Asianet Suvarna News Asianet Suvarna News

ಭ್ರಷ್ಟರ ಲೂಟಿ ಹಣ ಜನರಿಗೇ ವಾಪಸ್‌: ಪ್ರಧಾನಿ ಮೋದಿ

ಉದ್ಯೋಗ ಪಡೆಯಲೆಂದು ರಾಜ್ಯದ ಬಡವರು ನೀಡಿರುವ ಲಂಚದ ಹಣ 3000 ಕೋಟಿ ರು.ನಷ್ಟಿದೆ. ಇಷ್ಟು ಮೊತ್ತದ ನಗದು ಅಥವಾ ಇತರೆ ವಸ್ತುಗಳನ್ನು ಈಗಾಗಲೇ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಈ ಹಣವನ್ನು ರಾಜ್ಯದ ಬಡವರಿಗೆ ಮರಳಿಸಲು ಕಾನೂನಿನಲ್ಲಿ ಏನೇನು ಅವಕಾಶ ಇದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ: ಪ್ರಧಾನಿ ನರೇಂದ್ರ ಮೋದಿ 

PM Narendra Modi Talks Over Corruption in India grg
Author
First Published Mar 28, 2024, 7:03 AM IST

ನವದೆಹಲಿ/ಕೋಲ್ಕತಾ(ಮಾ.28):  ಪಶ್ಚಿಮ ಬಂಗಾಳದ ಬಡವರಿಂದ ಲೂಟಿ ಮಾಡಿದ ಹಣವನ್ನು ಅವರಿಗೇ ಮರಳಿಸುವ ಕುರಿತು ಕೇಂದ್ರ ಸರ್ಕಾರ ಕಾರ್ಯತತ್ಪರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಂಗಾಳದ ಕೃಷ್ಣಾನಗರ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಹಾಗೂ ಪ್ರಶ್ನೆ-ಲಂಚ ಪ್ರಕರಣದಲ್ಲಿ ಇ.ಡಿ. ತನಿಖೆಗೆ ಗುರಿ ಆಗಿರುವ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ರಾಜಮನೆತನದ ಅಮೃತಾ ರಾಯ್‌ಗೆ ಬುಧವಾರ ದೂರವಾಣಿ ಕರೆ ಮಾಡಿದ ಮೋದಿ ಈ ಮಾತು ಹೇಳಿದ್ದಾರೆ.

‘ಉದ್ಯೋಗ ಪಡೆಯಲೆಂದು ರಾಜ್ಯದ ಬಡವರು ನೀಡಿರುವ ಲಂಚದ ಹಣ 3000 ಕೋಟಿ ರು.ನಷ್ಟಿದೆ. ಇಷ್ಟು ಮೊತ್ತದ ನಗದು ಅಥವಾ ಇತರೆ ವಸ್ತುಗಳನ್ನು ಈಗಾಗಲೇ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಈ ಹಣವನ್ನು ರಾಜ್ಯದ ಬಡವರಿಗೆ ಮರಳಿಸಲು ಕಾನೂನಿನಲ್ಲಿ ಏನೇನು ಅವಕಾಶ ಇದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಈ ವಿಷಯವನ್ನು ನೀವು ಮತದಾರರ ಗಮನಕ್ಕೆ ತನ್ನಿ. ನಾವು ಅಧಿಕಾರಕ್ಕೆ ಬರುತ್ತಲೇ ಅಗತ್ಯ ಬಿದ್ದರೆ ಈ ಸಂಬಂಧ ಕಾನೂನು ರೂಪಿಸಲು ಬದ್ಧ ಎಂದು ಮನವರಿಕೆ ಮಾಡಿಕೊಡಿ’ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ 2024: ಬಂಗಾಳದಲ್ಲಿ ದೀದಿ-ಮೋದಿ ಮಹಾಯುದ್ಧ..!

ಇದೇ ವೇಳೆ ತಮ್ಮನ್ನು ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ತಮ್ಮ ರಾಜಮನೆತನ ಬ್ರಿಟಿಷರಿಗೆ ಬೆಂಬಲ ನೀಡಿತ್ತು ಎಂದು ವಿಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಅಮೃತಾ ರಾಯ್‌ ಮೋದಿ ಗಮನ ಸೆಳೆದರು. ಅಲ್ಲದೆ 18ನೇ ಶತಮಾನದಲ್ಲಿ ಸ್ಥಳೀಯ ಪ್ರದೇಶ ಅಳಿದ್ದ ಕೃಷ್ಣಚಂದ್ರರಾಯ್‌ ಅವರು ಜನರಿಗಾಗಿ ಕೆಲಸ ಮಾಡಿದ್ದರು ಮತ್ತು ಸನಾತನ ಧರ್ಮ ಉಳಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ‘ಇಂಥ ಆರೋಪಗಳಿಂದ ನೀವು ಒತ್ತಡಕ್ಕೆ ಒಳಗಾಗಬೇಡಿ. ಅವರು (ಟಿಎಂಸಿ) ವೋಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಾರೆ ಮತ್ತು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇಂಥ ಇಲ್ಲ- ಸಲ್ಲದ ಆರೋಪ ಮಾಡುತ್ತಾರೆ. ಒಂದೆಡೆ ಅವರು ರಾಮನ ಅಸ್ತಿತ್ವ ಪ್ರಶ್ನಿಸುತ್ತಾರೆ. ಮತ್ತೊಂದೆಡೆ 2-3 ಶತಮಾನಗಳ ಹಿಂದಿನ ಘಟನೆಗಳನ್ನು ಮುಂದಿಟ್ಟುಕೊಂಡು ಇತರರನ್ನು ಅವಮಾನಿಸುವ ಕೆಲಸ ಮಾಡುತ್ತಾರೆ. ಇದು ಅವರ ದ್ವಂದ್ವ ನಿಲುವಿಗೆ ಸಾಕ್ಷಿ’ ಎಂದು ಅಮೃತಾ ರಾಯ್‌ಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಜೊತೆಗೆ ಕ್ಷೇತ್ರದಲ್ಲಿ ನೀವು ಗೆಲ್ಲುವುದು ಖಚಿತ. ಅಧಿಕಾರಕ್ಕೆ ಏರಿದ ನಂತರದ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಈಗಲೇ ಸಿದ್ಧಪಡಿಸಿಕೊಳ್ಳಿ ಎಂದು ಅಮೃತಾ ಅವರಿಗೆ ಸಲಹೆ ನೀಡಿದರು.

ಇದೇ ವೇಳೆ ಮದ್ಯ ಲೈಸೆನ್ಸ್‌ ಹಗರಣದಲ್ಲಿ ಕೇಜ್ರಿವಾಲ್‌ ಬಂಧನವಾಗುತ್ತಲೇ ಅವರನ್ನು ಸಮರ್ಥಿಸಿದ ಕಾಂಗ್ರೆಸ್‌ ಬಗ್ಗೆಯೂ ಕಿಡಿಕಾರಿದ ಪ್ರಧಾನಿ ಮೋದಿ, ‘ಯಾರು ಕೇಜ್ರಿವಾಲ್‌ ವಿರುದ್ಧ ದೂರು ನೀಡಿದ್ದರೂ ಅವರೇ ಇದೀಗ ಅವರ ಪಕ್ಷ ವಹಿಸಿದ್ದಾರೆ. ಇದು ಅವರ ಆದ್ಯತೆ ಅಧಿಕಾರವೇ ಹೊರತು ದೇಶ ಅಲ್ಲ ಎಂದು ಸಾಬೀತುಪಡಿಸಿದೆ’ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ನೇತೃತ್ವದ ಮೈತ್ರಿಕೂಟವು ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಯುವಸಮೂಹಕ್ಕೆ ಒಳ್ಳೆಯ ಭವಿಷ್ಯ ನೀಡಲು ಮುಂದಾಗಿದ್ದರೆ, ಮತ್ತೊಂದೆಡೆ ಭ್ರಷ್ಟರೆಲ್ಲಾ ಒಂದಾಗಿದ್ದಾರೆ ಎಂದು ಹೆಸರು ಹೇಳದೆಯೇ ಇಂಡಿಯಾ ಮೈತ್ರಿಕೂಟದ ಬಗ್ಗೆ ಟೀಕಿಸಿದರು.

Follow Us:
Download App:
  • android
  • ios