ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಪೋರ್ಜರಿ ಅಂಕಪಟ್ಟಿ ಅಕ್ರಮ ನಡೆದಿದ್ದು, ಇದನ್ನು ಬಯಲಿಗೆ ತಂದ ಏಷ್ಯಾನೆಟ್ ನ್ಯೂಸ್ ಮಲೆಯಾಳಂನ ವರದಿಗಾರ್ತಿ ಅಖಿಲಾ ನಂದಕುಮಾರ್‌ ವಿರುದ್ಧವೇ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಚ್ಚಿ: ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಪೋರ್ಜರಿ ಅಂಕಪಟ್ಟಿ ಅಕ್ರಮ ನಡೆದಿದ್ದು, ಇದನ್ನು ಬಯಲಿಗೆ ತಂದ ಏಷ್ಯಾನೆಟ್ ನ್ಯೂಸ್ ಮಲೆಯಾಳಂನ ವರದಿಗಾರ್ತಿ ಅಖಿಲಾ ನಂದಕುಮಾರ್‌ ವಿರುದ್ಧವೇ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಅಪರಾಧಿಗಳನ್ನು ಹಿಡಿಯುವ ಬದಲು ಅಕ್ರಮ ಬಯಲಿಗೆಳೆದ ವರದಿಗಾರ್ತಿ ವಿರುದ್ಧವೇ ಕೇಸು ದಾಖಲಿಸಿರುವುದಕ್ಕೆ ಅನೇಕ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಕೀಳುಮಟ್ಟದ ಹಾಗೂ ಅಸಂಬದ್ಧವಾದ ಪ್ರಕರಣವಾಗಿದ್ದು, ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ, ಮಾರ್ಕ್‌ಶೀಟ್ ವಂಚನೆ ಬಗ್ಗೆ ವರದಿ ಮಾಡಿದ ಮಾಧ್ಯಮಗಳ ಮೇಲೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಸರ್ಕಾರ ಒತ್ತಡ ಹೇರುತ್ತಿರುವುದು ಖಂಡನೀಯ. ಇದೊಂದು ಪ್ರಜಾಸತಾತ್ಮಕವಲ್ಲದ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಸ್ಪಷ್ಟವಾದ ಅಕ್ರಮಣವಾಗಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಮಾಧ್ಯಮಗಳ ಸ್ವಯಂಘೋಷಿತ ಧ್ವಜಧಾರಿಗಳ ಈ ಕೃತ್ಯ ನಾಚಿಕೆಗೇಡಿನಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. 

ಅಂಕಪಟ್ಟಿ ಅಕ್ರಮ: ಅಪರಾಧಿಗಳ ಬದಲು ವರದಿ ಮಾಡಿದ್ದ ಪತ್ರಕರ್ತೆ ಹಿಂದೆ ಬಿದ್ದ ಕೇರಳ ಪೊಲೀಸರು

ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಕೂಡ ಪೊಲೀಸರ ಕ್ರಮವನ್ನು ಖಂಡಿಸಿದ್ದು, ಇದು ಅತಿರೇಕದ ಕ್ರಮ ಎಂದು ಬಣ್ಣಿಸಿದ್ದಾರೆ. ಅವರು ಟ್ವಿಟರ್‌ನಲ್ಲಿ ಏಷ್ಯಾನೆಟ್ ನ್ಯೂಸ್ ಮಲೆಯಾಳಂನ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಪೊಲೀಸ್ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಎಫ್‌ಐ ಮುಖಂಡನ ನಕಲಿ ಅಂಕಪಟ್ಟಿಯ ಸುದ್ದಿಯನ್ನು ಕವರ್ ಮಾಡಲು ಹೋದ ಅಖಿಲಾ ಈಗ ಕಪೋಲಕಲ್ಪಿತ ಪ್ರಕರಣದಲ್ಲಿ 5ನೇ ಆರೋಪಿಯಾಗಿದ್ದಾಳೆ. ಕೇರಳ ಪೊಲೀಸರು @CPIMKerala ದ ಬಿ-ಟೀಮ್‌ನಂತೆ ವರ್ತಿಸುತ್ತಿದ್ದಾರೆ ಎಂಬ ವಿಷಯವನ್ನು ನಾವು ನಿರಂತರವಾಗಿ ಹೇಳುತ್ತಿದ್ದೇವೆ ಮತ್ತು ನಮ್ಮ ಆರೋಪ ನಿಜ ಎಂಬುದು ಈಗ ಸಾಬೀತಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಆಡಳಿತವೂ ಪೊಲೀಸ್ ರಾಜ್‌ ದರ್ಬಾರ್‌ಗೆ ಸಾಕ್ಷಿಯಾಗಿದ್ದು, ಅವರು ಪತ್ರಕರ್ತರನ್ನೂ ಬಿಡುವುದಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ. 

ಮತ್ತೊಂದು ಪೋಸ್ಟ್‌ನಲ್ಲಿ ಅವರು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ @AsianetNewsML ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಾಕ್ ಸ್ವಾತಂತ್ರ್ಯದ ಚಾಂಪಿಯನ್‌ಗಳು ಎಂದು ಕರೆಯಲ್ಪಡುವವರು ತಮ್ಮ ನಿಜವಾದ ಬಣ್ಣವನ್ನು ತೋರಿಸಿದ್ದಾರೆ. ಅಖಿಲಾ ವಿರುದ್ಧ ಪೊಲೀಸರ ಕ್ರಮವನ್ನು ಖಂಡಿಸುತ್ತೇನೆ ಎಂದು ಸುರೇಂದ್ರನ್ ಹೇಳಿದ್ದಾರೆ.

ಸುದ್ದಿ ಪ್ರಸಾರ ನಿರ್ಬಂಧ ; ಸ್ಪಷ್ಟನೆ ನೀಡಿದ ಏಷ್ಯಾನೆಟ್ ಮಲೆಯಾಳಂ ಸಂಪಾದಕ!

ನಡೆದಿದ್ದೇನು?

ಎಸ್‌ಎಫ್‌ಐನ ಮಾಜಿ ನಾಯಕಿ ವಿದ್ಯಾ ಅವರ ಫೋರ್ಜರಿ ಪ್ರಕರಣದ ವಿವರ ಪಡೆಯಲು ಜೂನ್ 6 ರಂದು ಅಖಿಲಾ ಮತ್ತು ಅವರ ಕ್ಯಾಮರಾಮನ್, ಮಹಾರಾಜ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದರು. ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಗಿಟ್ಟಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದ ನಂತರ ಎಸ್‌ಎಫ್‌ಐನ ಮಾಜಿ ನಾಯಕಿ ಆರೋಪಿ ವಿದ್ಯಾ ಪರಾರಿಯಾಗಿದ್ದಾಳೆ. ವರದಿಗಾರ್ತಿ ಅಖಿಲಾ ಪ್ರಾಂಶುಪಾಲರು ಮತ್ತು ಮಲಯಾಳಂ ವಿಭಾಗದ ಶಿಕ್ಷಕರೊಂದಿಗೆ ಮಾತನಾಡಿ ವಿವರ ಕೇಳಿದ್ದರು. ಅಲ್ಲದೇ ಪ್ರಾಂಶುಪಾಲರ ಕೊಠಡಿಯಲ್ಲಿ ಹಾಜರಿದ್ದ ವಿದ್ಯಾರ್ಥಿ ಪ್ರತಿನಿಧಿಗಳನ್ನು ವಿದ್ಯಾ ಅವರ ಪೋರ್ಜರಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೇಳಿದ್ದರು.

ಆಗ ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಆರ್ಷೋ ( Arsho) ಅವರ ಅಂಕಪಟ್ಟಿ ವಿವಾದವನ್ನು ಎತ್ತಿದ್ದು, ಇದಕ್ಕಿಂತ ಮುಖ್ಯವಾದ ಇನ್ನೊಂದು ವಿಷಯವಿದೆ ಎಂದು ಹೇಳಿದರು. ಹೀಗಾಗಿ ವಿದ್ಯಾ ಅವರ ಪೋರ್ಜರಿ ಪ್ರಕರಣದೊಂದಿಗೆ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಅಂಕಪಟ್ಟಿ ವಿವಾದವೂ ಮುನ್ನೆಲೆಗೆ ಬಂದಿದೆ. ಇದರಿಂದ ಈ ಘಟನೆಯನ್ನು ತನ್ನ ವಿರುದ್ಧದ ಪಿತೂರಿ ಎಂದು ಪಿಎಂ ಅರ್ಶೋ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಚ್ಚಿ ಸೆಂಟ್ರಲ್ ಪೊಲೀಸರು ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ ಫೋರ್ಜರಿ ಪ್ರಕರಣದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಕ್ಯಾಂಪಸ್‌ಗೆ ತೆರಳಿದ್ದ ಪತ್ರಕರ್ತೆ ವಿರುದ್ಧ ಪೊಲೀಸರು ಪಿತೂರಿ ಆರೋಪ ಹೊರಿಸಿದ್ದಾರೆ. ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿಯ ದೂರಿನ ಮೇರೆಗೆ ಫೋರ್ಜರಿ ಪ್ರಕರಣದ ಆರೋಪಿ ವಿದ್ಯಾಳನ್ನೂ ಪತ್ತೆ ಹಚ್ಚದ ರಾಜ್ಯ ಗೃಹ ಇಲಾಖೆ ಆ ಬಗ್ಗೆ ವರದಿ ಮಾಡಿದ್ದ ವರದಿಗಾರ್ತಿಯನ್ನು ಮಿಂಚಿನ ವೇಗದಲ್ಲಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡದೊಂದಿಗೆ (investigation team) ತನಿಖೆ ನಡೆಸಿರುವುದು ಮಾತ್ರ ವಿಚಿತ್ರ ಎನಿಸಿದೆ.

ಈ ಮಹಾರಾಜ ಮಾರ್ಕ್ ಶೀಟ್ ಪ್ರಕರಣದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲ ವಿ ಎಸ್ ಜಾಯ್ ( V S Joy) ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ ವಿನೋದ್ ಕುಮಾರ್ (Vinod Kumar) ಅವರು ಈ ಪ್ರಕರಣದಲ್ಲಿ ಮೊದಲ ಆರೋಪಿಗಳಾಗಿದ್ದು,. ಕೆಎಸ್‌ಯು ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್ ಮತ್ತು ಕೆಎಸ್‌ಒಯು ಮಹಾರಾಜ ಘಟಕದ ಅಧ್ಯಕ್ಷ ಸಿಎ ಫೈಸಲ್ (CA Faisal) ಮೂರು ಮತ್ತು ನಾಲ್ಕನೇ ಆರೋಪಿಗಳಾಗಿದ್ದಾರೆ.