ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಕಾಂಗ್ರೆಸ್ ಹಾದಿ ಹಿಡಿದಿದೆ. ದೇವರ ನಾಡಿನಲ್ಲಿ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಿಡಿ ಕಾರಿದ್ದಾರೆ. ಸದ್ಯ ಕೇರಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ಜಾವಡೇಕರ್ ನೆನಪಿಸಿದ್ದಾರೆ.
ನವದೆಹಲಿ(ಜೂ.24): ಕೇರಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಪಿಣರಾಯಿ ವಿಜಯನ್ ಸರ್ಕಾರವನ್ನು ಟೀಕಿಸುವ ಮಾಧ್ಯಮಗಳ ದ್ವನಿ ಅಡಗಿಸಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನೇ ಸರ್ಕಾರ ಕಿತ್ತುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಕೇರಳದ ಎಡ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ. ಸರ್ಕಾರ ಹತಾಶೆಯಿಂದ ಕೇರಳದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಸತ್ಯ ಹೇಳುವ ಮಾಧ್ಯಮದ ಮೇಲೆ ಪೊಲೀಸರಿಂದ ದಾಳಿ ಮಾಡಿಸುತ್ತಿದ್ದಾರೆ. ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕಾಂಗ್ರೆಸ್ ಜಾರಿ ತಂದ ತುರ್ತಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದು ಜಾವೇಡಕರ್ ಹೇಳಿದ್ದಾರೆ.
ಕೇರಳ ಸರ್ಕಾರದ ನಡೆ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ಜಾವೇಡಕರ್, ಎಡ ಸರ್ಕಾರದ ಧೋರಣೆಗಳನ್ನು ಖಂಡಿಸಿದ್ದಾರೆ. ಸರ್ಕಾರವನ್ನು ಟೀಕಿಸಿ ಮಾಧ್ಯಮದ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಪ್ರತಿಭಟಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಜಾರಿಗೆ ತಂದ ತುರ್ತುಪರಿಸ್ಥಿತಿಯನ್ನು ಸಿಪಿಎಂ ವಿರೋಧಿಸಿತ್ತು. ಇದೀಗ ಸಿಪಿಎಂ ಅದೇ ಕೆಲಸ ಮಾಡುತ್ತಿದೆ. ಇದೇ ಸರ್ಕಾರದ ಮಿತ್ರರು ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿದೆ. ಆದರೆ ಈ ನಡೆಯನ್ನು ಕೇರಳ ಜನತೆ ಗಮನಿಸುತ್ತಿದ್ದಾರೆ ಎಂದು ಜಾವೇಡಕರ್ ಟ್ವೀಟ್ ಮಾಡಿದ್ದಾರೆ.
ಏಷ್ಯಾನೆಟ್ ನ್ಯೂಸ್ ಪತ್ರಕರ್ತರ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳಿ, ಕೇರಳ ಸರ್ಕಾರಕ್ಕೆ ಬುದ್ಧಿಜೀವಿಗಳ ಪತ್ರ
ಕೇರಳದಲ್ಲಿ ಮಹಾರಾಜ ಕಾಲೇಜಿನಲ್ಲಿ ಅಂಕಪಟ್ಟಿ ಅಕ್ರಮ ಬಯಲು ಮಾಡಿದ ಏಷ್ಯಾನೆಟ್ ನ್ಯೂಸ್ ಪತ್ರಕರ್ತೆ ಅಖಿಲಾ ನಂದಕುಮಾರ್ ವಿರುದ್ಧವೇ ಪಿಣರಾಯಿ ವಿಜಯನ್ ಸರ್ಕಾರ ಪ್ರಕರಣ ದಾಖಲಿಸಿತ್ತು. ಕೇರಳದ ಎಡಪಕ್ಷ ಬೆಂಬಲಿತ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ಅಕ್ರಮಗಳನ್ನು ಏಷ್ಯಾನೆಟ್ ನ್ಯೂಸ್ ವರದಿ ಮಾಡಿತ್ತು. ಅಂಕಪಟ್ಟಿ ಅಕ್ರಮ ಕುರಿತು ಸರಣಿ ವರದಿ ಪ್ರಸಾರ ಮಾಡಿತ್ತು. ಇದು ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ ಕೇರಳ ಪೊಲೀಸರು ಅಕ್ರಮ ಬಯಲಿಗೆಳೆದ ಏಷ್ಯಾನೆಟ್ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಪ್ರಕರಣ ದಾಖಲಿಸಿತ್ತು. ಪಿಣರಾಯಿ ವಿಜಯನ್ ಅವರ ಎಡಪಕ್ಷ ಬೆಂಬಲಿತ ಸ್ಟೂಡೆಂಟ್ ಫೆಡರೇಶನ್ ಆಫ ಇಂಡಿಯಾದ ಕಾರ್ಯದರ್ಶಿ ಪಿಎ ಅರ್ಶೂ ನೀಡಿದ ದೂರಿನ ಆಧಾರದಲ್ಲಿ ವರದಿಗಾರ್ತಿ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದರು.
ಅಂಕಪಟ್ಟಿ ಅಕ್ರಮ ಬಯಲು ಮಾಡಿದ ಏಷ್ಯಾನೆಟ್ ವರದಿಗಾರ್ತಿ ವಿರುದ್ಧ ಕೇಸ್: ಬಿಜೆಪಿ ಖಂಡನೆ
ಕೇರಳ ಪೊಲೀಸರು ಪ್ರಾಥಮಿಕ ತನಿಖೆಯನ್ನು ಮಾಡದೆ ಪಿತೂರಿ ಪ್ರಕರಣದಲ್ಲಿ ವರದಿಗಾರ್ತಿಯನ್ನು ಸಿಲುಕಿಸಲಾಗಿತ್ತು. ಈ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗಿತ್ತು. ಇದೊಂದೆ ಘಟನೆಯಲ್ಲ. ಕೇರಳ ಸರ್ಕಾರದ ಸರ್ವಾಧಿಕಾರಿ ನಡೆ ವಿರುದ್ಧ ಧ್ವನಿ ಎತ್ತುವ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಯಾಗುತ್ತಿದೆ. ಹಲವು ಹತ್ಯೆಗಳು ನಡೆದಿದೆ. ಈ ಎಲ್ಲಾ ಘಟನೆ ಆಧರಿಸಿ ಪ್ರಕಾಶ್ ಜಾವೇಡಕರ್ ಕೇರಳದಲ್ಲಿ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.