ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಷರತ್ತುಬದ್ಧ ಜಾಮೀನು ನೀಡಲಾಗಿದ್ದು, ಸೈಬರ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನಗರದ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಸೋಮವಾರ ಆದೇಶಿಸಿದೆ. ಪ್ರಕರಣ ಸಂಬಂಧ ಆರೋಪ ಎದುರಿಸುತ್ತಿರುವ ಕೃಪಾ ಆಳ್ವಾ, ಪ್ರಶಾಂತ್ ಕುಮಾರ್‌ ಹಾಗೂ ವಿನೋದ್ ಕುಮಾರ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಲ್ಲದೆ, ಈ ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ನಿರೀಕ್ಷಾ ಜಾಮೀನು ನೀಡಬೇಕು ಎಂದು ಕೋರಿದ್ದರು.

ಈ ಮಧ್ಯಂತರ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಮುಖ್ಯ ಅರ್ಜಿಯ ವಿಲೇವಾರಿಯಾಗುವರೆಗೂ ಅರ್ಜಿದಾರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತು.

ಸೈಬರ್‌ ಠಾಣೆ ಪೊಲೀಸರಿಗೆ ನೋಟಿಸ್‌:

ಅರ್ಜಿದಾರರನ್ನು ತನಿಖಾಧಿಕಾರಿಗಳು (ಸೈಬರ್‌ ಪೊಲೀಸರು) ಬಂಧನ ಮಾಡಿದರೆ, ಒಂದು ಲಕ್ಷ್ಮ ರು. ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ವೈಯಕ್ತಿಕ ಬಾಂಡ್‌ ಹಾಗೂ ಭದ್ರತಾ ಖಾತರಿ ಪಡೆದು ಆರೋಪಿಗಳನ್ನು ತನಿಖಾಧಿಕಾರಿಗಳನ್ನು ಬಿಡುಗಡೆ ಮಾಡಬೇಕು. ತನಿಖಾಧಿಕಾರಿಗಳ ತನಿಖೆಗೆ ಅರ್ಜಿದಾರರು ಸಹಕಾರ ನೀಡಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯ ತಿರುಚಲು ಪ್ರಯತ್ನಿಸಬಾರದು. ಕಾಯಂ ನಿರೀಕ್ಷಾ ಜಾಮೀನು ಪಡೆಯಲು ವಿಫಲವಾದರೆ, ತನಿಖಾಧಿಕಾರಿಗಳ ಮುಂದೆ ಶರಣಾಗಬೇಕು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಷರತ್ತು ವಿಧಿಸಿದೆ.

ಅಲ್ಲದೆ, ಸೈಬರ್ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ. ತಾವು ‘ಕರ್ನಾಟಕ ಹನಿಟ್ರ್ಯಾಪ್’ ಯೂಟ್ಯೂಬ್ ಚಾನೆಲ್‌ನ ಮಾಲೀಕರಲ್ಲ. ಅದನ್ನು ಆರಂಭಿಸಿಲ್ಲ ಅಥವಾ ನಿರ್ವಹಣೆಯನ್ನೂ ಮಾಡಿಲ್ಲ. ಬೇರೊಬ್ಬರು ಈ ಚಾನೆಲ್ ಆರಂಭಿಸಿ ನಿರ್ವಹಿಸಿದ್ದರು. ಇದೇ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿದೆ. ಸದ್ಯ ತಾವು ತನಿಖೆಗೆ ಸಂಪೂರ್ಣ ಸಹಕರಿಸಲಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.