ಮುಖ್ಯಮಂತ್ರಿ ಬೊಮ್ಮಾಯಿ ಏ.19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಸುದೀಪ್‌ ಸೇರಿ 10ಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ. 

ಹಾವೇರಿ (ಏ.19): ಮುಖ್ಯಮಂತ್ರಿ ಬೊಮ್ಮಾಯಿ ಏ.19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಸುದೀಪ್‌ ಸೇರಿ 10ಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ. ಇದು ಶಿಗ್ಗಾಂವಿ, ಹಾವೇರಿಯಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ಕಮಲ ಪಡೆಯಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ನಿರೀಕ್ಷೆಯಿದೆ. ಶಿಗ್ಗಾಂವಿ ಕ್ಷೇತ್ರದಿಂದ ಬೊಮ್ಮಾಯಿ 4ನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಏ.15ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಅವರು ಬುಧವಾರ ಶಿಗ್ಗಾಂವಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. 

ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳಷ್ಟೇ ಬಾಕಿಯಿದ್ದು, ಮಂಗಳವಾರ ರಾತ್ರಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಫೈನಲ್‌ ಮಾಡಿದೆ. ಮಹಮ್ಮದ್‌ ಸವಣೂರ್‌ಗೆ ಟಿಕೆಟ್‌ ಘೋಷಿಸಿದೆ. ಇತ್ತ ಮುಖ್ಯಮಂತ್ರಿ ಬೊಮ್ಮಾಯಿ ಕ್ಷೇತ್ರದಲ್ಲಿ ಬಿಜೆಪಿ ಬಿರುಗಾಳಿ ಎಬ್ಬಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೆ ಆಗಮಿಸುತ್ತಿರುವುದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಅಲ್ಲದೆ ನಟ ಕಿಚ್ಚ ಸುದೀಪ್‌ ಪಾಲ್ಗೊಳ್ಳುತ್ತಿರುವುದು ವಿಶೇಷ.

ಜೆಡಿಎಸ್‌ಗೆ ಪೂರ್ಣ ಬಹುಮತಕ್ಕೆ ಪ್ರಾರ್ಥಿಸಿ ನಿಖಿಲ್‌ ಕುಮಾರಸ್ವಾಮಿ ಟೆಂಪಲ್‌ ರನ್‌

ರೋಡ್‌ ಶೋ, ಸಮಾವೇಶ: ಮುಖ್ಯಮಂತ್ರಿಯೊಂದಿಗೆ ಜೆ.ಪಿ.ನಡ್ಡಾ ಬುಧವಾರ ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯಿಂದ ಹೊರಟು ಶಿಗ್ಗಾಂವಿಗೆ 10.50ಕ್ಕೆ ಆಗಮಿಸಲಿದ್ದಾರೆ. ಶಿಗ್ಗಾಂವಿ ಸಂತೆ ಮೈದಾನದಿಂದ ಭರ್ಜರಿ ರೋಡ್‌ ಶೋ ನಡೆಸಲಿರುವ ನಾಯಕರು, ಹಳೇ ಬಸ್‌ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣದ ವರೆಗೆ ಸಾಗಲಿದ್ದಾರೆ. ಅಲ್ಲಿ 12.15ರಿಂದ ಮಧ್ಯಾಹ್ನ 1.30ರ ವರೆಗೆ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 1.30ರಿಂದ 2ಗಂಟೆ ಅವಧಿಯಲ್ಲಿ ಶಿಗ್ಗಾಂವಿ ತಹಸೀಲ್ದಾರ್‌ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಸಿಎಂ ಪರ ಕಿಚ್ಚ ಸುದೀಪ್‌ ಪ್ರಚಾರ: ಬಿಜೆಪಿ ಪರ ಪ್ರಚಾರ ಮಾಡುವುದಾಗಿ ನಟ ಸುದೀಪ್‌ ಈ ಹಿಂದೆಯೇ ಘೋಷಣೆ ಮಾಡಿದ್ದರೂ ಈವರೆಗೆ ಎಲ್ಲೂ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಮುಖ್ಯಮಂತ್ರಿ ತವರು ಕ್ಷೇತ್ರದಿಂದಲೇ ಸುದೀಪ್‌ ಪ್ರಚಾರ ಆರಂಭಗೊಳ್ಳುತ್ತಿರುವುದು ವಿಶೇಷ. ರೋಡ್‌ ಶೋದಲ್ಲಿ ಹತ್ತಾರು ಸಾವಿರ ಜನ ಪಾಲ್ಗೊಳ್ಳಲಿದ್ದು, ಇಡೀ ಶಿಗ್ಗಾಂವಿ ಪಟ್ಟಣ ಕೇಸರಿಮಯವಾಗುವ ನಿರೀಕ್ಷೆಯಿದೆ. ನೆಚ್ಚಿನ ನಟನನ್ನು ನೋಡುವ ಕಾತರದಲ್ಲಿ ಯುವ ಪಡೆಯಿದೆ. ಶಿಗ್ಗಾಂವಿ ಅಖಾಡದಲ್ಲಿ ಕುಸ್ತಿಗೆ ರೆಡಿಯಾಗಿರುವ ಬೊಮ್ಮಾಯಿ ಆರಂಭದಲ್ಲೇ ಶಕ್ತಿ ಪ್ರದರ್ಶನದ ಮೂಲಕ ವಿಪಕ್ಷಗಳಿಗೆ ಎಚ್ಚರಿಕೆ ಸಂದೇಶ ನೀಡಲು ಹೊರಟಿದ್ದಾರೆ. 

ಮಂಡ್ಯದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧತೆ: ರಮ್ಯಾ ಹೆಸರು ಪರಾಮರ್ಶೆ

ಸ್ವತಃ ಸಿಎಂ ಕೂಡ ತಾವು ನಾಮಪತ್ರ ಸಲ್ಲಿಸಿದ ಬಳಿಕವೇ ಸುದೀಪ್‌ ಪ್ರಚಾರಕ್ಕೆ ಬರಲಿದ್ದಾರೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.