ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಕೇಳದಂತೆ ಮಾಡುವ ಅಗತ್ಯ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ವಿಧಾನಪರಿಷತ್ತು (ಡಿ.10): ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಕೇಳದಂತೆ ಮಾಡುವ ಅಗತ್ಯ ಇದೆ ಎಂದು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಿಯಮ 68 ರಡಿ ರಾಜ್ಯದಲ್ಲಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು ಹಾಗೂ ನಾಶಗೊಂಡ ಬೆಳೆಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಮಾತನಾಡುವ ವೇಳೆ ಅವರು ಉ.ಕರ್ನಾಟಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.

ರಾಜ್ಯದಲ್ಲಿ ರೈತರ ಆತ್ಮ*ಹತ್ಯೆ ಹೆಚ್ಚುತ್ತಿದೆ. ಕಬ್ಬುಬೆಳೆದವರಿಗೆ ತೂಕ ಮತ್ತು ಅಳತೆಯಲ್ಲಿ ಮಾಲೀಕರಿಂದ ಮೋಸ ಆಗುತ್ತಿದೆ. ಉದ್ದು, ತೊಗರಿ, ಸೂರ್ಯಕಾಂತಿ ಸೇರಿ ಇತರೆ ಬೆಳೆ ಬೆಳೆದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬವಾಗುತ್ತಿದೆ. ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಆಗಿಲ್ಲ. ಖರೀದಿ ಕೇಂದ್ರ ಆರಂಭವಾಗಿಲ್ಲ. ತುಂಗಭದ್ರಾ ಕ್ರೆಸ್ಟ್ ಗೇಟ್ ಸಮಸ್ಯೆಯಿಂದ ಆ ಭಾಗದ ಕೃಷಿ ಚಟುವಟಿಕೆಗೆ ಧಕ್ಕೆ ಆಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳ ಕೊರತೆಯಿದೆ. ಈ ಎಲ್ಲ ಸಮಸ್ಯೆಗಳ ಕಾರಣದಿಂದ ಸರ್ಕಾರದ ಒಳಗಿರುವವರೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ ಮುಂತಾದ ಜಿಲ್ಲೆಗಳು ತೀರಾ ಹಿಂದುಳಿದಿವೆ. ಆದ್ದರಿಂದ ಇಲ್ಲಿನ ಜನರು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಸಿಟ್ಟಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ 48 ಸಾವಿರ ಕೋಟಿ ರು.ಗೂ ಹೆಚ್ಚು ಹಣ ಬಿಡುಗಡೆಯಾಗಿದೆ. ಈ ಪೈಕಿ 36 ಸಾವಿರ ಕೋಟಿ ರು.ವೆಚ್ಚವಾಗಿದೆ. ಆದರೂ ಇಲ್ಲಿ ಮೂಲ ಸೌಕರ್ಯವಿಲ್ಲ. ಬೆಂಗಳೂರಿಗೆ ಹೋಲಿಸಿದರೆ ಇಲ್ಲಿನ ತಲಾ ಆದಾಯ ಬಹಳ ಕಡಿಮೆ ಇದೆ. ಆದ್ದರಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಇಲ್ಲಿನ ಮುಖಂಡರ ಶ್ರಮದ ಅಗತ್ಯವೂ ಇದೆ ಹೇಳಿದರು.

ಸೂಕ್ತ ಪರಿಹಾರ ಸಿಗುತ್ತಿಲ್ಲ

ಬಿಜೆಪಿ ಸದಸ್ಯ ಸಿ.ಟಿ ರವಿ ಮಾತನಾಡಿ, ರೈತರ ಆತ್ಮ*ಹತ್ಯೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಾನವ-ವನ್ಯಜೀವಿ ಸಂಘರ್ಷ ವಿಪರೀತವಾಗಿದ್ದು, ರೈತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಪ್ರತಿ ಗ್ರಾಮಗಳಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆ ಆಗಬೇಕು. ಸೂಕ್ತ ಬೆಂಬಲ ಬೆಲೆ ಸಿಗಬೇಕು. ಕಂದಾಯ-ಅರಣ್ಯ ಭೂಮಿ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಮಾಡಬೇಕು. ಮಣ್ಣಿಗೆ ರಾಸಾಯನಿಕ ಗೊಬ್ಬರ ಸೇರಿ ಇತರೆ ಮೂಲಗಳಿಂದ ವಿಷ ಸೇರುತ್ತಿದ್ದು ಮಣ್ಣು ಸಾಯುತ್ತಿದೆ. ಅದರ ಫಲವತ್ತತೆ ಹೆಚ್ಚಿಸಬೇಕಿದೆ ಎಂದರು.