ಬೀದರ್‌[ಫೆ.15]: ಅರಣ್ಯ ಇಲಾಖೆ ಹೂಡಿರುವ ಹತ್ತಾರು ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ ಸಿಂಗ್‌ ರಾಜ್ಯದ ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು ಅಚ್ಚರಿ ತರುವಂಥದ್ದು. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವಾದರೆ ಅರಣ್ಯ ಖಾತೆಯಿಂದ ಆನಂದ ಸಿಂಗ್‌ರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೈ ಬಿಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಶುಕ್ರವಾರ ಇಲ್ಲಿನ ಶಾಹೀನ್‌ ಕಾಲೇಜಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರಣ್ಯ ಇಲಾಖೆಯ ಹಲವಾರು ಪ್ರಕರಣಗಳಲ್ಲಿ ಆನಂದ ಸಿಂಗ್‌ ಅವರು ಇನ್ನೂ ಆರೋಪಿ ಸ್ಥಾನದಲ್ಲಿದ್ದಾರೆ. ಇಂಥವರು ಈ ಇಲಾಖೆಯ ಮುಖ್ಯಸ್ಥರಾದರೆ ನ್ಯಾಯಯುತ ತನಿಖೆ ಹೇಗೆ ಸಾಧ್ಯ? ‘ಕುರಿ ಕಾಯೋ ತೋಳ ಅಂದ್ರೆ ಸಂಬಳ ಕೊಡದಿದ್ರೂ ಕಾಯ್ತೇನೆ’ ಎಂಬಂತಾಗಿದೆ ಎಂದು ಕಿಡಿಕಾರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನಂದ ಸಿಂಗ್ ಕೂಡಲೇ ರಾಜೀನಾಮೆ ನೀಡಲಿ ಇಲ್ಲಾಂದ್ರೆ ಅರಣ್ಯ ಖಾತೆಯಿಂದ ಸಿಂಗ್ ಅವರನ್ನು ಸಿಎಂ ಬಿಎಸ್‌ವೈ ಕೈ ಬಿಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. 
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾ ಧ್ಯಕ್ಷ, ಶಾಸಕ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ಬಿ. ನಾರಾಯಣ, ವಿಜಯಸಿಂಗ್, ಚಂದ್ರ ಶೇಖರ ಪಾಟೀಲ್ ಹಾಗೂ ಅರವಿಂದ ಕುಮಾರ ಅರಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಮೀನಾಕ್ಷಿ ಸಂಗ್ರಾಮ, ಆನಂದ ದೇವಪ್ಪ, ಚಂದ್ರಕಾಂತ ಹಿಪ್ಪಳಗಾಂವ್ ಮತ್ತಿತರರು ಇದ್ದರು.