Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಬಂಗಾಳದಲ್ಲಿ ದೀದಿ-ಮೋದಿ ಮಹಾಯುದ್ಧ..!

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ದೊಡ್ಡ ಆಸ್ತಿಯೇ ಮಮತಾ ಬ್ಯಾನರ್ಜಿ. ಅವರಿಗೆ ಸರಿಸಮನಾಗಿ ನಿಂತು ಪೈಪೋಟಿ ನೀಡಬಲ್ಲ ನಾಯಕ/ನಾಯಕಿ ರಾಜ್ಯದಲ್ಲಿ ಯಾರೂ ಇಲ್ಲ. ಟಿಎಂಸಿ ಅತ್ಯುತ್ತಮ ಸಂಘಟನೆ ಹೊಂದಿದೆ. ಶೇ.50ರಷ್ಟಿರುವ ಮಹಿಳೆಯರನ್ನು ಗುರಿಯಾಗಿಸಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನೂ ತಂದಿದೆ. ಜನಸಂಖ್ಯೆಯಲ್ಲಿ ಶೇ.30ರಷ್ಟಿರುವ ಅಲ್ಪಸಂಖ್ಯಾತರು ಬಿಜೆಪಿ ಕಾರಣ ಕೈಹಿಡಿಯುತ್ತಾರೆ ಎಂಬ ನಂಬಿಕೆ ಹೊಂದಿದೆ. ಇದರ ಜತೆಗೆ ಸಿಎಎ, ಕೇಂದ್ರದಿಂದ ತಾರತಮ್ಯದಂತಹ ಅಸ್ತ್ರ ಕೂಡ ಸಿಕ್ಕಿದೆ.

Fight Between Mamata Banerjee and Narendra Modi in West Bengal in Lok Sabha Election 2024 grg
Author
First Published Mar 28, 2024, 6:17 AM IST

ಕೋಲ್ಕತಾ(ಮಾ.28):  ದೇಶದ ಜನರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ರಾಜ್ಯಗಳ ಲೋಕಸಭೆ ಚುನಾವಣೆ ಫಲಿತಾಂಶಗಳ ಪೈಕಿ ಪಶ್ಚಿಮ ಬಂಗಾಳವೂ ಒಂದು. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲುತ್ತಾರಾ? ಅಥವಾ ಅವರ ವಿರುದ್ಧ ಸಮರ ಸಾರಿರುವ ಬಿಜೆಪಿಯು ಸ್ಥಾನ ಗಳಿಕೆಯಲ್ಲಿ ಆಡಳಿತ ಪಕ್ಷವನ್ನು ಹಿಂದಿಕ್ಕುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ಹಲವು ರಾಜ್ಯಕೀಯ ಸಾಧ್ಯತೆಗಳು ನಿಶ್ಚಿತವಾಗಿಯೂ ತೆರೆದುಕೊಳ್ಳುತ್ತವೆ. ರಾಜ್ಯದಲ್ಲಿ ಏ.19ರಿಂದ ಹಿಡಿದು ಜೂ.1ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.

ಮಮತಾಗೆ ಅನುಕೂಲ ಹೇಗಿದೆ?:

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ದೊಡ್ಡ ಆಸ್ತಿಯೇ ಮಮತಾ ಬ್ಯಾನರ್ಜಿ. ಅವರಿಗೆ ಸರಿಸಮನಾಗಿ ನಿಂತು ಪೈಪೋಟಿ ನೀಡಬಲ್ಲ ನಾಯಕ/ನಾಯಕಿ ರಾಜ್ಯದಲ್ಲಿ ಯಾರೂ ಇಲ್ಲ. ಟಿಎಂಸಿ ಅತ್ಯುತ್ತಮ ಸಂಘಟನೆ ಹೊಂದಿದೆ. ಶೇ.50ರಷ್ಟಿರುವ ಮಹಿಳೆಯರನ್ನು ಗುರಿಯಾಗಿಸಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನೂ ತಂದಿದೆ. ಜನಸಂಖ್ಯೆಯಲ್ಲಿ ಶೇ.30ರಷ್ಟಿರುವ ಅಲ್ಪಸಂಖ್ಯಾತರು ಬಿಜೆಪಿ ಕಾರಣ ಕೈಹಿಡಿಯುತ್ತಾರೆ ಎಂಬ ನಂಬಿಕೆ ಹೊಂದಿದೆ. ಇದರ ಜತೆಗೆ ಸಿಎಎ, ಕೇಂದ್ರದಿಂದ ತಾರತಮ್ಯದಂತಹ ಅಸ್ತ್ರ ಕೂಡ ಸಿಕ್ಕಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ತಂದೆ ಯಾರು?: ಬಿಜೆಪಿ ನಾಯಕ ಘೋಷ್‌ ವಿವಾದ

ಆದರೆ, ಪಕ್ಷದೊಳಗೆ ಹಿರಿಯರು- ಕಿರಿಯರ ನಡುವೆ ಸಂಘರ್ಷವಿದೆ. ಭ್ರಷ್ಟಾಚಾರ ಆರೋಪಗಳು ಪಕ್ಷದ ಇಮೇಜ್‌ಗೆ ಧಕ್ಕೆ ತಂದಿವೆ. ಅಭ್ಯರ್ಥಿ ಆಯ್ಕೆ ಕುರಿತು ಒಳಜಗಳ-ಅಸಮಾಧಾನವೂ ಇದೆ. ದೇಶಾದ್ಯಂತ ಸಂದೇಶ್‌ಖಾಲಿ ಪ್ರಕರಣ ಮುಳುವಾಗುವ ಭೀತಿಯೂ ಇದೆ. ಇದೆಲ್ಲದರ ನಡುವೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಟಿಎಂಸಿ ಹೊಂದಿದೆ. ಬಿಜೆಪಿಗಿಂತ ಕಡಿಮೆ ಸ್ಥಾನ ಗೆದ್ದರೆ ಶಾಸಕರ ಆ ಪಕ್ಷದತ್ತ ವಲಸೆ ಹೋಗಿ, ಸರ್ಕಾರಕ್ಕೆ ಗಂಡಾಂತರ ಎದುರಾಗುವ ಆತಂಕವೂ ಕಾಡುತ್ತಿದೆ. 2019ರಲ್ಲಿ ಇದೇ ರೀತಿ ಆಗಿದ್ದನ್ನು ಪಕ್ಷ ಮರೆತಿಲ್ಲ.

ಬಿಜೆಪಿಗೆ ಮೋದಿಯೇ ವರ:

ಬಿಜೆಪಿಗೆ ಮೋದಿ ಹೆಸರೇ ವರವಾಗಿದೆ. ಸಿಎಎ, ಮಮತಾ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪ, ಕಾನೂನು ಸುವ್ಯವಸ್ಥೆ ಕುಸಿತ, ಸಂದೇಶ್‌ ಖಾಲಿ ಪ್ರಕರಣಗಳು ಪ್ರಬಲ ಅಸ್ತ್ರವಾಗಿವೆ. ಆರ್‌ಎಸ್‌ಎಸ್‌ ತಳಮಟ್ಟಕ್ಕೆ ತಲುಪಿರುವುದು ಪ್ಲಸ್‌. ಆದರೆ 2021ರ ವಿಧಾನಸಭೆ ಚುನಾವಣೆ ನಂತರ ಸಂಘಟನೆ ಪ್ರಬಲವಾಗಿಲ್ಲ. ಹಲವು ಶಾಸಕರು, ಸಂಸದರು ಮಮತಾ ಪಕ್ಷಕ್ಕೆ ಜಿಗಿದಿದ್ದಾರೆ. ಸಿಎಎ ಕೆಲವು ಕಡೆ ತಿರುಗುಬಾಣವಾಗುವ ಸಾಧ್ಯತೆ ಇದೆ. 2026ರಲ್ಲಿ ಬಂಗಾಳದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿ, 2019ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಗುರಿ ಹೊಂದಿದೆ.

ಕಾಂಗ್ರೆಸ್‌-ಎಡರಂಗ:

ಎರಡೂ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಕಾದಾಡುತ್ತಿವೆ. ಮಮತಾ- ಬಿಜೆಪಿ ವಿರೋಧಿ ಮತಗಳು ಸಾಕಷ್ಟಿವೆ. ಎರಡೂ ಪಕ್ಷಗಳನ್ನು ವಿರೋಧಿಸುವವರು ತಮ್ಮ ಕಡೆ ಬರಬಹುದು ಎಂಬುದು ಎರಡೂ ಪಕ್ಷಗಳ ಲೆಕ್ಕಾಚಾರ. ಮುಸ್ಲಿಂ ಮತಗಳ ಮೇಲೂ ಕಣ್ಣಿಟ್ಟಿವೆ. ಆದರೆ ತಳಮಟ್ಟದಲ್ಲಿ ಸಂಘಟನೆ ದುರ್ಬಲವಾಗಿದೆ. ಪ್ರಬಲ ನಾಯಕರ ಕೊರತೆಯೂ ಇದೆ. ಈ ಚುನಾವಣೆಯಲ್ಲಿ ಸಾಕಷ್ಟು ಸ್ಥಾನ ಗೆಲ್ಲದಿದ್ದರೆ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ.

ಚುನಾವಣಾ ವಿಷಯ: 

ಈ ಬಾರಿ ಬಿಜೆಪಿ ಪಾಲಿಗೆ ಸಂದೇಶ್‌ ಖಾಲಿಯಲ್ಲಿ ಟಿಎಂಸಿ ನಾಯಕರ ಭೂಕಬಳಿಕೆ, ಲೈಂಗಿಕ ಕಿರುಕುಳ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳು, ಸಿಎಎ ಜಾರಿ ಪ್ರಮುಖ ಅಸ್ತ್ರಗಳಾಗಿವೆ. ಮತ್ತೊಂದೆಡೆ ಸಿಎಎ ಜಾರಿ, ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರದ ತಾರತಮ್ಯ ಮಾಡುತ್ತಿದೆ ಎಂಬ ವಿಷಯ ಮುಂದಿಟ್ಟು ಹೋರಾಟಕ್ಕೆ ಟಿಎಂಸಿ ಸಜ್ಜಾಗಿದೆ. ಇಂಡಿಯಾ ಮೈತ್ರಿಕೂಟವು ನಿರುದ್ಯೋಗ, ಆರ್ಥಿಕ ಕುಸಿತ, ರೈತರ ವಿಷಯ ಮುಂದಿಟ್ಟು ಹೋರಾಟಕ್ಕೆ ಸಜ್ಜಾಗಿದೆ.

'ಗಾಂಧಿ-ಗೋಡ್ಸೆ ನಡುವೆ ಆಯ್ಕೆ ಸಾಧ್ಯವಿಲ್ಲ..' ಮಾಜಿ ನ್ಯಾಯಮೂರ್ತಿ, ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ

ಸ್ಪರ್ಧೆ ಹೇಗೆ?

ರಾಜ್ಯದಲ್ಲಿ ಇಂಡಿಯಾ ಕೂಟದ ಮೈತ್ರಿ ಮುರಿದು ಬಿದ್ದ ಪರಿಣಾಮ ಎಲ್ಲಾ 42 ಕ್ಷೇತ್ರಗಳಿಗೆ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಉಳಿದಂತೆ ಕಾಂಗ್ರೆಸ್‌, ಇಂಡಿಯಾ ಮೈತ್ರಿಕೂಟ ಜೊತೆಗೂಡಿ ಕಣಕ್ಕೆ ಇಳಿಯುವ ಪ್ರಯತ್ನದಲ್ಲಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಟಿಎಂಸಿಗೆ ಬಿಜೆಪಿಯೇ ಪ್ರಬಲ ಪ್ರತಿಸ್ಪರ್ಧಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಜೊತೆಗೆ ಟಿಎಂಸಿಯನ್ನು ಬಿಜೆಪಿ ಹಿಂದಿಕ್ಕುವ ಸಾಧ್ಯತೆಯನ್ನೂ ಊಹಿಸಲಾಗಿದೆ. ಇಂಡಿಯಾ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಿದರೆ ಅದು ಬಿಜೆಪಿ ಹೆಚ್ಚಿನ ಸೀಟು ಗೆಲ್ಲುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಟಿಎಂಸಿ ಏಕಾಂಗಿಯಾಗಿ ಮಮತಾರನ್ನು ಮತ್ತು ಬಿಜೆಪಿ ಏಕಾಂಗಿಯಾಗಿ ಮೋದಿ ಅವರ ಬಲದ ಮೇಲೆ ಚುನಾವಣೆ ಎದುರಿಸುತ್ತಿವೆ.

ಒಟ್ಟು ಸ್ಥಾನ 42
ಚುನಾವಣೆ 7 ಹಂತ
ಪಶ್ಚಿಮ ಬಂಗಾಳ
ಒಟ್ಟು ಸ್ಥಾನ 42
ಪಕ್ಷ ಸ್ಥಾನ %ಮತ
ಟಿಎಂಸಿ 22 48
ಬಿಜೆಪಿ 18 38
ಕಾಂಗ್ರೆಸ್‌ 02 5.6
ಎಡರಂಗ 0 6.3

ಪ್ರಮುಖ ಹುರಿಯಾಳುಗಳು

ನ್ಯಾ. ಅಭಿಜೀತ್‌ ಗಂಗೂಲಿ, ರೇಖಾ ಪಾತ್ರ, ಅಮೃತಾ ರಾಯ್‌, ಮಹುವಾ ಮೊಹಿತ್ರಾ, ಅಭಿಷೇಕ್‌ ಬ್ಯಾನರ್ಜಿ, ಯೂಸುಫ್‌ ಪಠಾಣ್‌, ಶತ್ರುಜ್ಞ ಸಿನ್ಹಾ, ಕೀರ್ತಿ ಆಜಾದ್‌.

Follow Us:
Download App:
  • android
  • ios