗಲು ಅಧಿಕಾರಿಗಳು ಹೋಟೆಲ್‌ಗೆ ಹೋಗಿದ್ದಾರೆ. ಆಗ ಭೇಟಿಯಾಗಿರಬಹುದು ಅಷ್ಟೇ, ಅದು ಅಧಿಕೃತ ಸಭೆ ಸಹ ಅಲ್ಲ, ಬಿಜೆಪಿಯವರು ಬೇಕಾದರೆ ರಾಜ್ಯಪಾಲರಿಗೆ ದೂರು ಕೊಡಲಿ ಎಂದು ಪ್ರತಿಕ್ರಿಯಿಸಿದರು.

ಅಧಿಕಾರಿಗಳ ಸಭೆ ನಡೆಸಿಲ್ಲ:

ಪಾವಗಡದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸುರ್ಜೆವಾಲ ಅವರಿಗೂ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ, ತಾವು ಹಾಗೂ ಸುರ್ಜೇವಾಲ ಅವರು ಕಾಫಿ ಕುಡಿಯುತ್ತಿರುವಾಗ, ನಗರ ಪ್ರದಕ್ಷಿಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ತಮ್ಮನ್ನು ಕರೆದುಕೊಂಡು ಹೋಗಲು ಅಧಿಕಾರಿಗಳು ಬಂದಿದ್ದರು ಅಷ್ಟೇ, ಆ ಸಮಯದಲ್ಲಿ ಸುರ್ಜೆವಾಲ ಅಧಿಕಾರಿಗಳ ಸಭೆ ನಡೆಸಿಲ್ಲ, ಅವರು (ಬಿಜೆಪಿಯವರು) ರಾಜ್ಯಪಾಲರಿಗಾದರೂ ದೂರು ನೀಡಲಿ, ಅವರು ಇಂತಹ ಸಭೆಗಳನ್ನು ಎಷ್ಟುನಡೆಸಿದ್ದಾರೆ ಎಂಬುದು ಗೊತ್ತಿದೆ ಎಂದಿದ್ದಾರೆ.

ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ

ಅಧಿಕೃತ ಸಭೆ ಅಲ್ಲ:

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಖಾಸಗಿ ಹೊಟೇಲ್‌ನಲ್ಲಿ ಸಭೆ ಮಾಡಿದ ವೇಳೆ ಸುರ್ಜೆವಾಲ ಬಂದಿದ್ದಾರೆ. ಅಧಿಕಾರಿಗಳ ಸಭೆ ನಡೆಸಿಲ್ಲ. ಅಷ್ಟೇ ಅಲ್ಲ. ಅದು ಅಧಿಕೃತ ಸಭೆ ಸಹ ಅಲ್ಲ. ಸುರ್ಜೆವಾಲ ಅವರು ಸಭೆ ಸಹ ನಡೆಸಿಲ್ಲ. ಬಿಜೆಪಿಯವರು ದೂರು ನೀಡಲಿ, ರಾಜಭವನದವರು ಪರಿಶೀಲನೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಯಾವುದೋ ಒಂದು ಫೋಟೋ ಇಟ್ಟುಕೊಂಡು ಬಿಜೆಪಿಯವರು ದೂರು ಕೊಡುತ್ತಾರೆ ಎಂದರೆ ಏನರ್ಥ, ಅಲ್ಲಿ (ಹೊಟೇಲ್‌) ಎರಡು ಸಭೆ ನಡೆಯುತ್ತಿತ್ತು. ನಮ್ಮ ಜೊತೆ ಸುರ್ಜೇವಾಲ ಅವರು ಸಭೆ ಮಾಡುತ್ತಿದ್ದರು, ಅಲ್ಲಿಗೆ ಉಪಮುಖ್ಯಮಂತ್ರಿಗಳು ಬಂದರು. ನಂತರ ಅಧಿಕಾರಿಗಳು ಬಂದು ಮಾತನಾಡಿಕೊಂಡು ಹೋದರು. ಈ ಫೋಟೋ ಇಟ್ಟುಕೊಂಡು ನೀವು (ಮಾಧ್ಯಮದವರು) ಊಹೆ ಕಟ್ಟಿದ್ದೀರಿ, ಬಿಜೆಪಿಯವರು ಇದನ್ನು ದೊಡ್ಡದಾಗಿ ಮಾಡಲು ಹೊರಟಿದ್ದಾರೆ ಅಷ್ಟೇ ಎಂದರು.