ಬಿಡದಿ ಟೌನ್‌ಶಿಪ್‌ ಕೈಬಿಡುವಂತೆ ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.

ಬಳ್ಳಾರಿ (ಜು.16) ಬಿಡದಿ ಟೌನ್‌ಶಿಪ್‌ ಕೈಬಿಡುವಂತೆ ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಪೊರಕೆ ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲು ಸಿಎಂ ಡಿ.ಕೆ.ಶಿವಕುಮಾರ್ ಅವರ ರೈತ ವಿರೋಧಿ ಆಡಳಿತವೇ ಕಾರಣ. ರಾಜ್ಯದಲ್ಲಿ ಬಡವರ, ರೈತ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಡಿಕೆಶಿ ಅವರಿಗೆ ರಿಯಲ್‌ ಎಸ್ಟೇಟ್‌ ಆದ್ಯತೆಯಾಗಿದೆ ಹೊರತು ರೈತರಲ್ಲ. ರೈತರ ಜತೆ ಸಿಎಂ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಬಿಡದಿ ಟೌನ್‌ಶಿಪ್‌ ಬಗ್ಗೆ ಹೋರಾಟ ಮಾಡುತ್ತಿರುವ ರೈತರು ಹಾಗೂ ಸಂಘಟನೆಯ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಡಿಕೆಶಿ ಅವರು ಸಿಎಂ ಆಗಿ ಆಯ್ಕೆಯಾದ 24 ಗಂಟೆಗಳಲ್ಲಿ ಬಿಡದಿ ಟೌನ್‌ಶಿಪ್‌ ಬಗ್ಗೆ ಆದೇಶ ಮಾಡಿದ್ದಾರೆ. ರೈತರು ಹಾಗೂ ಕೃಷಿ ಕಾರ್ಮಿಕರ ಬಗ್ಗೆ ಈ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ. ಈ ಸರ್ಕಾರಕ್ಕೆ ದುಡಿವ ಜನರಿಗಿಂತ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದರು.

ಟೌನ್‌ಶಿಪ್‌ ಕೈಬಿಡಬೇಕು ಎಂದು ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಧರಣಿ ಮಾಡುತ್ತದೆ. ಬಿಡದಿ ಸೇರಿದಂತೆ ರೈತ ವಿರೋಧಿ ನಿಲುವಿನ ವಿರುದ್ಧ, ಅಧಿವೇಶನದಲ್ಲೂ ಬಿಜೆಪಿ ಜೆಡಿಎಸ್‌ನಿಂದ ಜಂಟಿಯಾಗಿ ಹೋರಾಟ ನಡೆಸಲಾಗುವುದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿದ್ದ ವೇಳೆ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ದುರಸ್ತಿ ಮಾಡಲು 24 ತಿಂಗಳು ಬೇಕಾಯಿತು. ಇದರಿಂದಾಗಿ ರೈತರು ಎರಡನೇ ಬೆಳೆಯಿಂದ ವಂಚಿತರಾಗಿದ್ದರು. ಹೀಗೆ ಸಾಕಷ್ಟು ರೈತ ವಿರೋಧಿ ನೀತಿಗಳಿವೆ. ರಾಜ್ಯ ಸರ್ಕಾರ ಜನವಿರೋಧಿಯಾಗಿ ವರ್ತಿಸಿದರೆ ಕೇಳುವುದಿಲ್ಲ. ರೈತರ ಹಿತಾಸಕ್ತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ. ಹೋರಾಟದ ಮೂಲಕ ಸೂಕ್ತ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಕೃಷಿ ಸಚಿವರು ಯಾರು?

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಹೀಗಾಗಿ, ಸಿಎಂ ಡಿಕೆಶಿ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳಿಸಬೇಕು ಎಂದು ಉಲ್ಲೇಖ ಮಾಡಿದ್ದಾರೆ. ಕರ್ನಾಟಕದಲ್ಲಿ ಏನಾದರೂ ರಾಷ್ಟ್ರಪತಿ ಆಡಳಿತ ಹೇರಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಸಿಎಂ ಹಾಗೂ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರಾಜ್ಯದಲ್ಲಿ ಕೃಷಿ ಸಚಿವರಿಲ್ಲದಿರುವುದು ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಧಾನ ಕಾಂಗ್ರೆಸ್‌ ಸರಕಾರಕ್ಕಿಲ್ಲ ಎಂದರು.

ಕೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಟೌನ್‌ಶಿಪ್: ವಿಜಯೇಂದ್ರ

ಹೊಸಪೇಟೆ: ಕಾಂಗ್ರೆಸ್ ಹೈಕಮಾಂಡ್‌ನ ಹೊಟ್ಟೆ ತುಂಬಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡದಿ ಬಳಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ಟೌನ್‌ಶಿಪ್ ಯೋಜನೆಗೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೊಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಮರಣಶಾಸನವಾಗಲಿರುವ ಬಿಡದಿ ಟೌನ್ ಶಿಪ್ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಆ ಭಾಗದ ರೈತರ ಧ್ವನಿಯಾಗಲು ಬಿಜೆಪಿ ಹೋರಾಟ ನಡೆಸಲಿದೆ. ಅಲ್ಲದೇ, ಮುಂಗಾರು ವಿಧಾನ ಮಂಡಲ ಅಧಿವೇಶನದ ಬಳಿಕ ರಾಜ್ಯ ಪ್ರವಾಸ ನಡೆಸುವುದಾಗಿ ಅವರು ತಿಳಿಸಿದರು.

ರಾಜ್ಯದಲ್ಲಿ ಮಳೆ ಇಲ್ಲದೇ ತೀವ್ರ ಬರಗಾಲ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಹಾಗೂ ಬಿತ್ತನೆ ಕಾರ್ಯಕ್ಕೆ ಸಾಕಷ್ಟು ಸಾಲ ಶೂಲ ಮಾಡಿ ಬಿತ್ತನೆ ಮಾಡಿ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಬರ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿದರು.