ದಾವಣಗೆರೆಯಲ್ಲಿ ನಡೆದ ರೋಡ್ ಶೋನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು 'ಸಾಲದ ರಾಮಯ್ಯ' ಎಂದು ಕರೆಯುವ ಬಿಜೆಪಿಗೆ 'ಅನ್ನದ ರಾಮಯ್ಯ' ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಮತ್ತು ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿವೆ ಎಂದು ಸಮರ್ಥಿಸಿಕೊಂಡರು.

ದಾವಣಗೆರೆ (ಏ.2): ‘ನಾನು ಸಾಲದ ರಾಮಯ್ಯ ಅಲ್ಲ. ಅನ್ನದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ. ನಾವು ಬಡವರ ಪರ ಇರುವವರು. ಎಲ್ಲ ವರ್ಗದ ಜನರ ಪರ ನಿಲ್ಲುವವರು ಎಂದರು.

ನಾನು ಅನ್ನದ ರಾಮಯ್ಯನೇ ಹೊರತು, ಸಾಲದ ರಾಮಯ್ಯ ಅಲ್ಲ. ಬಿಜೆಪಿ ಸರ್ಕಾರ ಮಾರ್ಚ್ 2023ರವರೆಗೆ ₹5,30,000 ಕೋಟಿಗೂ ಅಧಿಕ ಸಾಲ ಮಾಡಿದ್ದರೆ, ನಮ್ಮ ಸರ್ಕಾರ 4 ವರ್ಷದಲ್ಲಿ ₹2.56 ಲಕ್ಷ ಕೋಟಿ ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಅಧಿಕಾರದ ಅವಧಿಯಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಮೇಲೆ ₹53.11 ಲಕ್ಷ ಕೋಟಿ ಸಾಲ ಇತ್ತು. ಈಗ ₹218 ಲಕ್ಷ ಕೋಟಿಯಷ್ಟು ಸಾಲ ಇದೆ ಎಂದರು.

ಮೋದಿ ಆಳ್ವಿಕೆಯಲ್ಲಿನ ರುಪಾಯಿ ಮೌಲ್ಯ ಕುಸಿತದ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿ ಹೇಳಿದ್ದ ಅಚ್ಛೇ ದಿನಗಳು ಇಂದಿಗೂ ಬರಲೇ ಇಲ್ಲ. ರೈತರ ಆದಾಯ ದ್ವಿಗುಣ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಖಾತೆಗೆ ₹15 ಲಕ್ಷ ಹಣ ಅಂತೆಲ್ಲಾ ಭರವಸೆಗಳನ್ನು ನೀಡಿದ್ದರು. ಆದರೆ, ಅಂತಹ ಭರವಸೆಗಳನ್ನು ಇಂದಿಗೂ ಮೋದಿ ಸರ್ಕಾರ ಈಡೇರಿಸಿಲ್ಲ. ಆದರೆ, ಇದನ್ನು ಬಿಜೆಪಿ ನಾಯಕರು ಹೇಳುವುದಿಲ್ಲ. ರಾಜ್ಯದ ಬಿಜೆಪಿ ನಾಯಕರು ಮೋದಿ ಮುಂದೆ ನಿಲ್ಲಲು ಹೆದರುತ್ತಾರೆ. ಮೋದಿ ಮುಂದೆ ಇವರೆಲ್ಲಾ ಗಡಗಡ ಅಂತಾ ನಡುಗುತ್ತಾರೆ. ಬಿಜೆಪಿಯವರು ಸದನದ ಒಳಗಡೆ ಮಾತನಾಡುವುದಿಲ್ಲ. ಹೊರಗಡೆ ಮಾತನಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಅನ್ಯ ರಾಜ್ಯಗಳ ಬೆಲೆ ಏರಿಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮೆ ಇವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದೆ. ದೇಶದ ಜಿಡಿಪಿ 7.14ರಷ್ಟು ಇದ್ದರೆ, ರಾಜ್ಯದ ಜಿಡಿಪಿ 8.1ರಷ್ಟು ಇದೆ. ನಮ್ಮ ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಈ ಸಲ 9.4ರಷ್ಟು ಹೆಚ್ಚಾಗಿದೆ. ಕೇಂದ್ರದ ಬಜೆಟ್‌ಗಿಂತ ಕರ್ನಾಟಕ ಬಜೆಟ್ ಉತ್ತಮವಾಗಿದೆ. ರಾಜ್ಯವು ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶಕ್ಕೆ 2ನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲೂ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ. ಹೀಗಿದ್ದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬಗಳು ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಯಡಿಯೂರಪ್ಪ, ದೇವೇಗೌಡರ ಕುಟುಂಬ ವರ್ಗದವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುವುದನ್ನು ಕಾಣಬಹುದು ಎಂದರು.

ಎರಡು ಕ್ಷೇತ್ರದಲ್ಲೂಕಾಂಗ್ರೆಸ್ ಗೆಲುವು

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಸಿನ ನೆರವಿಗೆ ಬಂದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿಗಳನ್ನು ವಿರೋಧಿಸುತ್ತಾರೆ. ಒಟ್ಟು ಗ್ಯಾರಂಟಿಗೆ ಸುಮಾರು 1,31,000 ಕೋಟಿ ರು.ಗಳನ್ನು ನಾವು ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ ಎಂದು ಅವರು ಹೇಳಿದರು.

ಗ್ಯಾರಂಟಿಗಳ ಮೂಲಕ ಸಮಾಜದ ವಿವಿಧ ಜಾತಿ, ಧರ್ಮ, ಭಾಷೆಗಳ ಬಡವರಿಗೆ, ಮಧ್ಯವರ್ತಿಗಳ ಹಾವಳಿಯಿಲ್ಲದೇ, ನೇರವಾಗಿ ಅವರ ಖಾತೆಗೆ ಆರ್ಥಿಕ ಲಾಭ ನೀಡಲಾಗುತ್ತಿದೆ. ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಖಜಾನೆ ಖಾಲಿ ಆಗುತ್ತದೆಂದು ಟೀಕಿಸುತ್ತಾರೆ. ಆದರೆ, ಜನರ ಖಾತೆಗೆ ನೇರ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ ಎಂದು ಅವರು ಹೇಳಿದರು.