ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಗಲಾಟೆ ಇಲ್ಲದೇ ಲಾಠಿ ಚಾರ್ಜ್ ಆಗಿರುವುದು ನರೇಂದ್ರ ಗ್ರಾಮದಲ್ಲೇ ಮೊದಲು. ರಾಜಕೀಯ ಕಾರಣಗಳಿನ್ನಿಟ್ಟುಕೊಂಡೇ ನರೇಂದ್ರದಲ್ಲಿ ಲಾಠಿ ಚಾರ್ಜ್ ಮಾಡಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ (ಸೆ.14): ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಗಲಾಟೆ ಇಲ್ಲದೇ ಲಾಠಿ ಚಾರ್ಜ್ ಆಗಿರುವುದು ನರೇಂದ್ರ ಗ್ರಾಮದಲ್ಲೇ ಮೊದಲು. ರಾಜಕೀಯ ಕಾರಣಗಳಿನ್ನಿಟ್ಟುಕೊಂಡೇ ನರೇಂದ್ರದಲ್ಲಿ ಲಾಠಿ ಚಾರ್ಜ್ ಮಾಡಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನರೇಂದ್ರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಾಟೆ ಇಲ್ಲದೇ ಲಾಠಿ ಚಾರ್ಜ್ ಮಾಡಿರುವುದು ಇದೇ ಮೊದಲು. ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಘಟನೆ ಆಗಿರಲಿಲ್ಲ. 25 ವರ್ಷದಿಂದ ನಾನು ಸಂಸದನಾಗಿದ್ದೇನೆ.
ರಾಷ್ಟ್ರಧ್ವಜ ಕುರಿತು ಹೋರಾಟ ಮಾಡಿದ್ದೇನೆ. ಆ ಸಮಯದಲ್ಲಿ ಪೊಲೀಸರ ತಪ್ಪಿನಿಂದ ಘಟನೆ ಆಗಿತ್ತು. ನರೇಂದ್ರದಲ್ಲಿ ಲಾಠಿ ಚಾರ್ಜ್ ಮಾಡಲು ಯಾವುದೇ ಕಾರಣಗಳಿರಲಿಲ್ಲ. ಇದ್ದಕ್ಕಿದ್ದಂತೆ ಸಿಪಿಐ ಬಂದು ಲಾಠಿ ಚಾರ್ಜ್ ಮಾಡಿಸಿದ್ದಾರೆ. ಇಬ್ಬರು ಪೊಲೀಸ್ ಪೇದೆಗಳು ಸಹ ಲಾಠಿ ಚಾರ್ಜ್ ಮಾಡಿದ್ದಾರೆ. ಎಲ್‌ಕೆಜಿ ಮಕ್ಕಳನ್ನೂ ಹೊಡೆದಿದ್ದಾರೆ ಎಂದರು. ಸಿಪಿಯ ಕಮತಗಿ ಹಾಗೂ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಗ್ರಾಮಸ್ಥರ ಸಿಟ್ಟಿದೆ. ರಾಜಕೀಯ ಕಾರಣ ಇಟ್ಟುಕೊಂಡೇ ಅವರು ಲಾಠಿ ಚಾರ್ಜ್ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಲೇಬೇಕು. ಇಲ್ಲದೇ ಹೋದಲ್ಲಿ ಇದು ತೀವ್ರ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಜೋಶಿ ಎಚ್ಚರಿಸಿದರು.
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ
ಮಸೀದಿಯೊಳಗೆ ಕುಳಿತು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರುತ್ತಾರೆ ಎಂದರೆ ಏನರ್ಥ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಬೆನ್ನಿಗಿದ್ದಾರೆ ಎಂಬ ಭಂಡ ಧೈರ್ಯ ಕಿಡಿಗೇಡಿಗಳದ್ದಾಗಿದೆ. ಹಾಗಾಗಿ ಇಂಥ ಕೃತ್ಯಗಳು ಘಟಿಸುತ್ತಿವೆ ಎಂದುಹರಿಹಾಯ್ದರು. ಭದ್ರಾವತಿಯಲ್ಲಿ ʼಪಾಕಿಸ್ತಾನ ಜಿಂದಾಬಾದ್ʼ ಘೋಷಣೆ ಕೂಗಿದ್ದರ ಬಗ್ಗೆ ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದವರ ಮೇಲೆ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಇದೇ ಅವರಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲೇ ತಿನ್ನಲು ಕೂಳಿಲ್ಲ. ಅಂಥದ್ದರಲ್ಲಿ ಇವರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ. ಭಾರತದಲ್ಲಿದ್ದು, ನಮ್ಮ ದೇಶದ ಅನ್ನ ತಿಂದು ಪಾಕ್ ಪರ ಘೋಷಣೆ ಕೂಗುತ್ತಾರೆ. ಕಾಂಗ್ರೆಸ್‌ನ ತುಷ್ಟೀಕರಣವೇ ಇದಕ್ಕೆಲ್ಲ ಕಾರಣ ಎಂದು ಜೋಶಿ ಕಿಡಿ ಕಾರಿದರು.
ಮದ್ದೂರು ಗಲಭೆಗೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಪ್ರಚೋದನೆ ಎಂದಿದ್ದಾರೆ. ಪ್ರಚೋದನೆ ಬಿಜೆಪಿಯದ್ದಲ್ಲ, ಕಾಂಗ್ರೆಸ್‌ನದ್ದೇ ಎಂದು ತಿರುಗೇಟು ನೀಡಿದರು. ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆಯುತ್ತದೆ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಾರೆ. ಕರ್ನಾಟಕದಲ್ಲಿ ತಾವೇನೇ ಮಾಡಿದರೂ ನಡೆಯುತ್ತದೆ. ಎಂಬ ಮಾನಸಿಕತೆ ಆ ವರ್ಗದವರಲ್ಲಿದೆ. ಈ ಹಿಂದಿನ ಗಲಭೆ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
