ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ಮಾತಿನ ಸಮರವು ಟ್ವಿಟರ್‌ನಲ್ಲಿ ಮುಂದುವರೆದಿದೆ. ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ ಪ್ರತಾಪ್ ಸಿಂಹಗೆ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜು.7): ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ಮಾತಿನ ಸಮರ ಇನ್ನಷ್ಟು ತೀವ್ರವಾಗಿದೆ. ಆರೆಸ್ಸೆಸ್ ಬ್ಯಾನ್ ವಿಚಾರದಲ್ಲಿ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಪ್ರಿಯಾಂಕ್ ಖರ್ಗೆಗೆ ಖಡಕ್ ತಿರುಗೇಟು ನೀಡಿದ್ದ ಪ್ರತಾಪ್ ಸಿಂಹ, ಪ್ರಿಯಾಂಕ್ ಖರ್ಗೆಯ ಹೆಸರನ್ನೇ ಹಿಡಿದು ಜನ್ಮ ಜಾಲಾಡಿದ್ದರು.
ಈಗ ಪ್ರತಾಪ್ ಸಿಂಹ ಮಾತಿಗೆ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡುವ ತಿರುಗೇಟು ಕೊಟ್ಟಿದ್ದಾರೆ. ನರಿಗಳು ಸಿಂಹ ಅಂತಾ ಹೆಸರಿಟ್ಟುಕೊಂಡರೆ ಸಿಂಹ ಆಗಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

'ಔಟ್ ಡೇಟೆಡ್ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಸ್ವತಃ ಬಿಜೆಪಿಯಿಂದಲೇ ತಿರಸ್ಕೃತಗೊಂಡು ಬೆಲೆ ಕಳೆದುಕೊಂಡಿರುವ ಪ್ರತಾಪ್ ಸಿಂಹ ಎಂಬ ಔಟ್ ಡೇಟೆಡ್ ವ್ಯಕ್ತಿ ನನ್ನ ಬಗ್ಗೆ ಮಾತನಾಡುವ ಮೂಲಕ ಮಾರ್ಕೆಟ್ ಕುದುರಿಸಿಕೊಳ್ಳುವ ತವಕದಲ್ಲಿದ್ದಾರೆ. ವಿಜಯೇಂದ್ರ ಹಠವೋ ಬಣದಲ್ಲಿರುವ ಪ್ರತಾಪ್ ಸಿಂಹ ಮೊದಲು ತಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ, ತಮ್ಮ ಸಾಮರ್ಥ್ಯ ನಿರೂಪಿಸಿದ ನಂತರ ನನ್ನ ಬಗ್ಗೆ ಗಮನ ಕೊಡಲಿ.
ಪ್ರತಾಪ್ ಸಿಂಹ ಅವರೇ, ಬಿಜೆಪಿ ಪಕ್ಷ ನಿಮಗೆ ಟಿಕೆಟ್ ನೀಡದೆ ಮೂಲೆಗೆ ತಳ್ಳಿದ್ದೇಕೆ? ಸಾಮರ್ಥ್ಯವಿಲ್ಲದ್ದಕ್ಕಾ? ಟಿಕೆಟ್ ಅಷ್ಟೇ ಅಲ್ಲ, ಪಕ್ಷದಲ್ಲೂ ಯಾವುದೇ ಪ್ರಮುಖ ಹುದ್ದೆ ನೀಡದೆ ನಿರ್ಲಕ್ಷಿಸಿರುವುದೇಕೆ? ಅರ್ಹತೆ ಇಲ್ಲದ್ದಕ್ಕಾ? ನರಿಗಳು ಸಿಂಹ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಸಿಂಹ ಆಗಲು ಸಾಧ್ಯವಿಲ್ಲ. ನನ್ನ ಬಗ್ಗೆ ಮಾತನಾಡಲು ಗಂಭೀರ ವಿಷಯಗಳಿಲ್ಲದೆ ನನ್ನ ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, 'Outdated ಇರಬಹುದು, ಆದರೆ ಪ್ರತಾಪ್ ಅವರಿಗೆ ನಿಮ್ಮನ್ನು ಪ್ರಶ್ನಿಸುವ ಹಕ್ಕು ಇದೆ, ನೀವು ಅವರ ಪ್ರಶ್ನೆಗೆ ಉತ್ತರ ಕೊಡುವ ಬದಲು personal attack ಮಾಡಿ ನಿಮ್ಮ ಮರ್ಯಾದೆ ಕಳೆದು ಹೋಗಿದೆ...ನೀವು ಒಬ್ಬ ಮಂತ್ರಿ, ನಿಮ್ಮ ಸಾಧನೆ ಹೇಳಿ, ಖರ್ಗೆ ಹೆಸರು ಬಿಟ್ರೆ, ನಿಮ್ಮ ಸಾಧನೆ ಶೂನ್ಯ...' ಎಂದು ಬರೆದಿದ್ದಾರೆ.
'ಪ್ರತಾಪ್ ಸಿಂಹ ಕೊಟ್ಟ ತಿರುಗೇಟು ನಿಮಗೆ ಸರಿಯಾಗಿ ತಟ್ಟಿದೆ. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರವಿಲ್ಲದೆ ಅವರ ಮೇಲೆ ವೈಯಕ್ತಿಕವಾಗಿ ವಾಗ್ದಾಳಿಗೆ ಮುಂದಾಗಿದ್ದೀರಾ. ನಿಮ್ಮ ನೋವು ಅರ್ಥವಾಗುತ್ತೆ ಸಾರ್' ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದಕ್ಕೂ ಮುನ್ನ ಪ್ರಿಯಾಂಕ್ ಖರ್ಗೆ ಕುರಿತಾಗಿ ಮಾತನಾಡಿದ್ದಸ ಪ್ರತಾಪ್ ಸಿಂಹ, 'ಅಯ್ಯೋ ಪ್ರಿಯಾಂಕಾ, ನೀವು ಯಾರ ಮಗಳ ಹೆಸರಿಟ್ಟುಕೊಂಡಿದ್ದೀರಾ ಆ ರಾಜೀವ್ ಗಾಂಧಿ ಕೈಯಲ್ಲೇ RSS ಬ್ಯಾನ್ ಮಾಡಲಾಗಲಿಲ್ಲ, ರಾಜೀವ್ ಗಾಂಧಿಯನ್ನು ಹೆತ್ತ ಇಂದಿರಾ ಗಾಂಧಿ 16 ವರ್ಷ ಪ್ರಧಾನಿಯಾಗಿ ದೇಶವಾಳಿದರೂ RSS ಅನ್ನು ಬ್ಯಾನ್ ಮಾಡಿ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲ, ಆಕೆಯ ತಂದೆ ನೆಹರು 17 ವರ್ಷಗಳ ಕಾರ್ಯಕಾಲದಲ್ಲಿ ಒಮ್ಮೆ ಬ್ಯಾನ್ ಮಾಡಿದರೂ ಅದೇ ನೆಹರು ಚೀನಾ ಯುದ್ಧದ ನಂತರ RSS ಅನ್ನು ಶ್ಲಾಘನೆ ಮಾಡಬೇಕಾಗಿ ಬಂತು. ಅವರಿಂದಲೇ ಆಗದ ಕೆಲಸವನ್ನು ನೆಹರು ಮರಿಮಗಳ ಹೆಸರಿಟ್ಟುಕೊಂಡಿರುವ ನಿಮ್ಮಿಂದ ಮಾಡಲು ಸಾಧ್ಯವೇನ್ರಿ ಪ್ರಿಯಾಂಕ?' ಎಂದು ಪ್ರಶ್ನೆ ಮಾಡಿದ್ದರು.

