ಬೆಳಗಾವಿಯಲ್ಲಿಂದು ಮೋದಿ 10.5 ಕಿ.ಮೀ. ರೋಡ್ ಶೋ: ವಿಧಾನಸಭೆ ಚುನಾವಣೆಗೆ ಪ್ರಧಾನಿ ರಣಕಹಳೆ
ಬೆಳಗಾವಿಯಲ್ಲಿ ಮೇಲ್ದರ್ಜೆಗೇರಿದ ರೈಲು ನಿಲ್ದಾಣ, ಜೋಡಿ ರೈಲು ಮಾರ್ಗ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ, ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.
ಬೆಳಗಾವಿ (ಫೆ.27): ಬೆಳಗಾವಿಯಲ್ಲಿ ಮೇಲ್ದರ್ಜೆಗೇರಿದ ರೈಲು ನಿಲ್ದಾಣ, ಜೋಡಿ ರೈಲು ಮಾರ್ಗ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ, ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಇದೇ ವೇಳೆ ನಗರದಲ್ಲಿ ಮೊದಲ ಬಾರಿಗೆ 10.45 ಕಿ.ಮೀ. ಉದ್ದದ ಬೃಹತ್ ರೋಡ್ ಶೋ ಅನ್ನೂ ನಡೆಸಲಿದ್ದಾರೆ. ಕೆಎಸ್‌ಆರ್‌ಪಿ ಮೈದಾನದಿಂದ ಆರಂಭವಾಗಲಿರುವ ರೋಡ್ ಶೋ ಸಾರ್ವಜನಿಕ ಸಮಾವೇಶ ನಡೆಯಲಿರುವ ಮಾಲಿನಿ ಸಿಟಿ ಮೈದಾನದವರೆಗೆ ನಡೆಯಲಿದೆ.
ಈ ರೋಡ್ ಶೋ ಅನ್ನು ಐತಿಹಾಸಿಕಗೊಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ರೋಡ್ ಶೋ ಸಾಗುವ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ 90 ಪಾಯಿಂಟ್ಸ್ ಗುರುತಿಸಿ ಲೈವ್ ಶೋ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟು 8 ಕೇಂದ್ರಗಳನ್ನು ಗುರುತಿಸಿ ಅಲ್ಲಿ ಜನರಿಗೆ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪ್ರಧಾನಿ ಅವರು ಒಂದು ಗಂಟೆ ರೋಡ್ ಶೋ ಮಾಡಿದ್ದರು. ಈ ಸಂಬಂಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸೋಮವಾರ ಶಿವಮೊಗ್ಗದ ಕಾರ್ಯಕ್ರಮ ಮುಗಿಸಿಕೊಂಡು ಮಧಾಹ್ನ 2 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ.
ಇಂದು ಶಿವಮೊಗ್ಗ ಏರ್‌ಪೋರ್ಟ್ ಲೋಕಾರ್ಪಣೆ: ಬಿಎಸ್‌ವೈ 80ನೇ ಜನ್ಮದಿನದಂದೇ ಮೋದಿ ಉದ್ಘಾಟನೆ
ವಿಮಾನ ನಿಲ್ದಾಣದಿಂದ ಕಾಪ್ಟರ್ ಮೂಲಕ ಕಂಗ್ರಾಳಿಯಲ್ಲಿರುವ ಕೆಎಸ್‌ಆರ್‌ಪಿ ಮೈದಾನದಲ್ಲಿನ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಮಾಲಿನಿ ಸಿಟಿಗೆ ರೋಡ್ ಶೋ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಸಂಸದರು, ಎಂಎಲ್‌ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
1 ಲಕ್ಷ ವೇದಿಕೆ: ಈಗಾಗಲೇ ವೇದಿಕೆ ಮುಂಭಾಗದಲ್ಲಿ 1 ಲಕ್ಷ ಆಸನದ ವ್ಯವಸ್ಥೆ ಮಾಡಲಾಗಿದ್ದು, 1.5 ಲಕ್ಷದಿಂದ 2 ಲಕ್ಷ ಜನ ಸಭಾ ಕಾರ್ಯಕ್ರಮದಲ್ಲೇ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
10000 ಮಹಿಳೆಯರ ಪೂರ್ಣಕುಂಭ ಸ್ವಾಗತ: ಮೋದಿ ರೋಡ್ ಶೋ ವೇಳೆ ಜನಸಾಮಾನ್ಯರು ಹಾಗೂ ಅಭಿಮಾನಿಗಳು ದೇಶದ 29 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರಧಾನಿಗೆ ಶುಭ ಕೋರಲಿದ್ದಾರೆ. ಅಲ್ಲದೆ, ರೋಡ್ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು 10 ಸಾವಿರ ಮಹಿಳೆಯರು ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ.
ಐವರು ಕಾಯಕಯೋಗಿಗಳಿಂದ ಸ್ವಾಗತ: ರೋಡ್ ಶೋ ವೇಳೆ ಪ್ರಧಾನಿ ಮೋದಿ ಅವರಿಗೆ ಬೆಳಗಾವಿ ನಗರದ ಚನ್ನಮ್ಮ ವೃತ್ತ ಸೇರಿ ಇನ್ನಿತರ ನಿಗದಿತ ಪ್ರದೇಶಗಳಲ್ಲಿ ಐವರು ಆಯ್ದ ಕಾಯಕಯೋಗಿಗಳು ವಿಶೇಷ ಸ್ವಾಗತ ನೀಡಲಿದ್ದಾರೆ. ಆಟೋ ಚಾಲಕ ಮಯೂರ ಚವ್ಹಾಣ, ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ನೇಕಾರ ಕಲ್ಲಪ್ಪ ಟೋಪಗಿ, ರೈತ ಮಹಿಳೆ ಶೀಲಾ ಬಾಬುರವಾಕ ಖನ್ನೂಕರ್, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್ ಅವರು ಮೋದಿ ಅವರಿಗೆ ಸ್ವಾಗತ ನೀಡಲಿರುವ ಕಾಯಕಯೋಗಿಗಳು.
10ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ?
ವಿಶೇಷ ಭಾವಚಿತ್ರ ಸಿದ್ಧಪಡಿಸಿದ ಟೈಲರ್: ಬೆಳಗಾವಿಯ ಟೈಲರ್ ಎಸ್.ಕೆ.ಕಾಕಡೆ ಅವರು ಪ್ರಧಾನಿ ಮೋದಿಯವರ ಅಪರೂಪದ ಫೋಟೋ ಸಿದ್ಧಪಡಿಸಿ ಅದನ್ನು ಮೋದಿಯವರಿಗೆ ಕೊಡುಗೆಯಾಗಿ ನೀಡಲು ಕಾಯುತ್ತಿದ್ದಾರೆ. ಟೈಲರಿಂಗ್ ವೃತ್ತಿಯಲ್ಲಿರುವ ಕಾಕಡೆಯವರು ಕಾಟನ್ ದಾರ ಬಳಸಿ 12.5 ಲಕ್ಷ ಬಾರಿ ಸ್ಟಿಚ್ ಮಾಡಿ ಮೋದಿಯವರ ವಿಶೇಷ ಭಾವಚಿತ್ರ ಸಿದ್ಧಪಡಿಸಿದ್ದಾರೆ. ಈ ವಿಶೇಷ ಚಿತ್ರ ಸಿದ್ಧಪಡಿಸಲು ಕಾಕಡೆಯವರು ಒಂದು ತಿಂಗಳು ಶ್ರಮವಹಿಸಿದ್ದಾರೆ. ಸೋಮವಾರ ಮೋದಿ ಭೇಟಿ ವೇಳೆ ಈ ವಿಶೇಷ ಭಾವಚಿತ್ರವನ್ನು ಕೊಡುಗೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.