'ಮೋದಿ, ನಿನ್ನ ಗೋರಿ ತೋಡ್ತೇವೆ ಅಂತಾರೆ: ಬಿಜೆಪಿ ಯಶಸ್ಸಿನಿಂದ ಕಾಂಗ್ರೆಸ್‌ ತೀವ್ರ ಹತಾಶ

ಬಡವರನ್ನು ಅವಮಾನಿಸುವ ‘ಬಾದ್‌ಶಾಹಿ’ ಮನಸ್ಥಿತಿಯ ಜನರನ್ನು ಕಟುವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಸುವ್ಯವಸ್ಥೆಯ ಸವಾಲುಗಳಿಂದ ಭಾರತವನ್ನು ಮುಕ್ತಗೊಳಿಸಲು ಕಠಿಣ ಕ್ರಮ ತೆಗೆದುಕೊಳ್ಳಲು ಬಿಜೆಪಿ ಬದ್ಧವಾಗಿದೆ’ ಎಂದು ಹೇಳಿದ್ದಾರೆ. 
 

PM Narendra Modi Outraged Against Congress gvd

ನವದೆಹಲಿ (ಏ.07): ಬಡವರನ್ನು ಅವಮಾನಿಸುವ ‘ಬಾದ್‌ಶಾಹಿ’ ಮನಸ್ಥಿತಿಯ ಜನರನ್ನು ಕಟುವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಸುವ್ಯವಸ್ಥೆಯ ಸವಾಲುಗಳಿಂದ ಭಾರತವನ್ನು ಮುಕ್ತಗೊಳಿಸಲು ಕಠಿಣ ಕ್ರಮ ತೆಗೆದುಕೊಳ್ಳಲು ಬಿಜೆಪಿ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ಇದಲ್ಲದೆ, ‘ಬಿಜೆಪಿ ಯಶಸ್ಸಿನಿಂದ ಕಂಗೆಟ್ಟಿರುವವರು (ಕಾಂಗ್ರೆಸ್ಸಿಗರು) ಇಂದು ‘ಮೋದಿ ನಿನ್ನ ಗೋರಿ ನಿರ್ಮಿಸುತ್ತೇವೆ’ (ಮೋದಿ ತೇರಿ ಕಬರ್‌ ಖುದೇಗಿ) ಎಂಬ ಹತಾಶ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಆದರೆ ಬಡವರು, ಬುಡಕಟ್ಟುಗಳು, ಹಿಂದುಳಿದವರು, ದಲಿತರು ಮತ್ತು ಮಹಿಳೆಯರು ಇತರರ ಬೆಂಬಲದಿಂದ ಕಮಲ ಮತ್ತಷ್ಟುಅರಳಲಿದೆ ಎಂದು ಗುಡುಗಿದ್ದಾರೆ.

ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದರೂ, ನಾವು ಸಂತೃಪ್ತರಾಗಿರಬೇಕಾಗಿಲ್ಲ. 2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜನರು ಈಗಾಗಲೇ ಹೇಳಲು ಪ್ರಾರಂಭಿಸಿದ್ದಾರೆ. ಇದು ನಿಜ. ಆದರೆ ಇದರಿಂದ ಬಿಜೆಪಿ ಕಾರ್ಯಕರ್ತರು ಬೀಗಿ ಸುಮ್ಮನೇ ಕುಳಿತುಕೊಳ್ಳಬಾರದು. ಬಿಜೆಪಿ ಕಾರ್ಯಕರ್ತರಾಗಿ ನಾವು ದೇಶದ ಪ್ರತಿಯೊಬ್ಬ ನಾಗರಿಕರ ಹೃದಯವನ್ನು ಗೆಲ್ಲಬೇಕು’ ಎಂದು ಕರೆ ನೀಡಿದರು.

ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ

‘ಕಾಂಗ್ರೆಸ್‌ ಹಾಗೂ ಪ್ರಮುಖ ವಿರೋಧ ಪಕ್ಷಗಳು ಸ್ವಜನಪಕ್ಷಪಾತ, ರಾಜವಂಶ, ಜಾತೀಯತೆ ಮತ್ತು ಪ್ರಾದೇಶಿಕತೆಗೆ ಕಟ್ಟುಬಿದ್ದಿವೆ. ಆದರೆ ಬಿಜೆಪಿ ಹಾಗಲ್ಲ. ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಹೊಸ ಸಂಸ್ಕೃತಿಯನ್ನು ಬಿಜೆಪಿ ಪ್ರತಿನಿಧಿಸುತ್ತದೆ’ ಎಂದು ಪ್ರತಿಪಾದಿಸಿದರು. ಆಡಳಿತ ಪಕ್ಷದ ವಿರುದ್ಧ ಪಿತೂರಿ ನಡೆಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿಪಕ್ಷಗಳು ಹೆಣಗಾಡುತ್ತಿವೆ. ಇಂದು ಅವರು ಎಷ್ಟುಹತಾಶರಾಗಿದ್ದಾರೆಂದರೆ ‘ಮೋದಿ ತೇರಿ ಕಬರ್‌ ಖುದೇಗಿ’ (ಮೋದಿ ನಿನ್ನ ಸಮಾಧಿಯನ್ನು ತೋಡಲಾಗುತ್ತದೆ) ಎಂದು ಬಹಿರಂಗವಾಗಿ ಹೇಳಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ವಿಪಕ್ಷಗಳದ್ದು ಬಾದ್‌ಶಾಹಿ ಮನಸ್ಥಿತಿ: ‘ಬಾದ್‌ಶಾಹಿ (ಊಳಿಗಮಾನ್ಯ) ಮನಸ್ಥಿತಿ ಹೊಂದಿರುವ ಈ ಜನರು, ನಾಗರಿಕರನ್ನು... ವಿಶೇಷವಾಗಿ ಬಡವರು ಮತ್ತು ವಂಚಿತರನ್ನು ಗುಲಾಮರಂತೆ ನಡೆಸಿಕೊಂಡರು. ಆದರೆ ಈ ಜನರು 2014ರಿಂದ ಬಿಜೆಪಿಯಿಂದ ಸಬಲೀಕರಣಗೊಂಡಿದ್ದಾರೆ’ ಎಂದರು. ‘ನಾವು ಕೇವಲ ಚುನಾವಣಾ ಗೆಲುವಿಗೆ ಸೀಮಿತವಾಗಬಾರದು. ಕೋಟ್ಯಂತರ ಜನರ ಮನ ಗೆಲ್ಲುವುದು ನಮ್ಮ ಗುರಿ. ಜನಸಂಘದ ಕಾಲದಿಂದಲೂ ನಾವು ಪಟ್ಟಶ್ರಮದಂತೆ ಪ್ರತಿ ಚುನಾವಣೆಯಲ್ಲೂ ನಾವು ಶ್ರಮ ಪಡಬೇಕು’ ಎಂದು ಕಿವಿಮಾತು ಹೇಳಿದರು.

ಹನುಮನಿಗೂ ಬಿಜೆಪಿಗೂ ಹೋಲಿಕೆ: ಇದೇ ವೇಳೆ ಗುರುವಾರ ದೇಶಾದ್ಯಂತ ನಡೆದ ಹನುಮ ಜಯಂತಿ ನಿಮಿತ್ತ ಆಂಜನೇಯನನ್ನು ಮೋದಿ ಸ್ಮರಿಸಿದರು ಹಾಗೂ ಬಿಜೆಪಿ ಸೇವೆಗೂ ಹನುಮನ ಸಾಧನೆಗೂ ಹೋಲಿಕೆ ಮಾಡಿದರು. ‘2014ಕ್ಕಿಂತ ಮುನ್ನ ಭಾರತಕ್ಕೆ ಸ್ವಯಂ ಅನುಮಾನ ಕಾಡುತ್ತಿತ್ತು. ತನ್ನ ಶಕ್ತಿಯ ಮೇಲೆ ತನಗೇ ನಂಬಿಕೆ ಇರಲಿಲ್ಲ. ಆದರೆ 2014ರ ನಂತರ ಭಾರತ ತನ್ನ ಸಾಮರ್ಥ್ಯ ಮತ್ತು ಶಕ್ತಿಯನ್ನು ಅರಿತುಕೊಂಡಿದೆ. ನಾವು ಭಗವಾನ್‌ ಹನುಮಂತನ ಇಡೀ ಜೀವನವನ್ನು ನೋಡಿದರೆ, ಆತನಲ್ಲಿ ‘ನಾನು ಇದನ್ನು ಸಾಧಿಸಬಲ್ಲೆ’ ಎಂಬ ಛಲವಿತ್ತು. ಅದಕ್ಕೇ ಆತ ದೊಡ್ಡ ಯಶಸ್ಸು ಕಂಡ. ಹನುಮಂತನು ರಾಕ್ಷಸರನ್ನು ಹೇಗೆ ನಿರ್ಭೀತಿಯಿಂದ ಎದುರಿಸಿದನೋ ನಮ್ಮ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳನ್ನು ವಜ್ರಮುಷ್ಠಿಯಿಂದ ಎದುರಿಸಿದೆ’ ಎಂದು ಮೋದಿ ಖಡಕ್‌ ಸ್ವರದಲ್ಲಿ ಹೇಳಿದರು.

ದೇಶದಲ್ಲಿ ಪ್ರಧಾನಿ ಮೋದಿಯಿಂದ ಭಾರಿ ಬದಲಾವಣೆ: ಸಿಎಂ ಬೊಮ್ಮಾಯಿ

ಸರ್ಕಾರದ ಯೋಜನೆಗಳಿಂದ ವಿಪಕ್ಷ ಹತಾಶ: ಇದೇ ವೇಳೆ, ಉಚಿತ ಪಡಿತರ ಯೋಜನೆ, ಆರೋಗ್ಯ ವಿಮೆ ಮತ್ತು ಇತರ ಕಲ್ಯಾಣ ಕ್ರಮಗಳು ಹಾಗೂ 370ನೇ ವಿಧಿ ರದ್ದತಿಗಳನ್ನು ಉಲ್ಲೇಖಿಸಿ, ಇಂಥ ಕ್ರಮಗಳಿಂದ ವಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಕಾರಾತ್ಮಕವಾಗಿ ಬಳಸಿ: ಇದೇ ವೇಳೆ ಸಾಮಾಜಿಕ ಮಾಧ್ಯಮವನನ್ನು ಸಕಾರಾತ್ಮಕವಾಗಿ ಬಳಸುವಂತೆ ಹಾಗೂ ಪಕ್ಷದ ಸಿದ್ಧಾಂತ ಸಂವಿಧಾನದದ ಮಿತಿಯಲ್ಲಿ ಕೆಲಸ ಮಾಡುವಂತೆ ಪಕ್ಷದ ಕರ್ಯಕರ್ತರಿಗೆ ಕರೆ ನೀಡಿದರು. ‘ಬಿಜೆಪಿಯು ಪ್ರಜಾಪ್ರಭುತ್ವದ ಗರ್ಭದಿಂದ ಜನ್ಮ ತಳೆದಿದೆ ಮತ್ತು ಪ್ರಜಾಪ್ರಭುತ್ವದ ಮಕರಂದವನ್ನು ಪೋಷಿಸಿ ಬೆಳೆಸಿದೆ’ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios