ಬೆಂಗಳೂರು(ಡಿ.17): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ 61ನೇ ಹುಟ್ಟುಹಬ್ಬ ಪ್ರಯುಕ್ತ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಭ ಕೋರಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣದ ಸುಳಿವು ನೀಡುತ್ತಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪಿಎಂ ಮೋದಿ!

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್‌ ಮತ್ತು ಬಿಜೆಪಿ ಹತ್ತಿರವಾಗುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸಿದ್ದು, ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಶುಭ ಕೋರಿರುವುದು ಈ ಸಂಬಂಧ ಮತ್ತಷ್ಟುಗಟ್ಟಿಗೊಳ್ಳುತ್ತಿರುವುದರ ಸಂಕೇತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಶುಭ ಕೋರಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಧನ್ಯವಾದ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮಾಜಿ ಮುಖ್ಯಮಂತ್ರಿ, ಆತ್ಮೀಯರು ಆಗಿರುವ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೇ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸಹ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ಶುಭ ಕೋರಿದ್ದಾರೆ. ಶುಭಾಶಯ ಕೋರುವ ಮೂಲಕ ಜೆಡಿಎಸ್‌-ಬಿಜೆಪಿ ಬಾಂಧವ್ಯವನ್ನು ಇನ್ನಷ್ಟುಬಿಗಿಗೊಳಿಸುವ ಪ್ರಯತ್ನ ನಡೆದಿದೆ ಎಂಬ ಚರ್ಚೆಗಳು ರಾಜಕೀಯದಲ್ಲಿ ಆರಂಭಗೊಂಡಿದೆ.

ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಬಲಗೊಳಿಸಲು ಮತ್ತು ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ತರಿಸಿಕೊಳ್ಳಲು ಬಿಜೆಪಿ ಬಗ್ಗೆ ಮೃಧು ಧೋರಣೆ ತಳೆದಿದ್ದಾರೆ. ಇತ್ತೀಚೆಗೆ ಅವರ ಹೇಳಿಕೆಗಳು ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಇರುವುದಿಲ್ಲ. ಇದಲ್ಲದೇ, ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳು ಕುಮಾರಸ್ವಾಮಿ ಅವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಪುಷ್ಟೀಕರಿಸುತ್ತಿವೆ.

'ಎಚ್ಡಿಕೆಗೆ ಸೆಂಟಿಮೆಂಟ್‌ ಜಾಸ್ತಿ' : ರೇವಣ್ಣ ಹೇಳಿದ ಸಹೋದರನ ಸೀಕ್ರೇಟ್

ಮಂಡ್ಯ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಒಂದೂ ಸ್ಥಾನವಿಲ್ಲದ ಬಿಜೆಪಿಗೆ ಅಧಿಕಾರ ನೀಡಿರುವುದು, ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ದೊರಕುವಂತೆ ಆಗಿರುವುದು, ಇವೆಲ್ಲಕ್ಕಿಂತ ಹೆಚ್ಚಾಗಿ ವಿಧಾನಪರಿಷತ್‌ನಲ್ಲಿ ನಡೆದ ಗದ್ದಲ, ಗಲಾಟೆ ವಿಚಾರದಲ್ಲಿ ಜೆಡಿಎಸ್‌ ಬಹಿರಂಗವಾಗಿಯೇ ಬಿಜೆಪಿ ಪರ ಇದೆ ಎಂಬುದು ಕಾಣಿಸುತ್ತಿದೆ. ಕುಮಾರಸ್ವಾಮಿ ಈ ಬಗ್ಗೆ ಹೇಳಿಕೆ ನೀಡದಿದ್ದರೂ ಅವರ ನಡೆ ಬಿಜೆಪಿ ಪರ ಇರುವುದು ಸ್ಪಷ್ಟವಿದೆ.

ಪುತ್ರರಿಂದ ಶುಭ ಹಾರೈಕೆ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 61ನೇ ಹುಟ್ಟುಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡರು. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯಿಂದಾಗಿ ಜನರು ಸಂಕಷ್ಟದಲ್ಲಿರುವುದರಿಂದ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಬೆಂಗಳೂರಲ್ಲಿ ಇರದ ಕಾರಣ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ತಾವಿರುವಲ್ಲಿಂದಲೇ ಹಾರೈಸಿ, ನಿಮ್ಮ ಪ್ರೀತಿ-ಅಭಿಮಾನಿ ದೊಡ್ಡದು ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಸಹ ಭಾವನಾತ್ಮಕವಾಗಿ ಟ್ವೀಟರ್‌ ಮೂಲಕ ಶುಭಕೋರಿದ್ದಾರೆ. ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಜನ ಸಾಮಾನ್ಯರಿಗೆ ಮಿಡಿಯುವ ಸಹೃದಯಿ ರಾಜಕಾರಣಿ ಎಂದು ನಿಖಿಲ್‌ ಕುಮಾರಸ್ವಾಮಿ ತಂದೆಯನ್ನು ಬಣ್ಣಿಸಿದ್ದಾರೆ. ಇನ್ನು, ಸಂಸದ ಪ್ರಜ್ವಲ್‌ ರೇವಣ್ಣ, ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು, ಗ್ರಾಮವಾಸ್ತವ್ಯ, ಜನತಾ ದರ್ಶನ ಮೂಲಕ ಆಡಳಿತವನ್ನು ಜನರ ಬಳಿಕೆ ಕೊಂಡೊಯ್ದ ಜನ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಉತ್ತಮ ಆರೋಗ್ಯ ನೀಡಿ ಇನ್ನಷ್ಟುದೀರ್ಘ ಕಾಲ ನಾಡಿನ ಸೇವೆ ಮಾಡುವ ಅವಕಾಶ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.