ಬೆಂಗಳೂರು (ಡಿ.04):  ಒಂದು ಕಡೆ ಮರಾಠ ಸಮುದಾಯ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ.5ರಂದು ಕರ್ನಾಟಕ ಬಂದ್‌ ನಡೆಸಲಿವೆ. ಒಂದೆಡೆ ಬಂದ್‌ ಯಶಸ್ಸಿಗೆ ಹಲವು ಸಂಘಟನೆಗಳು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕೆಲವು ಸಂಘಟನೆಗಳು ಬಂದ್‌ಗೆ ವಿರೋಧ ಇಲ್ಲವೇ ನೈತಿಕ ಬೆಂಬಲ ವ್ಯಕ್ತಪಡಿಸಿವೆ.

"

ಜೊತೆಗೆ ಸರ್ಕಾರ ಕೂಡಾ ಸಾಕಷ್ಟುಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ಬಂದ್‌ ವಿಷಯ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳಿಗೆ ಈಗ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಅಗತ್ಯ ವಸ್ತುಗಳ ಮಾರಾಟ ಹಾಗೂ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಇರುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಕೂಡಾ ಒತ್ತಾಯಪೂರ್ವಕವಾಗಿ ಬಂದ್‌ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಬೀದಿ ಬದಿ ವ್ಯಾಪಾರಿಗಳ ಸಂಘ, ಹೋಟೆಲ್‌ ಮಾಲಿಕರ ಸಂಘ ಸೇರಿದಂತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.

ಸದ್ಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳು ಬಸ್‌ಗಳ ಸಂಚಾರ ಸ್ಥಗಿತ ಇಲ್ಲ ಎಂದು ಸ್ಪಷ್ಟಪಡಿಸಿವೆ. ಈಗಾಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ನಿಗಮದ ಎಲ್ಲ ವಿಭಾಗಗಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಅಂದು ಬಂದ್‌ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲು ಸಾರಿಗೆ ನಿಗಮಗಳು ತೀರ್ಮಾನಿಸಿವೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಘೋಷಿಸಿಲ್ಲ. ರೈಲು, ಮೆಟ್ರೋ ರೈಲುಗಳು ಎಂದಿನಂತೆ ಸಂಚರಿಸಲಿವೆ.

ಆಟೋ, ಓಲಾ, ಊಬರ್‌ ಟ್ಯಾಕ್ಸಿಗಳ ಸಂಚಾರ ಸೇವೆ ಬಂದ್‌ ಆಗಲಿದ್ದು, ಉದ್ಯೋಗಿಗಳಿಗೆ ಆಗಮಿಸಲು ಸ್ವಲ್ಪ ಮಟ್ಟಿನ ಸಮಸ್ಯೆಯಾಗಬಹುದು. ಮ್ಯಾಕ್ಸಿಕ್ಯಾಬ್‌, ಸರಕು ಸಾಗಣೆ ವಾಹನಗಳು, ಪೆಟ್ರೋಲ್‌-ಡಿಸೇಲ್‌ ಮತ್ತು ಅಡುಗೆ ಅನಿಲ ಸಾಗಣೆ ಟ್ಯಾಂಕರ್‌ಗಳು ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ (ಡಿ.4) ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚು.

ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘ, ರೈತ ಸಂಘಟನೆಗಳು ಮತ್ತು ಲಾರಿ ಮಾಲಿಕರು ನೈತಿಕ ಬೆಂಬಲ ನೀಡಿದ್ದು, ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಎಂದಿನ ಚಟುವಟಿಕೆ ಇರಲಿದೆ.

ಇಂದು ಬೆಂಗಳೂರಲ್ಲಿ ರೋಡ್‌ ಶೋ:

ಬಂದ್‌ಗೆ ಬೆಂಬಲ ಕೋರಿ ಬೆಂಗಳೂರು ನಗರದಲ್ಲಿ ಶುಕ್ರವಾರ ರೋಡ್‌ ಶೋ ನಡೆಯಲಿದೆ. ಡಿ.5ರಂದು ಬೆಳಗ್ಗೆ 10.30ಕ್ಕೆ ನಗರದ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಶಾಂತಿಯುತವಾಗಿ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಏನೇನು ಇರುತ್ತದೆ?

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ, ಸರ್ಕಾರಿ ಕಚೇರಿಗಳು, ನಮ್ಮ ಮೆಟ್ರೋ ಸೇವೆ, ಆಸ್ಪತ್ರೆಗಳು, ಮೆಡಿಕಲ್‌ ಶಾಪ್‌, ಆ್ಯಂಬುಲೆನ್ಸ್‌ ಸೇವೆ, ಹಾಲು, ಪೇಪರ್‌, ರೈಲು ಸಂಚಾರ, ಹೋಟೆಲ್‌ಗಳು ಕಾರ್ಯ ನಿರ್ವಹಿಸಲಿವೆ. ಹಣ್ಣು, ತರಕಾರಿ ವ್ಯಾಪಾರ ಇರಲಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆತೆರೆದಿರಲಿದೆ.

ಏನು ಇರೋದಿಲ್ಲ?

ಓಲಾ, ಊಬರ್‌ ಟ್ಯಾಕ್ಸಿ, ಆಟೋ ರಿಕ್ಷಾ ಸಂಚಾರ ಬಂದ್‌. ಉಳಿದ ಯಾವುವು ಬಂದ್‌ ಆಗಲಿವೆ ಎಂಬುದು ಶುಕ್ರವಾರ ಸಂಜೆಯೊಳಗೆ ನಿರ್ಧಾರ ಆಗಲಿದೆ.

ಮರಾಠ ಸಮುದಾಯ ನಿಗಮ ಸ್ಥಾಪನೆಗೆ ನಮ್ಮ ವಿರೋಧವಿದೆ. ಹೀಗಾಗಿ ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ನಗರದಲ್ಲಿ ಓಲಾ, ಊಬರ್‌, ಏರ್‌ಪೋರ್ಟ್‌ ಟ್ಯಾಕ್ಸಿ ಸೇರಿದಂತೆ ಯಾವುದೇ ಟ್ಯಾಕ್ಸಿ ಸೇವೆ ಇರುವುದಿಲ್ಲ.

- ತನ್ವೀರ್‌ ಪಾಷಾ, ಅಧ್ಯಕ್ಷ, ಓಲಾ, ಊಬರ್‌ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಯೂನಿಯನ್‌


ಡಿ.5ರಂದು ನಡೆಯುವ ರಾಜ್ಯ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಂದು ಬೆಳಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನಲ್ಲಿ ಆಟೋರಿಕ್ಷಾಗಳು ರಸ್ತೆಗೆ ಇಳಿಯುವುದಿಲ್ಲ. ಆಟೋ ಸೇವೆಯಲ್ಲಿ ವ್ಯತ್ಯಯವಾಗಲಿದೆ.

- ಮಂಜುನಾಥ, ಪ್ರಧಾನ ಕಾರ್ಯದರ್ಶಿ, ಆದರ್ಶ ಆಟೋ ಚಾಲಕರ ಯೂನಿಯನ್‌

ಡಿ.5ರಂದು ಕರೆ ನೀಡಿರುವ ರಾಜ್ಯ ಬಂದ್‌ಗೆ ನೈತಿಕ ಬೆಂಬಲ ಸೂಚಿಸಲಾಗಿದೆ. ಹೀಗಾಗಿ ಅಂದು ಸರಕು ಸಾಗಣೆ ಲಾರಿಗಳ ಸಂಚಾರ ಎಂದಿನಂತೆ ಇರಲಿದೆ.

- ಜಿ.ಆರ್‌.ಷಣ್ಮುಗಪ್ಪ, ಅಧ್ಯಕ್ಷ, ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟ್‌ಗಳ ಫೆಡರೇಶನ್‌