ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆ ಮಾಡಲು ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನುಸುಳುಕೋರರನ್ನು ಮತದಾರರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಎಸ್ಐಆರ್ ಪ್ರಕ್ರಿಯೆ ವಿರೋಧಿಸುತ್ತಿದೆ ಎಂದು ಟೀಕಿಸಿದ್ದಾರೆ.
ಜೈಪುರ (ನ.1) ‘ಬಾಂಗ್ಲಾದೇಶದಲ್ಲಿ ಆದಂತೆ ಭಾರತದಲ್ಲೂ ಆಡಳಿತ ಬದಲಾವಣೆ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುತ್ತಿದ್ದಾರೆ’ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಜತೆಗೆ, ‘ನೆರೆದೇಶದಲ್ಲಿ ಆದಂತೆ ಭಾರತದಲ್ಲಿಯೂ ಹಿಂದೂಗಳ ಮೇಲೆ ದಾಳಿ ನಡೆಯಲೆಂದು ವಿಪಕ್ಷ ಬಯಸುತ್ತಿದೆಯೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಆಡಳಿತ ಬದಲಾವಣೆ ಬಗ್ಗೆ ರಾಹುಲ್ ಮಾತು ಏನು ಸೂಚಿಸುತ್ತದೆ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ, ‘ರಾಹುಲ್ ಮತ್ತು ಅವರ ಕೆಲ ಆಪ್ತರು ಬಹಿರಂಗವಾಗಿಯೇ ಆಡಳಿತ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಬಾಂಗ್ಲಾದ ಉದಾಹರಣೆ ನೀಡಿ, ಅಲ್ಲಿನ ಯುವಜನರಿಂದ ಸ್ಫೂರ್ತಿ ಪಡೆಯುವಂತೆ ಜನರಿಗೆ ಹೇಳುತ್ತಾರೆ. ಅವರಿಗೆ ಯಾವ ರೀತಿಯ ಆಡಳಿತ ಬದಲಾವಣೆ ಬೇಕಾಗಿದೆ? ಗಾಂಧಿ ಭಾರತದ ಆಂತರಿಕ ಪ್ರಜಾಸತ್ತಾತ್ಮಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪ ಬಯಸಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಜತೆಗೆ, ‘ಪ್ರಜಾಪ್ರಭುತ್ವವು ಭಾರತದ ಪರಂಪರೆಯಲ್ಲಿ ಬೇರೂರಿದೆ ಮತ್ತು ಜನರು ತಮ್ಮ ಸರ್ಕಾರಗಳನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ’ ಎಂದು ತಿವಿದಿದ್ದಾರೆ.
ನುಸುಳುಕೋರರನ್ನ ಮತದಾರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಯತ್ನ
ಇದೇ ವೇಳೆ ವಿಪಕ್ಷಗಳು ಎಸ್ಐಆರ್ಗೆ ಆಕ್ಷೇಪಿಸುತ್ತಿರುವುದನ್ನು ಉಲ್ಲೇಖಿಸಿರುವ ಅವರು, ‘ಈಗಾಗಲೇ 12 ಬಾರಿ ಈ ಪ್ರಕ್ರಿಯೆಯನ್ನು ನಡೆಸಲಾಗಿದ್ದು, 10 ಬಾರಿ ಕಾಂಗ್ರೆಸ್ ಅವಧಿಯಲ್ಲೇ ನಡೆದಿತ್ತು. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್, ನುಸುಳುಕೋರರನ್ನು ಮತಪಟ್ಟಿಯಲ್ಲಿ ಸೇರಿಸಲು ಯತ್ನಿಸುತ್ತಿದೆ. ಚುನಾವಣಾ ಫಲಿತಾಂಶಗಳು ತಮ್ಮ ವಿರುದ್ಧ ಬಂದಾಗಲೆಲ್ಲಾ, ಆ ಪಕ್ಷ ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ’ ಎಂದರು.






