ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೈಲು ಭಯದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕರಾಗಿದ್ದರೆ ಜೈಲಿನ ಭಯವೇಕೆ ಎಂದು ಪ್ರಶ್ನಿಸಿರುವ ಅವರು, ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಡಿಕೆಶಿಗಿರುವ ವಿಶೇಷ ಆಸಕ್ತಿಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಜು.17): ಮುಖ್ಯಮಂತ್ರಿ ಡಿಕೆ ಶಿವಕುಮಾರ್‌(DK Shivakumar) ಅವರನ್ನು ಯಾರೂ ಜೈಲಿಗೆ ಕಳಿಸುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಅವರಿಗೆ ಯಾಕೆ ಅದರ ಭಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಅವರಿಗೇಕೆ ಜೈಲಿಗೆ ಹೋಗುವ ಭಯ?

ಅವರ ಹೇಳಿಕೆಗಳೆಲ್ಲವೂ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಒಂದು ಪ್ರಯತ್ನ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ. ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಶಿವಕುಮಾರ್‌ ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಬಗ್ಗೆ ಮಾತನಾಡುತ್ತಿದ್ದೀರಿ ಎಂದರು. ಭ್ರಷ್ಟಾಚಾರ ಮತ್ತು ತಪ್ಪು ಮಾಡಿದ ಯಾರೇ ಆಗಲಿ ಜೈಲಿಗೆ ಹೋಗುತ್ತಾರೆ. ನಾವೇನೂ ಅವರನ್ನು ಜೈಲಿಗೆ ಕಳಿಸಲು ನೋಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Bidadi Township Row: ಹೆಚ್‌ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?

ಅವರು ತಪ್ಪು ಮಾಡಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಮುಖ್ಯಮಂತ್ರಿ ಇರದಿದ್ದ ಬಿಡದಿ ಟೌನ್​​ಶಿಪ್​ʼ ಆಸಕ್ತಿ ನಿಮಗೇಕೆ?

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡದಿ ಟೌನ್‌ಶಿಪ್ ಕುರಿತಾಗಿ ಇಷ್ಟೊಂದು ಆಸಕ್ತಿ ತೋರಿಸಿದ್ದಿಲ್ಲ. ಆದರೆ ಅವರಿಗಿಲ್ಲದ ಆಸಕ್ತಿ ಇವರಿಗೇಕೆ ಬಂತು? ಅಂದರೆ ಇದರಲ್ಲೇನೋ ಡೀಲ್ ಆಗಿದೆ ಎಂಬ ಸಂಶಯ ಬರುತ್ತದೆ ಅಲ್ಲವೇ? ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆರೋಪಕ್ಕೆ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೇಕೆ ರೇಗಾಡುತ್ತಿದ್ದೀರಿ ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.