ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ 4 ತಿಂಗಳಲ್ಲಿ ಬರೋಬ್ಬರಿ 8 ಬಾರಿ ಆಗಮಿಸಿದ್ದು, ಇನ್ನೂ 7 ಬಾರಿ ಆಗಮಿಸುವ ಸಾಧ್ಯತೆಯಿದೆ.
ಬೆಂಗಳೂರು (ಏ.25): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ 4 ತಿಂಗಳಲ್ಲಿ ಬರೋಬ್ಬರಿ 8 ಬಾರಿ ಆಗಮಿಸಿದ್ದು, ಇನ್ನೂ 7 ಬಾರಿ ಆಗಮಿಸುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ನಾಯಕರ ದಕ್ಷ ಯಜ್ಞವನ್ನು ಆರಂಭಿಸಲಾಗಿದೆ. ರಾಜ್ಯದ ದಶದಿಕ್ಕುಗಳಲ್ಲೂ ಕಮಲ ನಾಯಕರು ಸಂಚಾರ ಮಾಡುತ್ತಿದ್ದು, ಇದಕ್ಕೆ ಕೇಂದ್ರದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 105 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ನಾಯಕರ ಸಂಚಾರ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು 6 ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.
ಶಿವಮೊಗ್ಗದಲ್ಲಿ 2ನೇ ತಲೆಮಾರಿನ ರಾಜಕಾರಣ: ಮಾಜಿಗಳ ಪುತ್ರರದ್ದೇ ರಣಕಣ
ಇನ್ನು ಮುಂದಿನ ದಿನಗಳಲ್ಲಿ ಮೇ 10ಕ್ಕಿಂತಲೂ ಮುಂಚೆ ಏಳು ಬಾರಿ ಆಗಮಿಸಲಿದ್ದು, ಒಟ್ಟು 23 ಕ್ಷೇತ್ರಗಳಲ್ಲಿ ಮೋದಿ ಸಂಚಾರ ಮಾಡಲಿದ್ದು, (Prime Minister Narendra Modi Travel Schedule) ಅಬ್ಬರದ ಭಾಷಣದ ಮೂಲಕ ಮತ ಸೆಳೆಯಲು ತಂತ್ರಗಾರಿಕೆ ಹೂಡಿದ್ದಾರೆ. ಹಾಗಾದರೆ, ಇಲ್ಲಿಯ ತನಕ ಮೋದಿ ಕರ್ನಾಟಕಕ್ಕೆ ಎಷ್ಟು ಬಾರಿ ಬಂದಿದ್ದಾರೆ? ಎಂದು ನೋಡುವುದಾದರೆ, 2015 ರಿಂದ 2023ರ ಅವಧಿಯಲ್ಲಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 33 ಬಾರಿ ಬಂದು ಹೋಗಿದ್ದಾರೆ. ಆದರೆ, ಈ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಷ್ಟು ಬಾರಿ ಬಂದಿದ್ದಾರೆ ಎನ್ನುವುದೇ ರೋಚಕವಾಗಿದೆ.
ಚುನಾವಣೆ ಹೊತ್ತಲ್ಲಿ ರಾಜ್ಯಕ್ಕೆ ಎಷ್ಟು ಬಾರಿ ಬಂದಿದ್ದಾರೆ ? ಶೇಕಡ 25 ರಷ್ಟು ಭೇಟಿಗಳು ಚುನಾವಣೆ ಸಲುವಾಗಿ ರಾಜ್ಯಕ್ಕೆ ನರೇಂದ್ರ ಮೋದಿ ಆಗಮಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 8 ಬಾರಿ ಕರ್ನಾಟಕ ಕ್ಕೆ ಮೋದಿ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ 2018ರ ವಿಧಾನಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ಅವರು ಕೇವಲ 7 ಬಾರಿ ಬಂದು ಹೋಗಿದ್ದರು. ಇದನ್ನು ಬಿಟ್ಟರೆ, 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 6 ಬಾರಿ ಬಂದು ಹೋಗಿದ್ದಾರೆ. ಆದರೆ, 2023ರ ವಿಧಾನಸಭಾ ಚುನಾವಣೆಯ (Karnataka Assembly Election 2023) ಅವಧಿಯಲ್ಲಿ ಈಗಾಗಲೇ 8 ಬಾರಿ ಬಂದಿದ್ದು, ಇನ್ನೂ ಎರಡು ಬಾರಿ ಭೇಟಿ ಮಾಡಲಿದ್ದಾರೆ.
- ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ ವಿವರ ಇಲ್ಲಿದೆ ನೋಡಿ:
- - ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮೋದಿಯವರು ಕರ್ನಾಟಕಕ್ಕೆ ಬರೋಬ್ಬರಿ 33 ಬಾರಿ ಭೇಟಿ ಕೊಟ್ಟಿದ್ದಾರೆ
- - ಕೋವಿಡ್ ಸಂದರ್ಭದಲ್ಲಿ ಮಾರ್ಚ್ 2020 ರಿಂದ ಜೂನ್ 2021 ನಡುವೆ ಒಮ್ಮೆಯೂ ಕರ್ನಾಟಕ ಕ್ಕೆ ಭೇಟಿ ಕೊಟ್ಟಿಲ್ಲ
- - 2020ರ ಜನವರಿ 2 ಮತ್ತು 2022ರ ಜೂ.20ರಂದು ಭೇಟಿ ಮಾಡಿದ ಎರಡೂ ಭೇಟಿಗಳ ನಡುವೆ 29 ತಿಂಗಳು ಅಂತರ ಇದೆ.
- - ಆದರೆ, ಚುನಾವಣೆ ಹಿನ್ನೆಲೆಯಲ್ಲಿ 2023 ರಲ್ಲಿ 8 ಬಾರಿ ಭೇಟಿ ಮಾಡಿದ್ದಾರೆ
Karnataka Election: ಬಿಜೆಪಿಯ ತ್ರಿಮೂರ್ತಿಗಳಿಂದ ಬದಲಾಗುತ್ತಾ ಮತ ಲೆಕ್ಕ ?
- 2015ರಿಂದ 2023ರ ಅವಧಿಯಲ್ಲಿ ಭೇಟಿ ಮಾಡಿದ ವಿವರ
- 2015 - 3 ಬಾರಿ (ಫೆಬ್ರವರಿ 18, ಏಪ್ರಿಲ್ 2 ಹಾಗೂ ಅಕ್ಟೋಬರ್ 6)
- 2016 - 3 ಬಾರಿ ( ಜನವರಿ 2, ಮೇ 29 ಹಾಗೂ ನವೆಂಬರ್ 13)
- 2017 - 2 ಬಾರಿ ( ಜನವರಿ 8, ಅಕ್ಟೋಬರ್ 29)
- 2018 - 7 ಬಾರಿ (ಫೆಬ್ರವರಿ 19, ಫೆಬ್ರವರಿ 27, ಮೇ 3, ಮೇ 5, ಮೇ 8, ನವೆಂಬರ್ 12) ( ಕರ್ನಾಟಕ ಚುನಾವಣಾ ಸಮಯ)
- 2019 - 6 ಬಾರಿ (ಮಾರ್ಚ್ 6, ಏಪ್ರಿಲ್ 9, ಏಪ್ರಿಲ್ 12, ಏಪ್ರಿಲ್ 13, ಏಪ್ರಿಲ್ 18, ಸೆಪ್ಟಂಬರ್ 6) (ಲೋಕಸಭಾ ಚುನಾವಣೆ ಸಮಯ)
- 2021 - ಕೋವಿಡ್ ಅವಧಿಯಲ್ಲಿ ರಾಜ್ಯಕ್ಕೆ ಆಗಮಿಸಿಲ್ಲ.
- 2020 - 1 ಬಾರಿ (ಜನವರಿ 2)
- 2022 - 3 ಬಾರಿ (ಜೂನ್ 20, ಸೆಪ್ಟೆಂಬರ್ 2 ಹಾಗೂ ನವೆಂಬರ್ 11 ) ಆಗಮಿಸಿದ್ದರು.
- 2023- 8 ಬಾರಿ (ಜನವರಿ 12, ಜನವರಿ 19, ಫೆಬ್ರವರಿ 6, ಫೆಬ್ರವರಿ 12, ಫೆಬ್ರವರಿ 27, ಮಾರ್ಚ್ 12, ಮಾರ್ಚ್ 25 ಹಾಗೂ ಏಪ್ರಿಲ್ 9) ರಂದು ರಾಜ್ಯಕ್ಕೆ ಆಗಮಿಸಿದ್ದಾರೆ.
ಇನ್ನು ಇದೇ ತಿಂಗಳಲ್ಲಿ ಏ.28ರಿಂದ ಮೇ 7ರವರೆಗಿನ ಅವಧಿಯಲ್ಲಿ ಸುಮಾರು 7 ದಿನಗಳ ಕಾಲ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಸುಮಾರು 23ಕ್ಕೂ ಹೆಚ್ಚು ಸಭೆ, ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
