Bharat Jodo Yatra Updates: ಕಾಂಗ್ರೆಸ್‌ ಹಮ್ಮಿಕೊಳ್ಳಲಿರುವ ಭಾರತ ಏಕತಾ ಯಾತ್ರೆ ಸೆಪ್ಟೆಂಬರ್‌ 8ರಂದು ಆರಂಭವಾಗಲಿದ್ದು, ರಾಹುಲ್‌ ಗಾಂಧಿ ಕಂಟೈನರ್‌ ಕ್ಯಾಬಿನ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಹುಲ್‌ ಗಾಂಧಿ ಜತೆಗೆ ಅನೇಕ ಕಾಂಗ್ರೆಸ್‌ ನಾಯಕರೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 148 ದಿನಗಳ ಭಾರತ ಏಕತಾ ಯಾತ್ರೆ ಕಾಂಗ್ರೆಸ್‌ ಮಾಡಲಿದ್ದು, ಸುಮಾರು 3,500 ಕಿಲೋಮೀಟರ್‌ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಕ್ರಮಿಸಲಿದ್ದಾರೆ. ಈ ವೇಳೆ ಕಂಟೈನರ್‌ ಕ್ಯಾಬಿನ್‌ನಲ್ಲಿ ರಾಹುಲ್‌ ಗಾಂಧಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿದೆ. ಕಂಟೈನರ್‌ ಕ್ಯಾಬಿನ್‌ ಎಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಡೊಯ್ಯಬಹುದಾದ ಮನೆ. ಸ್ಟೀಲ್‌ ಕಂಟೈನರ್‌ನಲ್ಲಿ ಅದನ್ನು ನಿರ್ಮಿಸಲಾಗುತ್ತದೆ ಮತ್ತು ಮನೆಯಲ್ಲಿ ಇರುವ ಎಲ್ಲಾ ವಸ್ತುಗಳೂ ಮತ್ತು ಸವಲತ್ತುಗಳೂ ಇದರಲ್ಲಿ ಇರುತ್ತವೆ. ಉದಾಹರಣೆಗೆ ಸ್ನಾನಕೋಣೆ, ಹಾಲ್‌, ಟಿವಿ, ಎಸಿ, ಮಲಗುವ ಕೋಣೆ ಮತ್ತಿತರ ಸವಲತ್ತುಗಳು ಇದರಲ್ಲಿರುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಕಂಟೈನ್‌ ಕ್ಯಾಬಿನ್‌ ಅನ್ನು ನಿರ್ಮಿಸಲಾಗುತ್ತದೆ. 
ಸೆಪ್ಟೆಂಬರ್‌ 7ರಿಂದ ಭಾರತ ಏಕತಾ ಯಾತ್ರೆ (Bharat Jodo Yatra) ಆರಂಭವಾಗಲಿದೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ 2024 ಚುನಾವಣೆಯನ್ನು ಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ಈ ಯಾತ್ರೆಯನ್ನು ಕಾಂಗ್ರೆಸ್‌ ಪಕ್ಷ ಆರಂಭಿಸುತ್ತಿದೆ. ಈ ಮೂಲಕ ಹೆಚ್ಚು ಜನರನ್ನು ತಲುಪಬೇಕು ಮತ್ತು ಕೆಳಮುಖವಾಗಿ ಸಾಗುತ್ತಿರುವ ಪಕ್ಷದ ವರ್ಚಸ್ಸನ್ನು ಮತ್ತೆ ಮೇಲೆತ್ತಬೇಕು ಎಂಬ ಇರಾದೆ ರಾಹುಲ್‌ ಗಾಂಧಿಯವರದ್ದಾಗಿದೆ. 
ಆದರೆ ಕಾಂಗ್ರೆಸ್‌ ಈ ಕಾರಣವನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಕೋಮು ಕಲಹಗಳು ಮತ್ತು ಅಹಿತಕರ ಘಟನೆಗಳು ನಿಲ್ಲಬೇಕು. ಇಡೀ ದೇಶ ಒಂದಾಗಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷ ಹೇಳುತ್ತಿದೆ. ಈ ಯಾತ್ರೆಯ ವೇಳೆ ಪಕ್ಷ ಜನರ ಸಮಸ್ಯೆಯನ್ನು ಆಲಿಸುತ್ತದೆ ಹೊರತು ಹೆಚ್ಚು ಮಾತನಾಡುವುದಿಲ್ಲ ಎಂದೂ ಪಕ್ಷ ಹೇಳಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರೆ ಡಾ ಶಮಾ ಮೊಹಮ್ಮದ್‌, ಯಾತ್ರೆಯುದ್ದಕ್ಕೂ ರಾಹುಲ್‌ ಗಾಂಧಿ ಕಂಟೈನರ್‌ ಮನೆಯಲ್ಲಿ ತಂಗಲಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ರಾಹುಲ್‌, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಟಲಿಯಲ್ಲಿದ್ದಾರೆ. ಸೋನಿಯಾ ಗಾಂಧಿ ತಾಯಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. "ಈ ಯಾತ್ರೆಯನ್ನು ಕಳೆದ ನಾಲ್ಕು ತಿಂಗಳ ಹಿಂದೆಯೇ ರೂಪಿಸಲಾಗಿತ್ತು. ಭಾರತ ಬಹು ಸಂಖ್ಯಾತ ದೇಶ. ವಿವಿಧ ಆಚರಣೆಗಳು, ಸಂಸ್ಕೃತಿ, ಭಾಷೆಗಳನ್ನು ಹೊಂದಿರುವ ದೇಶ. ಈ ಸಾಮಾರಸ್ಯವನ್ನು ಹಾಳು ಮಾಡಲು ಯತ್ನ ನಡೆಯುತ್ತಿದೆ. ದೇಶವನ್ನು ಒಗ್ಗೂಡಿಸುವ ಮತ್ತು ವಿವಿಧತೆಯನ್ನು ಕಾಪಾಡುವ ಸಲುವಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ," ಎಂದು ಡಾ ಶಮಾ ಮೊಹಮ್ಮದ್‌ ಹೇಳಿದ್ದಾರೆ. 
ಕಾಂಗ್ರೆಸ್‌ ಹಿರಿಯ ಸದಸ್ಯ ದಿಗ್ವಿಜಯ್‌ ಸಿಂಗ್‌ ಮಾತನಾಡಿ, "ಯಾತ್ರೆ ಸೆಪ್ಟೆಂಬರ್‌ 8ರಂದು ಆರಂಭವಾಗಲಿದೆ. ಪಕ್ಷದ ನಾಯಕರು ಪ್ರತಿ ನಿತ್ರ ಆರರಿಂದ ಏಳು ಗಂಟೆ ನಡೆಯುತ್ತಾರೆ. ಮತ್ತು ಈ ವೇಳೆ ಜನರನ್ನು ಭೇಟಿಯಾಗುತ್ತಾರೆ," ಎಂದು ಹೇಳಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆ ನಡುವೆ ಯಾತ್ರೆ ಪ್ರತಿನಿತ್ಯ ಆರಂಭವಾಗಲಿದೆ. ಮತ್ತು ದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಯಾತ್ರೆ ತೆರಳಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. 
ಕಾಂಗ್ರೆಸ್‌ ಮೂಲಗಳ ಪ್ರಕಾರ ತಮಿಳುನಾಡು ಮುಖ್ಯಮಂತ್ರಿ ಎಮ್‌ಕೆ ಸ್ಟಾಲಿನ್‌ ಕೂಡ ಭಾರತ ಏಕತಾ ಯಾತ್ರೆಯ ಆರಂಭ ಕಾರ್ಯಕ್ರಮದಲ್ಲಿ ಉಪಸ್ಥಿತರಾಗುತ್ತಾರೆ.