ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಆರ್.ಅಶೋಕ್ ಯಾರು? ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿರುಗೇಟು ನೀಡಿದ್ದಾರೆ.

ಹಾಸನ (ಜು.05): ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಆರ್.ಅಶೋಕ್ ಯಾರು? ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿರುಗೇಟು ನೀಡಿದ್ದಾರೆ. ಸಿಎಂ ಹುದ್ದೆ ಖಾಲಿ ಇಲ್ಲ. ಯಾರೋ ಹೇಳಿದರು ಅಂದ ಮಾತ್ರಕ್ಕೆ ಸಿಎಂ ಬದಲಾಗುವುದಿಲ್ಲ. ಆ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ.

ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್ ಯಾರು? ಎಂದು ಕುಟುಕಿದರು. ಟ್ರಾನ್ಸ್‌ಫಾರ್ಮರ್‌ಗೆ ಹಣ ಕಟ್ಟಿ ಅರ್ಜಿ ಹಾಕಿದ್ದರೂ, ಸಕಾಲಕ್ಕೆ ನೀಡುತ್ತಿಲ್ಲ ಎಂಬ ರೈತರ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂಧನ ಇಲಾಖೆಯಲ್ಲಿ ಎಲ್ಲ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿವೆ. ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಕರೆಂಟೇ ಇಲ್ಲದಾಗ ಟೀಸಿ ನೀಡಿದರೆ ಏನು ಪ್ರಯೋಜನ? ನಮ್ಮ ಅಧಿಕಾರಿಗಳು ಎಲ್ಲಿಗೆ ಎಷ್ಟು ಟೀಸಿ ಬೇಕು ಎಂಬುದನ್ನು ಪರಿಶೀಲಿಸಿ ಹಂಚಿಕೆ ಮಾಡಲಿದ್ದಾರೆ ಎಂದರು.

ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕು ಇಲ್ಲ: ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಯಾವ ಕಿಕ್ ಬ್ಯಾಕ್ ನಡೆದಿಲ್ಲ. ಎಲ್ಲರಿಗೂ ಎಲ್ಲದರ ವಿವರಣೆ ಕೊಟ್ಟಿದ್ದೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು. ಸ್ಮಾರ್ಟ್ ಮೀಟರ್ ಬಗ್ಗೆ ಬಿಜೆಪಿ ಆರೋಪ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕು ಇಲ್ಲ. ಅವರೇನು ಅದರ ಬಗ್ಗೆ ಮಾತನಾಡುವುದು. ಅವರು ಎಲ್ಲಾ ವಿಚಾರದಲ್ಲೂ ಇಂತಹದೇ ಆರೋಪಗಳನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರೀಡ್ಜ್ ವಿಚಾರದಲ್ಲಿ ಇದೇ ರೀತಿ ಆರೋಪ ಮಾಡಿದರು. ಇವತ್ತು ಬ್ರಿಡ್ಜ್ ಆಗದೇ ಜನ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ನಾವು ನ್ಯಾಯಲದಲ್ಲಿ ಅದಕ್ಕೆ ಉತ್ತರ ಕೊಡುತ್ತೇವೆ. ಅವರು ಕೋರ್ಟ್ ಗೆ ಹೋಗಿದ್ದು ಒಳ್ಳೆಯದು ಬಿಡಿ. ಇನ್ನೂ ಯಾರು ಯಾರು ಎಲ್ಲೆಲ್ಲಿಗೆ ದೂರು ಕೊಡುತ್ತಾರೆ ಕೊಡಲಿ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ ಎಂದರು. ಡಿ.ಕೆ.ರವಿ ಕೇಸ್‌ನಲ್ಲಿ ನನ್ನ ಮೇಲೆ ಇಂತಹ ಆರೋಪ ಮಾಡಿದ್ದರು. ಆಮೇಲೆ ಸಿಬಿಐ ರಿಪೋರ್ಟ್ ನಲ್ಲಿ ಏನು ವರದಿ ಬಂತು ಹೇಳಿ. ನನ್ನ ಪಾತ್ರವೇ ಇಲ್ಲ ಎಂಬುದು ಬಂತು. ನನ್ನನ್ನ ವಿಚಾರಣೆಗೆ ಕರೆಯಲೇ ಇಲ್ಲ.

ಈಗ ಬಂದಿರುವ ಆರೋಪ‌ ಕೂಡ ಅಂತಹದೆ. ಪ್ರತಿ ಬಾರಿ ಬಿಜೆಪಿ‌ ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತ್ತೆ ಗೊತ್ತಿಲ್ಲ ಎಂದರು. ನಾನೇನು ಸಾಫ್ಟ್ ಲೀಡರ್ ಅಲ್ಲ. ಭಾಷೆಯನ್ನ ಸೌಜನ್ಯವಾಗಿಡುತ್ತೇನೆ ಅಷ್ಟೇ. ನಾನು ಯೂಥ್ ಕಾಂಡ ಅಧ್ಯಕ್ಷನಾಗಿದ್ದವನು. ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಸಾಫ್ಟ್ ಆಗಿದ್ದರೆ ಇವೆಲ್ಲಾ ಆಗುತ್ತಿತ್ತಾ ಎಂದು ಅವರು ಪ್ರಶ್ನಿಸಿದರು.