ಧರ್ಮಸ್ಥಳದ ಬಾಹುಬಲಿ ಬೆಟ್ಟ ಸಹಿತ ಅನೇಕ ಕಡೆ ಅಗೆತ ಮಾಡಿದಿರಿ. ಇದೇ ರೀತಿ ಅನ್ಯಮತೀಯರ ಜಾಗದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.

ಬೆಳ್ತಂಗಡಿ (ಸೆ.02): ಕಾಂಗ್ರೆಸ್ ಸ್ನೇಹಿತ ಚಿನ್ನಯ್ಯನಿಗೆ ಬುರುಡೆ ಎಲ್ಲಿಂದ ತಂದೆ ಅಂತ ಸಿದ್ದರಾಮಯ್ಯ ಸರ್ಕಾರ ಕೇಳಿಲ್ಲ. ಆತನ ಮಾತು ಕೇಳಿ ಧರ್ಮಸ್ಥಳದ ಬಾಹುಬಲಿ ಬೆಟ್ಟ ಸಹಿತ ಅನೇಕ ಕಡೆ ಅಗೆತ ಮಾಡಿದಿರಿ. ಇದೇ ರೀತಿ ಅನ್ಯಮತೀಯರ ಜಾಗದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು. ಅಲ್ಲದೆ ಹಿಂದುಗಳ ಸಹನೆಯನ್ನು ಸಿದ್ದರಾಮಯ್ಯ ಸರ್ಕಾರ ಕೆಣಕುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳದಲ್ಲಿ ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಧಿಕ್ಕಾರವನ್ನು ಹೇಳಿಸುತ್ತಾ ಭಾಷಣ ಪ್ರಾರಂಭಿಸಿದ ಜೋಶಿ, ವೋಟ್ ಬ್ಯಾಂಕಿಗೋಸ್ಕರ ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯಲು ಸಂಚು ರೂಪಿಸುತ್ತಿದೆ. ಮುಸುಕುಧಾರಿ ಕಾಂಗ್ರೆಸ್ ಸ್ನೇಹಿತ. ಅವನಿಗೆ ಒದಿಯಬೇಕು ಎಂದು ಅನಿಸಿಲ್ವಾ? ಆತ ಬುರುಡೆ ಎಲ್ಲಿಂದ ತಂದ. ಸೋಮವಾರ ಕೋರ್ಟ್‌ಗೆ ಬಂದ, ಭಾನುವಾರ ಎಸ್‌ಐಟಿ ರಚನೆ ಮಾಡಿದರು ಎಂದರು.

ಕಾಂಗ್ರೆಸ್‌ನಿಂದ ಷಡ್ಯಂತ್ರ: ಆಪರೇಶನ್ ಸಿಂದೂರ ಆದಾಗ ಪಾಕಿಸ್ತಾನದವರು ಕೇಳಬೇಕಾದ ಪ್ರಶ್ನೆಗಳನ್ನು ಕಾಂಗ್ರೆಸ್‌ನವರು ಕೇಳಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಾ ಟ್ರಿಪಲ್ ತಲಾಕ್, ಸಿಐಎ, ಕಾಶ್ಮೀರದ ವಿಶೇಷ ವಿಧಿಯನ್ನು ವಿರೋಧಿಸುವ ಬದಲು ಪೋಷಿಸಿದೆ. ಬಹುಸಂಖ್ಯಾರ ವಿರುದ್ಧ ಕಾಂಗ್ರೆಸ್ ನಿರಂತರ ಷಡ್ಯಂತ್ರ ಮಾಡಿಕೊಂಡು ಬಂದಿದೆ. ಶಬರಿಮಲೆ, ಶನಿಶಿಂಗಣಾಪುರ, ಕಪಾಲಿ ಬೆಟ್ಟ, ಧರ್ಮಸ್ಥಳ ಇದೀಗ ಚಾಮುಂಡಿ ಬೆಟ್ಟದತ್ತ ಕಣ್ಣು ಹಾಕಿದೆ. ಹೀಗಾಗಿ ಇಂಥವರನ್ನು ಸಮಾಜ ತಿರಸ್ಕರಿಸಬೇಕು ಎಂದು ಹೇಳಿದರು.

ಕಳೆದ 30-40 ವರ್ಷಗಳಿಂದ ದಕ್ಷಿಣ ಕನ್ನಡದಲ್ಲಿನ ಹಿಂದುತ್ವದ ಶಕ್ತಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲದ ಕಾರಣಕ್ಕಾಗಿ ದೇವಾಲಯ, ಮಠ ಹಾಗೂ ಧಾರ್ಮಿಕ ಮುಖಂಡರ ನಡವಳಿಕೆಯನ್ನು ಪ್ರಶ್ನಿಸಲು, ಕೆದಕಲು ಪ್ರಾರಂಭಿಸಿದೆ. ಎಡಪಂಥೀಯರ ಜತೆ ಸೇರಿಕೊಂಡು ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥನ ಮೇಲಿನ ಶ್ರದ್ಧೆಯನ್ನು ಕಡಿಮೆ ಮಾಡಬೇಕೆಂದು ಕುತಂತ್ರ ರೂಪಿಸಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.