ಬೆಂಗಳೂರು, [ಫೆ.18]: ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.

 ಇಂದು [ಮಂಗಳವಾರ] ವಕೀಲ ವಿಜಯ್ ಕುಮಾರ್ ಅವರು ಹೈಕೋರ್ಟ್ ಪಿಐಎಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 15ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರ ಅರಣ್ಯ ಖಾತೆಯನ್ನು ರದ್ದು ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

‘ಆನಂದ ಸಿಂಗ್‌ಗೆ ಅರಣ್ಯ ಖಾತೆ ಕಳ್ಳರ ಕೈಗೆ ಕೀಲಿ ಕೊಟ್ಟಂತಿದೆ’

ಆನಂದ್ ಸಿಂಗ್ ವಿರುದ್ದ 16 ಪ್ರಕರಣಗಳಿವೆ. ಅಲ್ಲದೇ ಮೈನಿಂಗ್ ನಡೆಸುತ್ತಿರುವ ಬಗ್ಗೆ ಆನಂದ್ ಸಿಂಗ್ ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆ ಆನಂದ್ ಸಿಂಗ್  ಅವರಿಗೆ ನೀಡಲಾಗಿರುವ ಅರಣ್ಯ ಖಾತೆಯನ್ನು ರದ್ದು ಮಾಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸಚಿವ ಆನಂದ್ ಸಿಂಗ್ ಅವರ ಖಾತೆಯನ್ನು ಬದಲಾಯಿಸಬೇಕೆಂದು ಕಾಂಗ್ರೆಸ್ ಸಹ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಆಗ್ರಹಿಸಿದೆ. ಈ ಮೊದಲು ಬಿಜೆಪಿಯಲ್ಲಿದ್ದ ವಿಜಯನಗರ [ಹೋಸಪೇಟೆ] ಶಾಸಕ ಆನಂದ್ ಸಿಂಗ್ ಅವರು ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದರು.

‘ಸಚಿವ ಸ್ಥಾನಕ್ಕೆ ಆನಂದ ಸಿಂಗ್‌ ಈ ಕೂಡಲೇ ರಾಜೀನಾಮೆ ನೀಡಬೇಕು’

ಆದ್ರೆ, ಬದಲಾದ ರಾಜಕಾರಣದಿಂದ ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿದ್ದರು. ತದನಂತರ ಅವರು ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಗೆದ್ದು ಬಂದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದರು.