ಲೋಕಸಭೆ ಚುನಾವಣೆ 2024: ಏ.14ರಂದು ಪ್ರಧಾನಿ ಮೋದಿ ಮಂಗಳೂರಿಗೆ
ಮೋದಿ ಭೇಟಿಯಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ದೊಡ್ಡಮಟ್ಟದ ವೇಗ ದೊರೆಯಲಿದೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ. ನಂತರ ಮೂರು ದಿನಗಳ ಕಾಲ ಏ.15,16,17ರಂದು ನಡೆಯುವ ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ಕಾರ್ಯಕ್ಕೆ ಇದು ಸ್ಫೂರ್ತಿ ತುಂಬಲಿದೆ.
ಮಂಗಳೂರು(ಏ.09): ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಏ.14ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿ.ಸುನಿಲ್ ಕುಮಾರ್, ದ.ಕ. ಜಿಲ್ಲೆಗೆ ಈ ಹಿಂದೆ ಮೋದಿ ಭೇಟಿ ನೀಡಿದಾಗ ಸೇರಿದ ಜನಸಂಖ್ಯೆಯ ದಾಖಲೆ ಮೀರಿ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಟಿಕೆಟ್ ಮಿಸ್ ಆಗಿದ್ದಕ್ಕೆ ಅನಂತಕುಮಾರ್ ಹೆಗ್ಡೆ ಅಸಮಾಧಾನ: ದೇಶದ ಮುಂದೆ ಇವು ದೊಡ್ಡ ಸಮಸ್ಯೆ ಅಲ್ಲ: ವಿ ಸುನೀಲ್ ಕುಮಾರ್
ಚುನಾವಣೆ ಪ್ರಚಾರಕ್ಕೆ ವೇಗ:
ಮೋದಿ ಭೇಟಿಯಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ದೊಡ್ಡಮಟ್ಟದ ವೇಗ ದೊರೆಯಲಿದೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ. ನಂತರ ಮೂರು ದಿನಗಳ ಕಾಲ ಏ.15,16,17ರಂದು ನಡೆಯುವ ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ಕಾರ್ಯಕ್ಕೆ ಇದು ಸ್ಫೂರ್ತಿ ತುಂಬಲಿದೆ ಎಂದು ಹೇಳಿದರು. ಮಂಗಳೂರಿನ ಪ್ರಚಾರ ಸಭೆ ಮುಗಿಸಿ ಮೋದಿ ಅವರು ಸಂಜೆ 5.30ಕ್ಕೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇಡೀ ರಾಜ್ಯದಲ್ಲಿ ಮೋದಿ ಭೇಟಿ ಸಂಚಲನ ಸೃಷ್ಟಿಸಲಿದೆ ಎಂದು ಸುನಿಲ್ ಕುಮಾರ್ ಹೇಳಿದರು.
10,11ರಂದು ಮಹಾ ಪ್ರಚಾರ ಅಭಿಯಾನ:
ಏ.10,11ರಂದು ಪಕ್ಷವು ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ಕೈಗೊಳ್ಳಲಿದ್ದು, ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಏಕಕಾಲದಲ್ಲಿ ಬೂತ್ ಸಮಿತಿ ಸಭೆ ನಡೆಯಲಿದೆ. ನಂತರ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏ.15, 16, 17ರಂದು ಮನೆ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲ ನಾಯಕರು ತಮ್ಮ ತಮ್ಮ ಬೂತ್‌ಗಳಲ್ಲಿ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೋದಿ ಅಧಿಕಾರಕ್ಕೆ ಬಂದ ಕಳೆದ 10 ವರ್ಷಗಳಲ್ಲಿ ಆಗಿರುವ ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಸಿತ ಭಾರತ ಎಂಬ ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗಲಿದ್ದೇವೆ ಎಂದು ಸುನಿಲ್ ಕುಮಾರ್ ವಿವರಿಸಿದರು.
ನಕ್ಸಲ್ ಬಗ್ಗೆ ಮೃದು ಧೋರಣೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಕ್ಸಲರಿಗೆ ಹೆಚ್ಚಿನ ಹುಮ್ಮಸ್ಸು ಬಂದಿದ್ದು, ನಕ್ಸಲ್ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ಸರ್ಕಾರದ ಧೋರಣೆಯೂ ಈ ಶಕ್ತಿಗಳನ್ನು ಪೋಷಿಸುವಂತೆಯೇ ಇದೆ ಎಂದು ಆರೋಪಿಸಿದ ಅವರು, ಸಮಾಜದ ಭದ್ರತೆ ದೃಷ್ಟಿಯಿಂದ ಇಂಥ ವಿಧ್ವಂಸಕ ಕೃತ್ಯಗಳನ್ನು ಮಟ್ಟ ಹಾಕುವ ದಿಟ್ಟತನವನ್ನು ಸರ್ಕಾರ ತೋರಿಸಬೇಕು ಎಂದು ಒತ್ತಾಯಿಸಿದರು.