ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸದೆ ಆರ್ಥಿಕ ಶಿಸ್ತಿನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಅನ್ನರಾಮಯ್ಯ ಅಲ್ಲ, ಬದಲಿಗೆ ಸುಳ್ಳುರಾಮಯ್ಯ ಎಂದು ಅವರು ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದರು.

ದಾವಣಗೆರೆ (ಏ.4): ದಾಖಲೆಯ 16 ಬಜೆಟ್ ಮಂಡಿಸಿದ್ದಾಗಿ ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತು, ಅಭಿವೃದ್ಧಿಗೆ ಹಣ ಕೊಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಟಾನಗೊಳಿಸದೇ, ಆರ್ಥಿಕ ಶಿಸ್ತು ಪಾಲನೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ, ಅದೇ ಸುಳ್ಳಿನ ಪುಂಗಿ ಊದುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ. 

ಅನ್ನರಾಮಯ್ಯ ಅಲ್ಲ; ಸುಳ್ಳುರಾಮಯ್ಯ:

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳದ ಸಿದ್ದರಾಮಯ್ಯಗೆ ಸುಳ್ಳುರಾಮಯ್ಯನೆಂಬ ಬಿರುದು ಕೊಡಬೇಕಷ್ಟೇ ಎಂದರು. ಇಂದಿರಾ ಕಿಟ್ ಕೊಡುತ್ತೇವೆಂದರು? ಕಿಟ್ ಎಲ್ಲಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದೇ ಕೇಂದ್ರ ಸರ್ಕಾರ. ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎಂದು ವ್ಯಂಗ್ಯವಾಡಿದರು.

ತಮ್ಮನ್ನ ತಾವೇ ಹೊಗಳಿಕೊಳ್ತಾರೆ:

ಗ್ಯಾರಂಟಿಗಳ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಸುಳ್ಳಿನ ಪುಂಗಿ ಊದುತ್ತಲೇ ಇದ್ದಾರೆ. ಅಷ್ಟು ಸಾಲದ್ದಕ್ಕೆ ತಾವು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ ಅಂತಾ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನದು ಇನ್ನೇನಿದೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.