ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುವಂತೆ ವಿಧಾನಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌ಗೆ ಅವರ ಬೆಂಬಲಿಗರು ಸಲಹೆ ನೀಡಿದ್ದಾರೆ.
ಚಿತ್ರದುರ್ಗ (ಏ.10): ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುವಂತೆ ವಿಧಾನಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌ಗೆ ಅವರ ಬೆಂಬಲಿಗರು ಸಲಹೆ ನೀಡಿದ್ದಾರೆ. ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಭೆಗೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿ, ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸುವಂತೆ ಸಲಹೆ ನೀಡಿದರು. ಜೆಡಿಎಸ್‌ನಿಂದಲೇ ಸ್ಪರ್ಧಿಸಿ, ಚುನಾವಣೆಯಲ್ಲಿ ಜಯ ಸಾಧಿಸಿ ಎಂದು ಶುಭ ಕೋರಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಬೆಂಬಲಿಗರು, ರಘು ಆಚಾರ್‌ಗೆ ಕಾಂಗ್ರೆಸ್ ಪಕ್ಷ ನಂಬಿಕೆ ದ್ರೋಹ ಮಾಡಿದೆ.
ಸಣ್ಣ ಸಮುದಾಯವರನ್ನು ಕಡೆಗಣಿಸಿ ಸಾಮಾಜಿಕ ನ್ಯಾಯ ಎಂಬ ಪದಕ್ಕೆ ಕಾಂಗ್ರೆಸ್ ನಾಯಕರು ಅಪಚಾರ ಎಸಗಿದ್ದಾರೆ. ರಘು ಆಚಾರ್ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಾವು ಅವರನ್ನು ಗೆಲ್ಲಿಸುತ್ತೇವೆ ಎಂದರು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜೆಡಿಎಸ್‌ನಿಂದ ಸ್ಪರ್ಧಿಸಲು ಸಲಹೆ ನೀಡಿದರು. ನೀವು ನಮ್ಮ ಮನೆ ಮನೆ ಬಾಗಿಲಿಗೆ ನಲ್ಲಿ ಹಾಕಿಸಿ ನೀರು ಕೊಟ್ಟಿದ್ದೀರಿ, ನಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದೀರಿ ಎಂದು ಕೃತಜ್ಞತೆಯ ಮಾತುಗಳನ್ನಾಡಿದರು.
ಸೋಲುತ್ತೇವೆಂದು ದಿಲ್ಲಿ ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ: ಡಿ.ಕೆ.ಶಿವಕುಮಾರ್
ರಾಜಕಾರಣ ನಿಂತ ನೀರಲ್ಲ: ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಘು ಆಚಾರ್, ರಾಜಕಾರಣ ನಿಂತ ನೀರಲ್ಲ. ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ, ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ರೈತರಿಗೆ, ಬಡವರಿಗೆ ಸಹಾಯ ಮಾಡಿದಾಗಲೂ ನಾನು ಮತ ಕೇಳಿಲ್ಲ, ದುಡ್ಡು ಕೊಟ್ಟರೆ ಜನರು ಮತ ಹಾಕುತ್ತಾರೆ ಎಂಬುದು ಸುಳ್ಳು. ಜನರು ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತಾರೆ ಎಂದರು. ಚಿತ್ರದುರ್ಗದ ಜನರು ಸ್ವಾಭಿಮಾನಿಗಳು. ಇದು ದುರ್ಗದ ಜನರ ಸ್ವಾಭಿಮಾನದ ಪ್ರಶ್ನೆ, ನಾನು ಪ್ರಾಮಾಣಿಕವಾದ ರಾಜಕಾರಣ ಮಾಡಲು ಬಂದಿದ್ದೇನೆ, ದುಡ್ಡು ಮಾಡಲು ಬಂದಿಲ್ಲ, ಹಸಿದವರ, ಬಡವರ ಪರ ನಿಲ್ಲುತ್ತೇನೆ. ಜಾತಿ ರಾಜಕಾರಣ ಮಾಡುವುದಿಲ್ಲ, 5 ವರ್ಷದ ಹಿಂದೆ 50 ಸಾವಿರ ಮತ ಹಾಕಿದ ಜನರನ್ನು ಬಿಟ್ಟು ಓಡಿಹೋದವರು,
ಈಗ ಜಾತಿ ಹೆಸರಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ ಎಂದು ಪರೋಕ್ಷವಾಗಿ ವಿರೇಂದ್ರ ಪಪ್ಪಿ ಮೇಲೆ ಹರಿಹಾಯ್ದರು. ನಾನು ಇದೇ ಊರಲ್ಲಿ ಇದ್ದೇನೆ. ಜನರ ನಿರಂತರ ಸಂಪರ್ಕದಲ್ಲಿದ್ದೇನೆ. ನನ್ನ ಜೊತೆ ಜನರಿದ್ದಾರೆ. ಅವರ ಬಳಿ ದುಡ್ಡಿದೆ. ಅವರ ಅಕೌಂಚ್ ಬ್ಯಾಂಕ್‌ನಲ್ಲಿದ್ದರೆ ನನ್ನ ಅಕೌಂಚ್ ದೇವರ ಬಳಿ ಇದೆ. ಚಿತ್ರದುರ್ಗದಲ್ಲಿ ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದರ ಪಟ್ಟಿಕೊಡುತ್ತೇನೆ. ಧಮ್ ಇದ್ದರೆ ನನ್ನ ಎದುರಾಳಿಯಾಗಿ ನನಗೆ ಟಿಕೆಟ್ ತಪ್ಪಿಸಿದ ಮಹಾನುಭಾವನೇ ಬಂದು ನಿಲ್ಲಲಿ. ನಾನು ಅತ್ಯಧಿಕ ಮತಗಳಿಂದ ಗೆದ್ದು ತೋರಿಸುತ್ತೇನೆ.
ಸಿದ್ದರಾಮಯ್ಯ ವಿರುದ್ಧ ಸೋಮಣ್ಣ, ಡಿಕೆಶಿ ವಿರುದ್ಧ ಅಶೋಕ್ ಸ್ಪರ್ಧೆ?: ಬಿಜೆಪಿ ಸಭೆಯಲ್ಲಿ ಗಂಭೀರ ಚರ್ಚೆ
ಈ ಬಾರಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವಂತಹ ಪರಿಸ್ಥಿತಿ ಮುಂದೆ ನಿರ್ಮಾಣವಾಗಲಿದೆ ಎಂದು ಡಿಕೆಶಿ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಸವಾಲು ಹಾಕಿದರು. ಚಿತ್ರದುರ್ಗ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯಲ್ಲಿ ರಘು ಆಚಾರ್ ಅವರಿಗೆ ಕಂಬಳಿ ಹೊದಿಸಿ ಗೌರವಿಸಲಾಯಿತು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.