ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು (ಏ.04): ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಲ್ಲೇಶ್ವರದ ಈಸ್ಟ್‌ ಪಾರ್ಕ್ ರಸ್ತೆಯ ಗಿರಿಜಾರಾಮ ದೈವಜ್ಞ ಭವನದಲ್ಲಿ ಸೋಮವಾರ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ. 

ಕರ್ನಾಟಕದಲ್ಲೂ ಉತ್ತಮ ಸಂಘಟನೆ ಹೊಂದಿರುವ ಬಿಜೆಪಿ ಬಹಳ ಆಳವಾಗಿ ಬೇರೂರಿರುವ ಪಕ್ಷವಾಗಿದೆ ಎಂದರು. ಹಿಂದೆ ದೇಶದಲ್ಲಿ ಇದ್ದ ಯುಪಿಎ ಸರ್ಕಾರ ದೇಶದಲ್ಲಿ ಅಸ್ಥಿರತೆ ಉಂಟು ಮಾಡಿತ್ತು. ಆರ್ಥಿಕವಾಗಿ ಅಸ್ಥಿರತೆ ಉಂಟಾಗಿ ಭ್ರಷ್ಟಾಚಾರದ ಸುರಿಮಳೆಯೇ ಆಯಿತು. ಪ್ರತಿಯೊಬ್ಬ ನಾಗರಿಕನಿಗೆ ಆತ್ಮವಿಶ್ವಾಸ ಮೂಡಬೇಕು. ನಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಅತಿ ಹೆಚ್ಚು ರಸ್ತೆ, ವಿಮಾನ ನಿಲ್ದಾಣ ಎಲ್ಲವೂ ಅಭಿವೃದ್ಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್‌ ಬಗ್ಗೆ ಮಾತಾಡುವಾಗ ವಿರೋಧ ಪಕ್ಷಗಳು ಹಾಸ್ಯ ಮಾಡಿದವು. 

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ಒಂದು ಮನೆಯ ಸ್ವಚ್ಛತೆಯ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರುವವರು 70 ವರ್ಷ ಆಡಳಿತ ಮಾಡಿದ್ದು ದುರ್ದೈವದ ಸಂಗತಿ ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಚುನಾವಣೆಗೆ ಪಕ್ಷ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನಾವು ಮಾಡಿದ ಸಾಧನೆಯ ವರದಿ ಹಿಡಿದು ಮತ ಕೇಳುತ್ತಿದ್ದೇವೆ. ಜತೆಗೆ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. ಕಾಂಗ್ರೆಸ್‌ನವರು ಧರ್ಮ ಒಡೆಯುವ ಕೆಲಸ ಮಾಡಿದರು. ಆದರೆ ನಾವು ಧರ್ಮಗಳನ್ನು ಜೋಡಿಸುವ ಕೆಲಸ ಮಾಡಿದ್ದೇವೆ. 

ಕಾಂಗ್ರೆಸ್‌ ಸರ್ಕಾರ ಇದ್ದಾಗ ಕೋಮು ಗಲಭೆಗಳಾದವು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿತ್ತು. ರಾಜ್ಯದ ಅಭಿವೃದ್ಧಿಯೇ ಆಗಿರಲಿಲ್ಲ. ಆ ಅವಧಿ ಕರಾಳ ದಿನಗಳಾಗಿದ್ದವು ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ಭಗವಂತ ಖೂಬಾ, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ಪ್ರಚಾರಕ್ಕೆ ಮಕ್ಕಳು ಬರು​ವಂತಿ​ಲ್ಲ: ಜಿಲ್ಲಾಧಿಕಾರಿ ಸೆಲ್ವಮಣಿ ಎಚ್ಚ​ರಿಕೆ

ಬಿಜೆಪಿ ಮಾಧ್ಯಮ ಕೇಂದ್ರ ಬಳಿ ಕಟ್ಟಿದ ಕೇಸರಿ ತೋರಣ ತೆರವು: ಬಿಜೆಪಿ ಮಾಧ್ಯಮದ ಕೇಂದ್ರದ ಎದುರಿನ ರಸ್ತೆಯಲ್ಲಿ ಕಟ್ಟಲಾಗಿದ್ದ ಕೇಸರಿ ತೋರಣ ಹಾಗೂ ಫ್ಲೆಕ್ಸ್‌ಗಳನ್ನು ಚುನಾವಣಾಧಿಕಾರಿಗಳು ತೆರವುಗೊಳಿಸಿ ಬಿಜೆಪಿ ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಿದ್ದಾರೆ. ಮಲ್ಲೇಶ್ವರದ ಈಸ್ಟ್‌ ಪಾರ್ಕ್ ರಸ್ತೆಯ ಗಿರಿಜಾರಾಮ ದೈವಜ್ಞ ಭವನದಲ್ಲಿ ಸೋಮವಾರ ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಕೇಂದ್ರ ಉದ್ಘಾಟಿಸಿದ್ದರು. ಇದರ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕೆ ಸುಮಾರು 15ಕ್ಕೂ ಅಧಿಕ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾಧ್ಯಮ ಕೇಂದ್ರದ ಎದುರು ಹಾಗೂ ಆ ರಸ್ತೆಯಲ್ಲಿ ಕಟ್ಟಲಾಗಿದ್ದ ಕೇಸರಿ ತೋರಣ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಚುನಾವಣಾಧಿಕಾರಿಗಳೇ ಖುದ್ದು ಪೊಲೀಸರ ಭದ್ರತೆಯಲ್ಲಿ ಆ ಕೇಸರಿ ತೋರಣ ಹಾಗೂ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು.