ಪ್ರಧಾನಿ ಮೋದಿ ‘ಮಹಾ’ ಮತ ಕಹಳೆ: ಸಿದ್ದರಾಮಯ್ಯಗೆ ಕಪಾಳಮೋಕ್ಷ ಟಾಂಗ್!
ಪ್ರಧಾನಿ ನರೇಂದ್ರ ಮೋದಿ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾವೇಶ ‘ಮಹಾಸಂಗಮ’ವನ್ನು ಉದ್ಘಾಟಿಸಿ ಚುನಾವಣಾ ಪಾಂಚಜನ್ಯ ಮೊಳಗಿಸಿದರು.
ದಾವಣಗೆರೆ/ಬೆಂಗಳೂರು/ಚಿಕ್ಕಬಳ್ಳಾಪುರ (ಮಾ.26): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಮತಬೇಟೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾವೇಶ ‘ಮಹಾಸಂಗಮ’ವನ್ನು ಉದ್ಘಾಟಿಸಿ ಚುನಾವಣಾ ಪಾಂಚಜನ್ಯ ಮೊಳಗಿಸಿದರು. ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಪಕ್ಷದ ಮೊದಲ ಚುನಾವಣಾ ರಾರಯಲಿ ನಡೆಸಿ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಮೋದಿ ಟೀಕಾ ಪ್ರಹಾರ ನಡೆಸಿದರು. ಕಲಬುರಗಿ ಮಹಾನಗರಪಾಲಿಕೆಯ ಮೇಯರ್, ಉಪ-ಮೇಯರ್ ಚುನಾವಣೆಯಲ್ಲಿ ಬಿಜೆಪಿ ವಿಜಯ ಪ್ರಸ್ತಾಪಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಾಂಗ್ ನೀಡಿದರು.
ಜೊತೆಗೆ, ಕಾಂಗ್ರೆಸ್ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಮಾಡಿದ ಕಪಾಳಮೋಕ್ಷವನ್ನು ಪ್ರಸ್ತಾಪಿಸಿ, ರಾಜ್ಯದ ಪ್ರತಿಪಕ್ಷ ನಾಯಕನ ಕಾರ್ಯವೈಖರಿ ಕುರಿತು ವ್ಯಂಗ್ಯವಾಡಿದರು. ಇದೇ ವೇಳೆ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಘೋಷಣೆ ನಂಬಬೇಡಿ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ನೋಡಿ ಮತ ನೀಡಿ ಎನ್ನುವ ಮೂಲಕ ಜನರ ಬಳಿ ಮತಯಾಚಿಸಿದರು. ಅಲ್ಲದೆ, ನಗರದ ಜಿಎಂಐಟಿ ಹೆಲಿಪ್ಯಾಡ್‌ನಿಂದ ತೆರೆದ ಜೀಪಿನಲ್ಲಿ ಸಮಾವೇಶದ ಪೆಂಡಾಲ್‌ನೊಳಗೆ ರೋಡ್ ಶೋ ಮೂಲಕ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಸಂಚು: ಕೇಂದ್ರ ಗೃಹ ಸಚಿವ ಅಮಿತ್ ಶಾ
ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ಉದ್ಘಾಟನೆ: ಇದಕ್ಕೂ ಮೊದಲು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳಕ್ಕೆ ತೆರಳಿ, ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಪ್ಪನಮನ ಸಲ್ಲಿಸಿದರು. ಬಳಿಕ, ಸರ್‌ಎಂವಿ ವಾಸವಿದ್ದ ಮನೆ ಹಾಗೂ ಅವರು ಬಳಸುತ್ತಿದ್ದ ವಸ್ತುಗಳ ಮ್ಯೂಸಿಯಂಗೂ ಭೇಟಿ ನೀಡಿ ವೀಕ್ಷಿಸಿದರು. ನಂತರ, ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಉಚಿತ ಚಿಕಿತ್ಸಾ ಸೌಲಭ್ಯ ಹೊಂದಿರುವ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿದರು.
ಬೆಂಗಳೂರಲ್ಲಿ ಮೆಟ್ರೋ ಉದ್ಘಾಟನೆ: ಬಳಿಕ, ಬೆಂಗಳೂರಿನ ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಕ್ಕೆ ಆಗಮಿಸಿ, ‘ನಮ್ಮ ಮೆಟ್ರೋ’ದ ಮೊದಲ ಐಟಿ ಕಾರಿಡಾರ್ ಆಗಿರುವ ವೈಟ್‌ಫೀಲ್ಡ್ - ಕೆ.ಆರ್.ಪುರ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಜನಸಾಮಾನ್ಯರಂತೆ ಟಿಕೆಟ್ ಕೌಂಟರ್‌ನಲ್ಲಿ ಮೊದಲ ಬಾರಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡನ್ನು (ಎನ್‌ಸಿಎಂಸಿ) ಪಡೆದು, ಪ್ಲಾಟ್‌ಫಾಮ್‌ರ್‍ಗೆ ಆಗಮಿಸಿ, ಹೂವುಗಳಿಂದ ಅಲಂಕೃತವಾಗಿದ್ದ ಮೆಟ್ರೋ ರೈಲನ್ನು ಏರಿ ಸುಮಾರು ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರು. .4249 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೇರಳೆ ಮಾರ್ಗದ ರೀಚ್-1 ವಿಸ್ತರಿತ 13.71 ಕಿ.ಮೀ. ನೂತನ ಮೆಟ್ರೋ ಮಾರ್ಗ ಇದಾಗಿದೆ. ಆ ಮೂಲಕ ದೇಶದ 2ನೇ ಅತಿ ಉದ್ದದ ಮೆಟ್ರೋ ಎಂಬ ಖ್ಯಾತಿಗೆ ‘ನಮ್ಮ ಮೆಟ್ರೋ’ ಒಳಗಾಗಿದೆ.
ಎಲ್ಲೆಡೆ ಮೋದಿ, ಮೋದಿ ಘೋಷಣೆ: ಮೋದಿ ಭೇಟಿ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಕೇಸರಿಮಯವಾಗಿತ್ತು. ನಗರದ ಜಿಎಂಐಟಿ ಕಾಲೇಜು ಪಕ್ಕ 400 ಎಕರೆ ವಿಶಾಲ ಪ್ರದೇಶದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ 7-8 ಲಕ್ಷ ಜನ ಪಾಲ್ಗೊಂಡಿದ್ದರು. ನಗರದೆಲ್ಲೆಡೆ ಮೋದಿಗೆ ಸ್ವಾಗತ ಕೋರುವ ಪ್ಲೆಕ್ಸ್, ಬಂಟಿಂಗ್ಸ್‌ಗಳನ್ನು ಹಾಕಲಾಗಿತ್ತು. ಎಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಮೋದಿಯನ್ನು ಕಣ್ತುಂಬಿಕೊಳ್ಳಲು ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಯುವಕರು-ಮಹಿಳೆಯರು ಕೇಸರಿ ಪೇಟ ಧರಿಸಿ, ಮೋದಿ ಪರ ಘೋಷಣೆ ಕೂಗುತ್ತಿದ್ದರು. ‘ಮತ್ತೊಂದ್ ಸಾರಿ ಮೋದಿ ಸರ್ಕಾರ’, ಏಕ್‌ದೋ ತೀನ್ ಚಾರ್ ಮೋದಿಜಿ ಕಿ ಜೈಜೈಕಾರ್, ಹರ್‌ಹರ್ ಮೋದಿ, ಘರ್ ಘರ್ ಮೋದಿ ಘೋಷಣೆಗಳು ಎಲ್ಲೆಡೆ ಮೊಳಗಿದವು. ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗೆ ನಮ್ಮ ಸರ್ಕಾರ ಒತ್ತು: ಕನ್ನಡ ಒಂದು ಸಮೃದ್ಧ ಹಾಗೂ ದೇಶದ ಗೌರವ ಹೆಚ್ಚಿಸುವ ಭಾಷೆಯಾಗಿದೆ. ಈ ಹಿಂದಿನ ಸರ್ಕಾರಗಳು ಎಂಜಿನಿಯರಿಂಗ್, ಮೆಡಿಕಲ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ಕ್ರಮ ಕೈಗೊಂಡಿರಲಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಹೀಗಾಗಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ನೀಡಿದೆ.
ಹಿಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ: ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ಕಾಂಗ್ರೆಸ್ ಅಧ್ಯಕ್ಷರ ತವರಲ್ಲೇ ಬಿಜೆಪಿ ಗೆಲುವಿನ ಮುನ್ನುಡಿ: ಎಐಸಿಸಿ ಅಧ್ಯಕ್ಷರ ಕರ್ಮಭೂಮಿ ಕಲಬುರಗಿಯಲ್ಲಿ ನಡೆದ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ತನ್ಮೂಲಕ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲೇ ಬಿಜೆಪಿಯ ವಿಜಯ ದುಂದುಭಿ ಮೊಳಗಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತವೂ ಆಗಿದೆ. ಇದು ಅಲ್ಲಿಗಷ್ಟೇ ಸೀಮಿತವಲ್ಲ. ಡಬಲ್ ಎಂಜಿನ್ ಸರ್ಕಾರದ ಸಾಧನೆ ನೋಡಿ ಇಡೀ ರಾಜ್ಯದಲ್ಲಿ ಕಮಲ ಅರಳಿಸಲು ಜನ ಮುಂದಾಗಿದ್ದಾರೆ.