ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದು ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಅಲ್ಲ. ಈಗಾಗಲೇ ಬ್ರೇಕ್‌ ಆಗಿರುವ ಮೀಟಿಂಗ್‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ನ.30): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದು ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಅಲ್ಲ. ಈಗಾಗಲೇ ಬ್ರೇಕ್‌ ಆಗಿರುವ ಮೀಟಿಂಗ್‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಈ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು ಬಿಟ್ಟು ಬೇರೇನೂ ಆಗಲ್ಲ. ಸಿಎಂ ಪದವಿ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷ ಎಂದು ಮಾತುಕತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳಿದ್ದಾರೆ. ಆರು ಜನರ ಮಧ್ಯೆ ಈ ಒಪ್ಪಂದ ಆಗಿದೆ ಎಂದಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಧಂ ಇದ್ದರೆ ಈ ಒಪ್ಪಂದ ಘೋಷಿಸಬೇಕಿತ್ತು. ಆದರೆ, ಅದು ದುರ್ಬಲ ಹೈಕಮಾಂಡ್‌. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಫಾರಿನ್‌ ಟೂರ್‌ ಹೋಗಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರಿಗೆ ಜವಾಬ್ದಾರಿ ಇಲ್ಲ. ಕಾಂಗ್ರೆಸ್‌ ಒಂದು ಕುಟುಂಬದ ಪಕ್ಷ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲಾ ಪತ್ತೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮದು ಭದ್ರ ಮತ್ತು ಸುಭದ್ರ ಸರ್ಕಾರ ಎಂದು ಹೇಳಿಕೆ ಕೊಟ್ಟಿದ್ದರು. ಈಗ ಅವರೇ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿರುವುದನ್ನೇ ಈ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸದರವಾಗಿ ತೆಗೆದುಕೊಂಡು ಸವಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಜೈಲುಗಳು ವೈನ್‌ ಫ್ಯಾಕ್ಟರಿ, ಬಾರ್‌ಗಳಾಗಿವೆ. ಈ ಸರ್ಕಾರ ಸತ್ತು ಹೋಗಿದೆ.

ಒದ್ದು ಅಧಿಕಾರ ಕಿತ್ತುಕೊಳ್ಳುವ ಸಮಯ ಕಳೆಯಿತು: ಒದ್ದು ಅಧಿಕಾರ ಕಿತ್ತುಕೊಳ್ಳುವ ಶಕ್ತಿ ಡಿ.ಕೆ.ಶಿವಕುಮಾರ್‌ ಕೈಯಲ್ಲಿ ಇಲ್ಲ. ಆ ಸಮಯ ಆಗಿ ಹೋಯಿತು. ಎರಡು ವರ್ಷ ಕಳೆದು ಆಯಿತು. ಈಗ ಅವರು ದೇವರ ಮೊರೆ ಹೋಗುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲ ರೆಸಾರ್ಟ್‌ಗಳಲ್ಲಿ ಕಾಂಗ್ರೆಸ್‌ ಶಾಸಕರು ಠಿಕಾಣಿ ಹೂಡಿದ್ದಾರೆ. ಕೆಲವರು ಸಿದ್ಧರಾಮಯ್ಯ ಮುಂದುವರೆಯಬೇಕು ಎಂದರೆ, ಮತ್ತೆ ಕೆಲವರು ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂದು ಸಭೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದು ಸಿಎಂ ಸ್ಥಾನ ಬಿಟ್ಟು ಕೊಡುವುದು ಕಷ್ಟ

ಸಿದ್ದರಾಮಯ್ಯ ಎಲ್ಲ ಪಕ್ಷಗಳನ್ನು ನೋಡಿದ್ದಾರೆ. ಅವರಿಗೆ ಅಧಿಕಾರದ ಅಗಾಧ ಅನುಭವವಿದೆ. ಅವರು ಸಿಎಂ ಸ್ಥಾನ ಬಿಟ್ಟು ಕೊಡುವುದು ಕಷ್ಟ. ಇಬ್ಬರ ನಡುವೆ ಟ್ವಿಟರ್‌ ವಾರ್‌ ನಡೆಯುತ್ತಿದೆ. ಇಬ್ಬರ ನಡುವೆ ಮಾತುಕತೆ ಬ್ರೇಕ್‌ ಆಗಿರುವುದರಿಂದ ಚರ್ಚೆ ದೆಹಲಿಗೆ ಶಿಫ್ಟ್‌ ಆಗಲಿದೆ. ಈ ಸರ್ಕಾರ ಜನ ವಿರೋಧಿ ಸರ್ಕಾರ. ಕಳೆದ ಒಂದು ವರ್ಷದಿಂದ ಏನೂ ಮಾಡಿಲ್ಲ. ಮೊದಲು ಈ ಸರ್ಕಾರ ತೊಲಗಲಿ ಎಂದು ಜನ ಕಾಯುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಆರ್‌.ಅಶೋಕ್‌ ಪ್ರತಿಕ್ರಿಯಿಸಿದರು.