ಸಿಎಂ ಮತ್ತು ಡಿಸಿಎಂ ನಡುವೆ ಕುರ್ಚಿ ಕಿತ್ತಾಟ ಘನಘೋರ ಪರಿಸ್ಥಿತಿ ತಲುಪಿದ್ದು, ಇಂದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ (ನ.30): ಸಿಎಂ ಮತ್ತು ಡಿಸಿಎಂ ನಡುವೆ ಕುರ್ಚಿ ಕಿತ್ತಾಟ ಘನಘೋರ ಪರಿಸ್ಥಿತಿ ತಲುಪಿದ್ದು, ಇಂದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಟಿಂಗ್‌ನಲ್ಲಿ ಹಳೆ ರಾಗ ಹೇಳಿದ್ದಾರೆ. ಹಾಡಿದ್ದ ಹಾಡೋ ಕಿಸಬಾಯಿ ದಾಸ ಗಾದೆ ಮಾತಿನಂತಾಗಿದೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರೈತರು ಬೀದಿಗೆ ಇಳಿದಿದ್ದಾರೆ. ಇವರು ಹೈ ಕಮಾಂಡ್ ಹೇಳಿದ ಹಾಗೆ ಹೇಳುತ್ತೇವೆ ಎಂದಿದ್ದಾರೆ ಹೊರತು, ರಾಜ್ಯದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿಲ್ಲ. ಡಿ.ಕೆ.ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ತಮ್ಮ ಪಟ್ಟನ್ನು ಸಡಿಲಿಸಿಲ್ಲ.
ಅದರ ಪರಿಣಾಮ ರಾಜ್ಯದ ಆಡಳಿತ ವ್ಯವಸ್ಥೆ ನನೆಗುದಿಗೆ ಬಿದ್ದಿದೆ. ಯಾರು ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ ಎಂದು ಟೀಕಿಸಿದರು. ರಾಜ್ಯದ ಆಡಳಿತ ಫ್ರೀ ಪಾರ್ ಆಲ್ ಆದಂತಾಗಿದೆ. ರಾಜ್ಯದ ಜನರ ಬೆಂಬಲವನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ಕಚ್ಚಾಟದಲ್ಲಿ ತೊಡಗಿದ್ದು, ಆರ್ಥಿಕ ಸದೃಢ ಕರ್ನಾಟಕ ಅಧೋಗತಿಯತ್ತ ಸಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಬದಲಾವಣೆ ಬಗ್ಗೆ ಹೇಳುತ್ತಲೆ ಇದ್ದಾರೆ. ದಲಿತ ಸಿಎಂ ಎಂದು ಬಿಜೆಪಿ ಅವರು ಎತ್ತಿಲ್ಲ. ಕಾಂಗ್ರೆಸ್‌ನವರೇ ಕೂಗು ಎಬ್ಬಿಸಿದರು. ಇವರು ಬಂದಾಗಿನಿಂದ ಸರ್ಕಾರ ಸ್ಥಿರ ಇಲ್ಲ. ಹಿಂದೆನೂ ಹಾಗೇ ಆಗಿದೆ, ಮುಂದೆ ಎರಡೂವರೆ ವರ್ಷವೂ ಹೀಗೆ ಆಗುತ್ತದೆ ಎಂದು ಭವಿಷ್ಯ ನುಡಿದರು.
ಅಂಬೇಡ್ಕರನ್ನು ಸೋಲಿಸಿ, ಗೆದ್ದಿದ್ದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಪಕ್ಷ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಜವಾಹರ್ ಲಾಲ್ ನೆಹರು ಅವರಿಂದ ರಾಜೀವ್ ಗಾಂಧಿವರೆಗೂ ಬಿ.ಆರ್.ಅಂಬೇಡ್ಕರ್ ಅವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ನಗರದ ಗೋಮಟೇಶ ವಿದ್ಯಾಪೀಠದಲ್ಲಿ ಶನಿವಾರ ಬಿಜೆಪಿ ವತಿಯಿಂದ ಸಂವಿಧಾನ ಜಾಗೃತಿಗಾಗಿ ಭೀಮನೆಡೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಹರು, ರಾಜೀನಾಮೆಯಿಂದ ಏನೂ ನಷ್ಟವಿಲ್ಲ ಎಂದಿದ್ದರು. ಅಂಬೇಡ್ಕರ ಅವರನ್ನು ಸೋಲಿಸಿ, ಗೆದ್ದವರು ಕಾಂಗ್ರೆಸ್ಸಿಗರು.
ರಾಹುಲ್ ಗಾಂಧಿಗೆ ಸಂವಿಧಾನದ ಬಗ್ಗೆ ಏನೂ ಗೊತ್ತಿಲ್ಲ. ಸಂವಿಧಾನ ರಚನೆಯಲ್ಲಿ ದೊಡ್ಡ ಕೊಡುಗೆ ನೀಡಿರುವ ಅಂಬೇಡ್ಕರ್‌ಗೆ ಕಾಂಗ್ರೆಸ್ಸಿಗರು ಅಪಮಾನ ಮಾಡಿದ್ದಾರೆ ಎಂದರು.ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದರು. ಕಾಂಗ್ರೆಸ್ ಸುಡುವ ಪಕ್ಷ, ಅದರಲ್ಲಿ ದಲಿತರು ಹೋಗಬಾರದು ಅಂತ ಅಂಬೇಡ್ಕರ್ ಹೇಳಿದ್ದರು. ಕೆಲವು ದಲಿತ ಮುಖಂಡರಿಗೆ ಕಾಂಗ್ರೆಸ್ ಭ್ರಮೆ ಹುಟ್ಟಿಸಿದೆ. ದಲಿತರು ಕಾಂಗ್ರೆಸ್ನಿಂದ ದೂರ ಇದ್ದಷ್ಟು ಒಳ್ಳೆಯದು. ಕಾಂಗ್ರೆಸ್ನವರು ಮೀಸಲಾತಿ ವಿರೋಧ ಮಾಡಿದ್ದರು. ಕಾಂಗ್ರೆಸ್ ಸದಾ ದಲಿತ ಸಮುದಾಯವನ್ನು ಕತ್ತಲಲ್ಲಿ ಇಟ್ಟಿದೆ. ದಲಿತರು ಜಾಗೃತರಾಗಿರಬೇಕು ಎಂದು ಹೇಳಿದರು.


