ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ ಎಂಬುದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾಗಿದೆ ಎಂದು ಪ್ರತಿಪಾದಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು, ರಾಜ್ಯ ಸರ್ಕಾರ ಈ ವರದಿಯನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು (ಮಾ.02): ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ ಎಂಬುದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾಗಿದೆ ಎಂದು ಪ್ರತಿಪಾದಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು, ರಾಜ್ಯ ಸರ್ಕಾರ ಈ ವರದಿಯನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ಪ್ರತ್ಯೇಕವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಎಫ್‌ಎಸ್ಎಲ್‌ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸಾಬೀತಾಗಿದೆ ಎಂದು ಹೇಳಿದರು.

ವಿಜಯೇಂದ್ರ ಮಾತನಾಡಿ, ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದ್ದು ಸತ್ಯ ಎಂಬುದಾಗಿ ಎಫ್‌ಎಸ್ಎಲ್ ವರದಿ ಶುಕ್ರವಾರ ಬೆಳಗ್ಗೆ ಬಂದಿದೆ. ಅದನ್ನು ಮುಚ್ಚಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಫ್‌ಎಸ್‌ಎಲ್‌ ವರದಿ ತಿದ್ದುಪಡಿ ಮಾಡಿ ಮತ್ತೊಂದು ಬೋಗಸ್ ವರದಿ ಸಿದ್ಧಪಡಿಸಲಾಗುತ್ತಿದೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಆ ವರದಿಯನ್ನು ತಿರುಚದೆ ಯಥಾವತ್ತಾಗಿ ಜನರ ಮುಂದಿಡಬೇಕು. ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬೇಕು ಎಂದು ಒತ್ತಾಯಿಸಿದರು. ಬೊಮ್ಮಾಯಿ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ ಎಂಬ ಮಾಹಿತಿ ಇದೆ. 

ನಾನು ದ್ವೇಷದ ರಾಜಕಾರಣ ಮಾಡೋಲ್ಲ, ಅದು ನನಗೆ ಗೊತ್ತಿಲ್ಲ: ಸಂಸದೆ ಸುಮಲತಾ

ಘೋಷಣೆ ಕೂಗಿದವರು ಭಯೋತ್ಪಾದಕರಿಗೆ ಸಹಕಾರ ನೀಡುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಸರ್ಕಾರ ಯಾವ ಕಾರಣಕ್ಕೆ ವರದಿ ಮುಚ್ಚಿಡಲು ಪ್ರಯತ್ನ ಮಾಡುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಶ್ರೀನಿವಾಸ್‌ ಪೂಜಾರಿ ಮಾತನಾಡಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸರ್ಕಾರದ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಇಷ್ಟಾದರೂ ತಪ್ಪಿತಸ್ಥರ ಬಂಧನ ನಡೆದಿಲ್ಲ. ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲ ಕೊಡುವ ಎಲ್ಲ ಕೆಲಸಗಳನ್ನು ಸಿದ್ದರಾಮಯ್ಯನವರು, ಗೃಹಸಚಿವರು ಮತ್ತು ಇಡೀ ಸಚಿವ ಸಂಪುಟ ಮಾಡುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.

ಭಾರತವನ್ನು ವಿಶ್ವದ 3ನೇ ಆರ್ಥಿಕ ರಾಷ್ಟ್ರವನ್ನಾಗಿಸಲು ಶ್ರಮಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದನ್ನು, ಪಾಕ್ ಪರ ಘೋಷಣೆ ಕೂಗಿರುವವರನ್ನು ರಕ್ಷಿಸುವ ಸಿದ್ದರಾಮಯ್ಯ ಅವರ ಸರ್ಕಾರದ ಕ್ರಮವನ್ನು ಖಂಡಿಸಿದ್ದೇವೆ. ಇದರ ವಿರುದ್ಧ ರಾಜ್ಯಪಾಲರ ಬಳಿ ತೆರಳಿ ನಿನ್ನೆ ದೂರು ಕೊಟ್ಟಿದ್ದೇವೆ. ರಾಜ್ಯಪಾಲರು ಬಹಳ ಸಹಾನುಭೂತಿಯಿಂದ ಮಾತುಗಳನ್ನು ಕೇಳಿದ್ದಾರೆ. ವಿಧಾನಸೌಧದಲ್ಲೇ ಭಾರತ ವಿರೋಧಿ ಘೋಷಣೆ ಕೂಗಿದ್ದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುವುದಾಗಿ ವಿಶ್ವಾಸದ ಮಾತನ್ನಾಡಿದ್ದು ನಮಗೆ ತೃಪ್ತಿ ತಂದಿದೆ ಎಂದು ವಿವರಿಸಿದರು.