ಚೆನ್ನೈ (ಡಿ. 04): ಹಲವು ವರ್ಷಗಳ ಕುತೂಹಲಕ್ಕೆ ತೆರೆ ಎಳೆದಿರುವ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಕೊನೆಗೂ ರಾಜಕೀಯಕ್ಕೆ ಪ್ರವೇಶಿಸುವ ಘೋಷಣೆ ಮಾಡಿದ್ದು, ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, 2021ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿ ಎಲ್ಲವನ್ನೂ ಬದಲಿಸುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ.

‘ರಜನಿ ಮಕ್ಕಳ್‌ ಮಂದ್ರಂ’ ಎಂಬ ಸಂಘಟನೆಯ ಮೂಲಕ ಮೂರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರಜನೀಕಾಂತ್‌ ಗುರುವಾರ ತಾವು ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿಯೂ, ಆ ಕುರಿತು ಡಿ.31ರಂದು ವಿವರ ನೀಡುವುದಾಗಿಯೂ ಪ್ರಕಟಿಸಿದರು.

ಕರ್ನಾಟಕ ಬಂದ್: ಬೆಂಗಳೂರಲ್ಲಿ 16000 ಪೊಲೀಸರ ನಿಯೋಜನೆ: ಪಂತ್

ಈ ಕುರಿತು ಟ್ವೀಟ್‌ ಮಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಾವು ಅದ್ಭುತಗಳು ಘಟಿಸುವಂತೆ ಮಾಡುತ್ತೇವೆ. ಈ ಚುನಾವಣೆಯಲ್ಲಿ ಪವಾಡ ಸಂಭವಿಸಲಿದೆ. ನಮ್ಮ ಪಕ್ಷ ಜಾತಿ ಅಥವಾ ಧರ್ಮಾಧಾರಿತ ರಾಜಕಾರಣ ಮಾಡದೆ ಆಧ್ಯಾತ್ಮಿಕ ಜಾತ್ಯತೀತ ರಾಜಕಾರಣ ಮಾಡಿ ಅಧಿಕಾರಕ್ಕೆ ಬರಲಿದೆ. ಚುನಾವಣೆಯಲ್ಲಿ ಗೆದ್ದು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತ ನೀಡುತ್ತೇವೆ. ಖಂಡಿತ ನಾವು ಬದಲಾವಣೆ ತರುತ್ತೇವೆ. ಎಲ್ಲವನ್ನೂ ಬದಲಿಸುತ್ತೇವೆ. ಈಗಲ್ಲದಿದ್ದರೆ ಇದು ಇನ್ನಾವತ್ತೂ ಸಾಧ್ಯವಿಲ್ಲ ಎಂದರು.

ನಂತರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ತಮಿಳುನಾಡಿನ ಜನರಿಗಾಗಿ ಜೀವವನ್ನೇ ನೀಡಲು ಸಿದ್ಧನಿದ್ದೇನೆ. ನಾನು ಗೆದ್ದರೆ ಅದು ಜನರ ಗೆಲುವಾಗಲಿದೆ. ನಾನು ಸೋತರೆ ಜನರ ಸೋಲಾಗಲಿದೆ. 2017ರಲ್ಲೇ ನಾನು 2021ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದೆ. ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಬದಲಾವಣೆಗೆ ಜನರನ್ನು ಸಿದ್ಧಪಡಿಸುವುದಾಗಿಯೂ ಹೇಳಿದ್ದೆ. ಆದರೆ, ಕೊರೋನಾ ವೈರಸ್‌ನಿಂದಾಗಿ ತಡವಾಯಿತು ಎಂದು ಹೇಳಿದರು.

2016ರಲ್ಲಿ ನಾನು ಕಿಡ್ನಿ ಕಸಿ ಮಾಡಿಸಿಕೊಂಡಿದ್ದೇನೆ. ನಂತರ ರಾಜಕೀಯಕ್ಕೆ ಪ್ರವೇಶಿಸದಂತೆ ವೈದ್ಯರು ಸಲಹೆ ನೀಡಿದ್ದರು. ಈಗಂತೂ ಕೊರೋನಾ ವೈರಸ್‌ ಕಾರಣದಿಂದ ರಾಜಕೀಯ ಬೇಡವೇ ಬೇಡ ಅಂದಿದ್ದಾರೆ. ಆದರೆ ನಾನು ಸಿಂಗಾಪುರದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಗ ತಮಿಳುನಾಡಿನ ಜನರ ಪ್ರಾರ್ಥನೆಯೇ ನನ್ನನ್ನು ಬದುಕಿಸಿದೆ. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿಯಿಂದಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅವರಿಗಾಗಿಯೇ ಜೀವ ಕೊಡಬೇಕಾಗಿ ಬಂದರೆ ಖುಷಿಯಿಂದ ನೀಡುತ್ತೇನೆ ಎಂದು ಸಿನಿಮೀಯ ಶೈಲಿಯಲ್ಲಿ ಹೇಳಿದರು.

ಡಿ. 5 ಕ್ಕೆ ಕರ್ನಾಟಕ ಬಂದ್ ; ಏನಿರುತ್ತೆ. ಏನಿರಲ್ಲ?

ಬೆಂಬಲ ಯಾರಿಗೆ? ಲಾಭ ಯಾರಿಗೆ?

ತಮಿಳುನಾಡಿನಲ್ಲಿ ಏಪ್ರಿಲ್‌-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಜನೀಕಾಂತ್‌ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದಾರೆಯೇ ಹೊರತು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿಲ್ಲ. ಅಥವಾ ಯಾವುದಾದರೂ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಾಗಿಯೂ ಹೇಳಿಲ್ಲ. ಹೀಗಾಗಿ ಅವರ ರಾಜಕೀಯ ಪ್ರವೇಶದಿಂದ ಯಾರಿಗೆ ಲಾಭ ಅಥವಾ ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಆಡಳಿತಾರೂಢ ಎಐಎಡಿಎಂಕೆ ಜೊತೆ ಅವರಿಗೆ ಒಳ್ಳೆಯ ಸಂಬಂಧವಿಲ್ಲ. ಹಾಗೆಯೇ, ವಿಪಕ್ಷದಲ್ಲಿರುವ ಡಿಎಂಕೆ ಜೊತೆಗೂ ಹತ್ತಿರದ ಸಂಬಂಧಗಳಿಲ್ಲ. ಇನ್ನು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಅವರು ಕೃಷ್ಣ-ಅರ್ಜುನರಿದ್ದಂತೆ ಎಂದು ಹೊಗಳಿದ್ದುಂಟು. ಹೀಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವೂ ಇದೆ. ಆದರೆ, ಈಗಾಗಲೇ ಎಐಎಡಿಎಂಕೆ ಜೊತೆ ಬಿಜೆಪಿ ಸಖ್ಯ ಹೊಂದಿದೆ.