ವರುಣದಲ್ಲಿ ಜೆಡಿಎಸ್ ಟಿಕೆಟ್ ನೀಡಿದ್ರೆ ಸಿದ್ದು ಸೋಲಿಸುವೆ: ರಘು ಆಚಾರ್
ಈ ಬಾರಿಯ ಚುನಾವಣೆಯಲ್ಲಿ 197 ಸಣ್ಣ ಜಾತಿಯವರಿಗೆ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಒಂದೂ ಟಿಕೆಟ್ ಕೊಟ್ಟಿಲ್ಲ.
ಹುಣಸೂರು(ಮೈಸೂರು)(ಏ.12): ವರುಣ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಟಿಕೆಟ್ ನೀಡಿದ್ದೇ ಆದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ತೀರುವೆ ಎಂದು ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಹೇಳಿದರು. ತಾಲೂಕಿನ ಅರಸು ಕಲ್ಲಹಳ್ಳಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅವಕಾಶ ಕೊಟ್ಟರೆ ವರುಣದಲ್ಲಿ ಸ್ಪರ್ಧೆ ಮಾಡ್ತೀನಿ. ಟಿಕೆಟ್ ನೀಡುತ್ತಾರೆಂಬ ನಂಬಿಕೆ ಇದೆ ಎಂದರು.
ಚಿತ್ರದುರ್ಗ ಬಿಟ್ಟು ಕೊಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಚಿತ್ರದುರ್ಗದಲ್ಲಿ ಪತ್ನಿ ನಿಲ್ಲಿಸಿ ವರುಣದಿಂದ ನಾನು ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ, ಗೆದ್ದು ತೋರಿಸುವೆ. ದೇವರಾಜ ಅರಸು ಮುಖ್ಯಮಂತ್ರಿ ಆಗಲ್ಲ ಅಂದಿದ್ರು, ಆಗಲಿಲ್ಲವೇ? ನಾನೂ ಮುಂದೊಂದು ದಿನ ಆಗಬಹುದು ಎಂದರು.
ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್
ಈ ಬಾರಿಯ ಚುನಾವಣೆಯಲ್ಲಿ 197 ಸಣ್ಣ ಜಾತಿಯವರಿಗೆ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಒಂದೂ ಟಿಕೆಟ್ ಕೊಟ್ಟಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಜವಾದ ನಾಯಕರು. ನಾನು ರಾಜಕೀಯ ಶುರು ಮಾಡುವಾಗಲೂ ಕಲ್ಲಹಳ್ಳಿಯ ಡಿ. ದೇವರಾಜ ಅರಸು ಸಮಾಧಿಗೆ ಪೂಜೆ ಸಲ್ಲಿಸಿದ್ದೆ. ಜೆಡಿಎಸ್ ಸೇರ್ಪಡೆ ಬಳಿಕವೂ ಆಶೀರ್ವಾದ ಪಡೆಯಲು ಬಂದಿದ್ದೇನೆ. ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡ ಸಿದ್ದರಾಮಯ್ಯ ಹಿಂದುಳಿದ ಸಮುದಾಯಗಳಿಗೆ ಏನೂ ಮಾಡಿಲ್ಲ. ಅಹಿಂದ ಆಟ ಈ ಬಾರಿಯ ಚುನಾವಣೆಯಲ್ಲಿ ಏನೂ ನಡೆಯಲ್ಲ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.