ಜಾತಿ ಗಣತಿ ಸಂಬಂಧ ರಾಜ್ಯ ಸರ್ಕಾರ ಮತ್ತೆ ಆತುರಾತುರ ನಿರ್ಧಾರ ತೆಗೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು (ಜು.25): ಜಾತಿ ಗಣತಿ ಸಂಬಂಧ ರಾಜ್ಯ ಸರ್ಕಾರ ಮತ್ತೆ ಆತುರಾತುರ ನಿರ್ಧಾರ ತೆಗೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಹೊಸ ಗಣತಿ ಮಾಡಿಸಲು ನಿರ್ಧರಿಸಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥವಾಯಿತು ಎಂದರು. ಸಿದ್ದರಾಮಯ್ಯ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಈ ಹಿಂದಿನ ಜಾತಿ ಗಣತಿ ಬಿಡುಗಡೆಗೆ ಹತ್ತು ವರ್ಷವಾಗಿದೆ.

ಆದರೆ ಈಗ ಮಾಡಿದ ಒಳಮೀಸಲು ಸಮೀಕ್ಷೆ ಕೇವಲ 15 ದಿನಗಳಲ್ಲಿ ಮುಗಿದಿದೆ. ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲ ಕಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ತಂದು ಬೇಳೆ ಬೇಯಿಸಿಕೊಳ್ಳಲು ಅವರು ಈ ಹುನ್ನಾರ ಮಾಡಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಮರಳಿ ಜಾತಿ ಗಣತಿ ಮಾಡಲಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ. ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಸಾಕು ಎಂದರು.

ಸರ್ಕಾರ ಗಾಢ ನಿದ್ರೆಯಲ್ಲಿದೆ: ಅತಿವೃಷ್ಟಿಯಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರೆ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕಾಫಿತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡ ಭಾಗದಲ್ಲಿ ಮೇ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶವಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಆದರೆ, ಇದುವರೆಗೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುವ ಕೆಲಸವನ್ನೇ ಮಾಡಿಲ್ಲ.

ಇನ್ನೂ ರಾಜ್ಯ ಸರ್ಕಾರ ಗಾಢನಿದ್ರೆಯಲ್ಲಿದ್ದು, ಎಚ್ಚರಿಸುವ ಕೆಲಸ ಮಾಡುವ ಉದ್ದೇಶದಿಂದ ತಾಲೂಕಿಗೆ ಭೇಟಿ ನೀಡಿದ್ದೇನೆ. ಕಾಫಿ ಬೆಳೆ ಶೇ. 35 ರಷ್ಟು ಉದುರಿದೆ. ಅಡಿಕೆ ಶೇ. 50 ರಷ್ಟು ನಾಶವಾಗಿದೆ. ಮೆಣಸು ಬೆಳೆ ಸಹ ಶೇ 20 ರಷ್ಟು ನೆಲ ಸೇರಿದ್ದು, ಅಂದಾಜು ಆರನೂರರಿಂದ ಏಳುನೂರು ಕೋಟಿಯಷ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಗಳು ಹಾನಿಗೀಡಾಗಿರುವ ತೋಟಗಳಿಗೆ ಭೇಟಿ ನೀಡಿ ಹಾನಿಗೀಡಾಗಿರುವ ಬೆಳೆಯ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಪರಿಹಾರ ಹಾಗೂ ಪರ್ಯಾಯ ಮಾರ್ಗಗಳನ್ನು ಬೆಳೆಗಾರರಿಗೆ ಸೂಚಿಸ ಬೇಕಿದೆ ಎಂದು ಆಗ್ರಹಿಸಿದರು.

ಮಾವು ಬೆಲೆ ನೆಲಕಚ್ಚಿದ ವೇಳೆಯೂ ಸರ್ಕಾರ ಗಾಢ ನಿದ್ರೆಯಲ್ಲಿತ್ತು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ ನಂತರ ರಾಜ್ಯ ಸರ್ಕಾರ ನಿದ್ರೆಯಿಂದ ಎಚ್ಚೆತ್ತು ಬೆಂಬಲ ಬೆಲೆ ಘೋಷಿಸಿದೆ. ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಆಗಮಿಸಬೇಕು ಎಂದಾದರೆ ಹಾನಿಪ್ರಮಾಣದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ನೀಡಬೇಕು, ಆನಂತರ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿಸುವ ಬಗ್ಗೆ ಮಾತನಾಡಬಹುದು ಎಂದರು.