ಕಾಂಗ್ರೆಸ್‌ಗೇ ವಾರಂಟಿ ಇಲ್ಲ, ಕೈ ಗ್ಯಾರಂಟಿಗೆ ಅರ್ಥವೇ ಇಲ್ಲ: ಪ್ರಧಾನಿ ಮೋದಿ
ಬಿಜೆಪಿಯ ಲಕ್ಷಾಂತರ ಕಾರ‍್ಯಕರ್ತರ ಜತೆ ವರ್ಚುವಲ್ ಸಂವಾದ, ಪ್ರತಿಪಕ್ಷದ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಪ್ರಧಾನಿ ತೀವ್ರ ವಾಗ್ದಾಳಿ, ಉಚಿತ ಸ್ಕೀಂ ಸಂಸ್ಕೃತಿ ನಿಲ್ಲಸದಿದ್ದರೆ ರಾಜ್ಯ ಸಾಲದ ಸುಳಿಗೆ ಸಿಲುಕುತ್ತದೆ.
ಬೆಂಗಳೂರು(ಏ.28): ಕಾಂಗ್ರೆಸ್ ಪಕ್ಷಕ್ಕೇ ವಾರಂಟಿ ಇಲ್ಲ, ಹೀಗಾಗಿ ಅದರ ಗ್ಯಾರಂಟಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ಸಿನ ಚುನಾವಣಾ ಭರವಸೆಗಳ ಬಗ್ಗೆ ಲೇವಡಿ ಮಾಡಿದ್ದಾರೆ.
ಇದೇ ವೇಳೆ ರೇವಡಿ (ಉಚಿತವಾಗಿ ನೀಡುವುದನ್ನು) ಸಂಸ್ಕೃತಿಯನ್ನು ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಲಿದೆ ಎಂದು ಕಾಂಗ್ರೆಸ್‌ನ ಉಚಿತ ಯೋಜನೆಗಳಿಗೆ ಟಾಂಗ್ ಕೊಟ್ಟಿದ್ದಾರೆ. ಗುರುವಾರ ಮೋದಿ ಅವರು ರಾಜ್ಯ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಸಂವಾದದಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡದ ಅರುಣ್ ಎಂಬುವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ, ಭ್ರಷ್ಟಾಚಾರದ ಗ್ಯಾರಂಟಿ. ಯಾವ ಗ್ಯಾರಂಟಿಯನ್ನೂ ನೀಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಏಕೆಂದರೆ ಆ ಪಕ್ಷದ ವಾರಂಟಿಯೇ ಮುಗಿದುಹೋಗಿದೆ. ಕಾಂಗ್ರೆಸ್ ಈಗಾಗಲೇ ಎಕ್ಸ್‌ಪೈರ್ ಆಗಿದೆ. ಈಗ ಅದರ ಗ್ಯಾರಂಟಿಗೆ ಯಾವ ಬೆಲೆಯೂ ಇಲ್ಲ ಎಂದು ವ್ಯಂಗ್ಯವಾಡಿದರು.
Party Rounds: ಬಿಜೆಪಿ ಕಾರ್ಯಕರ್ತರಿಗೆ ಬೂತ್ ಗೆಲ್ಲಲು ಪ್ರಧಾನಿ ಮೋದಿ ರಾಜಕೀಯ ಪಾಠ!
ಉಚಿತ ಕೊಡುಗೆಗಳಿಂದಾಗಿ ರಾಜ್ಯಗಳು ಸಾಲದ ಸುಳಿಯಲ್ಲಿ ಮುಳುಗುತ್ತಿವೆ. ದೇಶ ಮತ್ತು ಸರ್ಕಾರಗಳನ್ನು ಈ ರೀತಿ ನಡೆಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಕಾಂಗ್ರೆಸ್‌ಗೆ ಯಾವುದೇ ಆಸಕ್ತಿ ಇಲ್ಲ. ರಾಜಕೀಯವನ್ನು ಅಧಿಕಾರ ಮತ್ತು ಭ್ರಷ್ಟಾಚಾರದ ಸಾಧನವನ್ನಾಗಿ ಮಾಡಿಕೊಂಡಿದೆ. ಭ್ರಷ್ಟಾಚಾರವೇ ಅದರ ಅತಿದೊಡ್ಡ ಮೂಲವಾಗಿದೆ. 2014ರ ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಷ್ಟುವೇಗವಾಗಿ ನಡೆಯುತ್ತಿದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ. ಜನಧನ್, ಆಧಾರ್ ಮತ್ತು ಮೊಬೈಲ್ ಎಂಬ ತ್ರಿಶೂಲ ಭ್ರಷ್ಟಾಚಾರಕ್ಕೆ ದೊಡ್ಡ ಹೊಡೆತ ನೀಡಿದೆ. ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಪಕ್ಷಗಳು ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಇದೇ ವೇಳೆ ಎಫ್‌ಡಿಐಗೆ ಹೊಸ ವ್ಯಾಖ್ಯಾನ ಹೇಳಿದ ಅವರು, ಸಾಮಾನ್ಯವಾಗಿ ಎಫ್‌ಡಿಐ ಎಂದರೆ ವಿದೇಶ ನೇರ ಹೂಡಿಕೆ ಎಂದು ಹೇಳುತ್ತೇವೆ. ಆದರೆ, ಮತ್ತೊಂದು ವ್ಯಾಖ್ಯಾನವೆಂದರೆ ‘ಭಾರತವನ್ನು ಮೊದಲು ಅಭಿವೃದ್ಧಿಪಡಿಸಿ’ (ಫಸ್ಟ್ ಡೆವಲಪ್ ಇಂಡಿಯಾ) ಎಂಬುದು. ನಾವು ಇದೇ ಧ್ಯೇಯ ಹೊಂದಿದ್ದೇವೆ. ಮುಂದಿನ 25 ವರ್ಷದಲ್ಲಿ ಭಾರತವನ್ನು ಮುನ್ನಡೆಸುವ ಬಗ್ಗೆ ಯೋಚನೆ ಮಾಡುತ್ತೇವೆ. ಭಾರತವನ್ನು ಮತ್ತಷ್ಟುಪ್ರಗತಿ ಮಾಡಬೇಕಾದರೆ ಈ ರೇವಡಿ ಸಂಸ್ಕೃತಿಯನ್ನು ತೊಡೆದು ಹಾಕಬೇಕು. ಕೆಲವು ಪಕ್ಷಗಳು ಉಚಿತ ಹಂಚುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ, ಜನರು ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಭವಿಷ್ಯದ ಬಗ್ಗೆ ಯೋಚಿಸಿ
ಭಾರತವನ್ನು ಮತ್ತಷ್ಟು ಪ್ರಗತಿ ಮಾಡಬೇಕಾದರೆ ರೇವಡಿ (ಉಚಿತ) ಸಂಸ್ಕೃತಿಯನ್ನು ತೊಡೆದು ಹಾಕಬೇಕು. ಕೆಲವು ಪಕ್ಷಗಳು ಉಚಿತ ಕೊಡುಗೆ ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ, ಜನರು ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕರ್ನಾಟಕ ಜತೆ ನನಗೆ ನಂಟಿದೆ: ಮೋದಿ
ಕರ್ನಾಟಕ ರಾಜ್ಯದೊಂದಿಗೆ ನನಗೆ ನಂಟಿದೆ. ಅಲ್ಲಿನ ಜನತೆಯ ಆಶೀರ್ವಾದ ಪಡೆಯಲು ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಚಾರ ನಡೆಸಿರುವ ಬಿಜೆಪಿ ನಾಯಕರು ಜನರಿಂದ ಅಪಾರ ಪ್ರೀತಿ, ವಿಶ್ವಾಸ ಪಡೆದಿದ್ದಾರೆ. ಇದು ಬಿಜೆಪಿ ಮೇಲಿನ ಜನರ ವಿಶ್ವಾಸವನ್ನು ತೋರಿಸುತ್ತದೆ. ಸರ್ಕಾರಗಳು ವರ್ತಮಾನದ ಜತೆಗೆ ಭವಿಷ್ಯದ ಬಗ್ಗೆ ಚಿಂತಿಸಬೇಕು. ಸರ್ಕಾರಗಳನ್ನು ದೈನಂದಿನ ಅಗತ್ಯಗಳಿಗಾಗಿ ನಡೆಸಲು ಸಾಧ್ಯವಿಲ್ಲ. ಆಸ್ತಿ ಸೃಷ್ಟಿಗೆ ನಾವು ಕೆಲಸ ಮಾಡಬೇಕಾಗಿದೆ. ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ಸಂವಾದದಲ್ಲಿ ಮೋದಿ ಮಾತು!
ಬಿಜೆಪಿ ಕೆಲಸ ಮಾಡುವ ಕಾರ್ಯವಿಧಾನವೇ ಭಿನ್ನವಾಗಿದೆ. ನಮ್ಮ ವಿರೋಧಿಗಳ ಅಜೆಂಡಾ ಅಧಿಕಾರ ಹಿಡಿಯುವುದಾಗಿದೆ. ಆದರೆ, ಬಿಜೆಪಿಯದ್ದು ಅಧಿಕಾರ ಹಿಡಿಯುವುದಲ್ಲ. ಬಡತನ ಮುಕ್ತ ಮಾಡುವುದು ಮತ್ತು ಯುವಕರ, ರೈತರ, ಮಹಿಳೆಯರ ಸಾಮರ್ಥ್ಯವನ್ನು ಮುಂಚೂಣಿಯಲ್ಲಿರಿಸುವುದು ಬಿಜೆಪಿಯ ಉದ್ದೇಶ ಮತ್ತು ಅಜೆಂಡಾ ಆಗಿದೆ ಎಂದರು.
ಮೋದಿ ವಾಗ್ಬಾಣಗಳು
- ಕಾಂಗ್ರೆಸ್ ಪಕ್ಷ ಎಂದರೆ ಸುಳ್ಳು ಭರವಸೆ. ಭ್ರಷ್ಟಾಚಾರದ ಗ್ಯಾರಂಟಿ ಪಕ್ಷ
- ಕಾಂಗ್ರೆಸ್ ಈಗಾಗಲೇ ಎಕ್ಸ್‌ಪೈರ್ ಆಗಿದೆ. ಅದರ ಗ್ಯಾರಂಟಿಗೆ ಬೆಲೆ ಇಲ್ಲ
- ಉಚಿತ ಕೊಡುಗೆಗಳಿಂದ ರಾಜ್ಯಗಳು ಸಾಲದ ಸುಳಿಯಲ್ಲಿ ಮುಳುಗುತ್ತಿವೆ
- ದೇಶ ಮತ್ತು ಸರ್ಕಾರಗಳನ್ನು ಈ ರೀತಿಯಲ್ಲಿ ನಡೆಸಲು ಸಾಧ್ಯವಿಲ್ಲ
- ಭ್ರಷ್ಟಾಚಾರ ನಿರ್ಮೂಲನೆಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಆಸಕ್ತಿ ಇಲ್ಲ
- ರಾಜಕೀಯವನ್ನು ಅಧಿಕಾರ, ಭ್ರಷ್ಟಾಚಾರದ ಸಾಧನವನ್ನಾಗಿ ಮಾಡಿಕೊಂಡಿದೆ
- ಭ್ರಷ್ಟಾಚಾರವೇ ಆ ಪಕ್ಷದ ಅತಿದೊಡ್ಡ ಮೂಲ. ದೇಶದ ಭವಿಷ್ಯದ ಚಿಂತೆ ಇಲ್ಲ