ರಾಯಚೂರು ಗ್ರಾಮೀಣ ಕ್ಷೇತ್ರ ಬಿಟ್ಟು ಉಳಿದ 6 ಕಡೆ ಅಸ್ಪಷ್ಟ: ಪ್ರಚಾರಕ್ಕೆ ಅಡ್ಡಿ
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಗುರುವಾರ ನೋಟಿಫಿಕೇಶನ್ ಹೊರಡಿಸುತ್ತಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗುತ್ತಿದ್ದರು ಸಹ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರ ಬಿಟ್ಟು ಉಳಿದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ತಡವಾಗುತ್ತಿರುವುದರಿಂದ ಕಣವು ಅಸ್ಪಷ್ಟತೆಯಿಂದ ಕೂಡಿರುವುದರಿಂದ ಪಕ್ಷ ಸಂಘಟನೆ, ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಏ.13) : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಗುರುವಾರ ನೋಟಿಫಿಕೇಶನ್ ಹೊರಡಿಸುತ್ತಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗುತ್ತಿದ್ದರು ಸಹ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರ ಬಿಟ್ಟು ಉಳಿದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ತಡವಾಗುತ್ತಿರುವುದರಿಂದ ಕಣವು ಅಸ್ಪಷ್ಟತೆಯಿಂದ ಕೂಡಿರುವುದರಿಂದ ಪಕ್ಷ ಸಂಘಟನೆ, ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ.
ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗ(Raichur assembly constituency)ಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಿ ಟಿಕೆಟ್ ನೀಡುವಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳು ಹಿಂದೆ ಬಿದ್ದಿರುವುದರಿಂದ ಚುನಾವಣೆ ಸಮಯದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ರಾಯಚೂರು ಗ್ರಾಮೀಣ ಕ್ಷೇತ್ರ(Raichur rural assembly constituency)ದಿಂದ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ್(Basanagouda daddal), ಬಿಜೆಪಿಯಿಂದ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್(Tipparaju hawaldar), ಜೆಡಿಎಸ್ನಿಂದ ಸಣ್ಣ ನರಸಿಂಹ ನಾಯಕ(Sanna Narasimha nayak), ಆಪ್ನಿಂದ ಡಾ.ಸುಭಾಷ ಚಂದ್ರ ಅವರು ಕಣಕ್ಕಿಳಿದಿದ್ದು ನಾಮಪತ್ರ ಸಲ್ಲಿಕೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಉಳಿದ 6 ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸದೆ ಇರುವುದು ಗೊಂದಲ ಮುಂದುವರೆಯಲು ಕಾರಣವಾಗಿದೆ.
ಎಲ್ಲೆಲ್ಲಿ, ಯಾರಿಗೆ ಟಿಕೆಟ್:
ಎರಡು ತಿಂಗಳ ಹಿಂದೆಯೇ ಜೆಡಿಎಸ್ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರದಿಂದ ಸಣ್ಣ ನರಸಿಂಹ ನಾಯಕ, ಮಾನ್ವಿಯಿಂದ ರಾಜಾ ವೆಂಕಟಪ್ಪ ನಾಯಕ, ಸಿಂಧನೂರಿನಿಂದ ವೆಂಕಟರಾವ್ ನಾಡಗೌಡ, ಲಿಂಗಸುಗೂರಿನಿಂದ ಸಿದ್ದು ವೈ.ಬಂಡಿ, ದೇವದುರ್ಗದಿಂದ ಕರೆಮ್ಮ ಜಿ.ನಾಯಕ ಅವರಿಗೆ ಟಿಕೆಟ್ ನೀಡಿ ರಾಯಚೂರು ನಗರ ಮತ್ತು ಮಸ್ಕಿ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸದೆ ಉಳಿಸಿದೆ.
ಅದೇ ರೀತಿ ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ದದ್ದಲ್, ಮಸ್ಕಿಯ ಹಾಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಟಿಕೆಟ್ ನೀಡಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ 5 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೆ ನಿರೀಕ್ಷೆ ಹುಸಿಗೊಳಿಸಿದ್ದು ಮೂರನೇ ಪಟ್ಟಿಯಲ್ಲಿ ರಾಯಚೂರು ನಗರ, ಮಾನ್ವಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ ಕ್ಷೇತ್ರಗಳಿಗೆ ಸಮರ್ಥರನ್ನು ಆಯ್ಕೆ ಮಾಡಿ ಟಿಕೆಟ್ ನೀಡುವ ನಿರೀಕ್ಷೆಯಲ್ಲಿ ಪಕ್ಷವು ಕಾಲ ಕಳೆಯುತ್ತಿದೆ. ಇನ್ನು ಬುಧವಾರ ಪ್ರಕಟಗೊಂಡ ಬಿಜೆಪಿ ಮೊದಲ ಪಟ್ಟಿಯಲ್ಲಿ ಜಿಲ್ಲೆ 6 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ರಾಯಚೂರು ಗ್ರಾಮೀಣ ತಿಪ್ಪರಾಜು, ನಗರಕ್ಕೆ ಡಾ.ಶಿವರಾಜ ಪಾಟೀಲ್, ದೇವದುರ್ಗಕ್ಕೆ ಕೆ.ಶಿವನಗೌಡ ನಾಯಕ, ಲಿಂಗಸುಗೂರಿಗೆ ಮಾನಪ್ಪ ಡಿ.ವಜ್ಜಲ್, ಮಸ್ಕಿಗೆ ಪ್ರತಾಪಗೌಡ ಪಾಟೀಲ್ ಮತ್ತು ಸಿಂಧನೂರಿಗೆ ಕೆ.ಕರಿಯಪ್ಪ ಅವರಿಗೆ ಟಿಕೆಟ್ ನೀಡಿದ್ದು, ಮಾನ್ವಿ ಕ್ಷೇತ್ರದ ಅಭ್ಯರ್ಥಿಯನ್ನು ಪೆಂಡಿಂಗ್ ಇರಿಸಿದೆ.
ಮಾನ್ವಿ: ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಮುನ್ನವೇ ಅಸಮಾಧಾನ ಸ್ಫೋಟ: ಬಿವಿ ನಾಯಕ ವಿರುದ್ಧ ತಿರುಗಿಬಿದ್ದ ಸ್ಥಳೀಯರು!
ಗುರುವಾರದಿಂದ ಏ.20 ವರೆಗೂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು ಕಡಿಮೆ ಸಮಯದಲ್ಲಿ ಕ್ಷೇತ್ರಗಳಲ್ಲಿ ಹಿಡಿದ ಸಾಧಿಸಬೇಕಾಗಿರುವುದರಿಂದ ರಾಜಕೀಯ ಪಕ್ಷಗಳು ಬಾಕಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಬೇಕು ಎನ್ನುವುದು ಎಲ್ಲ ಪಕ್ಷಗಳ ಮುಖಂಡರ ಒತ್ತಾಸೆಯಾಗಿದೆ.