ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಗ್ಯಾರಂಟಿ ಕಾರ್ಯಕ್ರಮಗಳ ಕುರಿತು ಬರೆದಿರುವ ಋಣ ಸಂದಾಯ ಲೇಖನವನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಆರ್ಥಿಕ ತಜ್ಞರು ಶ್ಲಾಘಿಸಿ ಬರೆದಿರುವ ಲೇಖನ ಎಂಬಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ.

ವಿಧಾನಸಭೆ (ಮಾ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಗ್ಯಾರಂಟಿ ಕಾರ್ಯಕ್ರಮಗಳ ಕುರಿತು ಬರೆದಿರುವ ಋಣ ಸಂದಾಯ ಲೇಖನವನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಆರ್ಥಿಕ ತಜ್ಞರು ಶ್ಲಾಘಿಸಿ ಬರೆದಿರುವ ಲೇಖನ ಎಂಬಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಕೆಲಸ ಮತ್ತೊಂದಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದರು.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಬ್ಲಾಗ್‌ನಲ್ಲಿ ಆರ್ಥಿಕ ತಜ್ಞರೊಬ್ಬರು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಶ್ಲಾಘಿಸಿ ‘ಶೈನಿಂಗ್‌ ಲೈಟ್‌ ಇನ್‌ ದಿ ಡಾರ್ಕ್‌ನೆಸ್‌’ ಹಾಗೂ ‘ಎ ಬ್ಲ್ಯೂ ಪ್ರಿಂಟ್‌ ಫಾರ್‌ ದ ವರ್ಲ್ಡ್’ ಎಂದು ವ್ಯಾಖ್ಯಾನಿಸಿದ್ದರು. ಇದನ್ನು ಮುಂದಿಟ್ಟುಕೊಂಡು ಕರ್ನಾಟಕ ಮಾದರಿಯನ್ನು ಜಗತ್ತಿನ ಅನೇಕ ಅರ್ಥಶಾಸ್ತ್ರಜ್ಞರು ಅಧ್ಯಯನ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಂದ ಹೇಳಿಸಿದ್ದರು. ರಾಜ್ಯದ ಗ್ಯಾರಂಟಿಗಳನ್ನು ಆಕ್ಸ್‌ಫರ್ಡ್‌ ವಿವಿ ಆರ್ಥಿಕ ತಜ್ಞರು ಶ್ಲಾಘಿಸಿದ್ದಾರಾ? ಯಾರದು ಎಂದು ಹುಡುಕಾಡಿದೆ. ಯಾರೋ ವಿದೇಶಿ ಬಿಳಿಯರು ಬರೆದಿರಬಹುದು ಎಂದು ಪ್ರಾಮುಖ್ಯತೆ ನೀಡಿದ್ದೆ. 

ಆದರೆ ಆ ವ್ಯಕ್ತಿ ಆರ್ಥಿಕ ತಜ್ಞನಲ್ಲ. ಜೆಹೋಶ್ ಪಾಲ್‌ ಎಂಬ ಹೆಸರಿನ ಕಾನೂನು ಪದವೀಧರ. ಲೇಖನ ಪ್ರಕಟವಾಗಿದ್ದು ಆಕ್ಸ್‌ಫರ್ಡ್‌ ವಿವಿ ವೆಬ್‌ಸೈಟ್‌ನಲ್ಲಿ ಕೂಡ ಅಲ್ಲ. ಬದಲಿಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಹ್ಯೂಮನ್‌ ರೈಟ್ಸ್‌ನ ಬ್ಲಾಗ್‌ನಲ್ಲಿ. ಅಲ್ಲಿ ಯಾರು ಬೇಕಾದರೂ ಲೇಖನ ಬರೆಯಬಹುದು. ಅಂತಹ ಲೇಖನವನ್ನು ಇಟ್ಟುಕೊಂಡು ರಾಜ್ಯಪಾಲರಿಂದ ವಿಶ್ವಮಟ್ಟದ ಪದಕ ಪಡೆದಿರುವಂತೆ ಹೇಳಿಸಿದ್ದಾರೆ ಎಂದು ಟೀಕಿಸಿದರು. ಇನ್ನು ಆ ಆರ್ಥಿಕ ತಜ್ಞ ಎಲ್ಲಿಯವರು ಎಂದು ಹುಡುಕಾಡಿದರೆ, ಆತ ಈ ಅಂಕಣ ಪ್ರಕಟವಾದ ಸಮಯದಲ್ಲಿ ಅಂದರೆ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲೇ ವೇತನಕ್ಕಾಗಿ ಕೆಲಸಕ್ಕಿದ್ದರು. ಪ್ರಿಯಾಂಕ್‌ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅವರ ಕಚೇರಿಯಲ್ಲೂ ಕೆಲಸ ಮಾಡಿದ್ದರು. 

ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ: ಮಾಜಿ ಸಚಿವ ಬಿ.ಸಿ.ಪಾಟೀಲ್

ಸಿಎಂ ತಮ್ಮದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜೆಹೋಶ್‌ ಪಾಲ್‌ ಬರೆದಿರುವ ಲೇಖನದ ಬಗ್ಗೆ ರಾಜ್ಯಪಾಲರಿಂದ ಹೇಳಿಸಿದ್ದಾರೆ ಎಂದು ಜೆಹೋಶ್‌ ಪಾಲ್‌ ಅವರ ಫೋಟೋ ಹಾಗೂ ವ್ಯಕ್ತಿ ಪರಿಚಯದ ಹಾಳೆಯನ್ನು ಸದನದಲ್ಲಿ ಪ್ರದರ್ಶಿಸಿದರು. ಈ ವೇಳೆ ಪ್ರಿಯಾಂಕ್‌, ಬಿಳಿಯರು ಬರೆದರೆ ಮಾತ್ರ ಪ್ರಮುಖ ಲೇಖನ. ಕರಿಯರು ಬರೆದರೆ ಅಲ್ಲವೇ? ನಿಮ್ಮ ಮನಃಸ್ಥಿತಿ ಏನನ್ನು ತೋರುತ್ತದೆ? ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರವರು ಲೇಖನ ಬರೆದರೆ ತಪ್ಪೇನು ಎಂದು ಪ್ರಶ್ನಿಸಿದರು. ಈ ವೇಳೆ ಕೆಲ ಕಾಲ ಆರೋಪ-ಪ್ರತ್ಯಾರೋಪಗಳಿಂದ ಗದ್ದಲ ಸೃಷ್ಟಿಯಾಯಿತು.