ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧಪಡಿಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಮ್ಮ ಬಿಜೆಪಿ ಶಾಸಕರಿಗೆ ಕರೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ. 

ಬೆಂಗಳೂರು (ಮಾ.30): ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧಪಡಿಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಮ್ಮ ಬಿಜೆಪಿ ಶಾಸಕರಿಗೆ ಕರೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ಅವರ ಪರಿಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. 

ಒಂದು ವೇಳೆ ಗಟ್ಟಿಯಾದ ಅಭ್ಯರ್ಥಿಗಳು ಇದ್ದಿದ್ದರೆ ನಮ್ಮ ಶಾಸಕರಿಗೆ ಕರೆ ಮಾಡುತ್ತಿರಲಿಲ್ಲ. ಸಾರಾಸಗಟಾಗಿ ಎಲ್ಲರಿಗೂ ಕರೆ ಮಾಡಿ ನಮ್ಮದಿನ್ನೂ (ಕಾಂಗ್ರೆಸ್‌ ಪಟ್ಟಿ) ನಿರ್ಣಯವಾಗಿಲ್ಲ. ನೀವು ಬಂದರೆ ನಿಮಗೆ ಟಿಕೆಟ್‌ ಕೊಡುವುದಾಗಿ ಹೇಳಿದ್ದಾರೆ. ಆದರೆ, ನಮ್ಮ ಪಕ್ಷದ ಶಾಸಕರು ಶಿವಕುಮಾರ್‌ ಆಹ್ವಾನ ತಿರಸ್ಕರಿಸಿದ್ದಾರೆ. ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೊಮ್ಮಾಯಿ, ವಲಸಿಗರೂ ಸೇರಿದಂತೆ ಮೂಲ ಬಿಜೆಪಿ ಶಾಸಕರನ್ನು ಶಿವಕುಮಾರ್‌ ಸಂಪರ್ಕ ಮಾಡಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ: ಸಿ.ಟಿ.ರವಿ

ಈಗಾಗಲೇ 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿರುವ ಕಾಂಗ್ರೆಸ್‌ಗೆ ಉಳಿದೆಡೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹತಾಶರಾಗಿ ನಮ್ಮ ಪಕ್ಷದವರಿಗೆ ಕರೆ ಮಾಡುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಕಾಂಗ್ರೆಸ್‌ ದಿವಾಳಿಯಾಗಿದೆ ಎಂಬುದು ಎಂದರು. ಅಥಣಿಯಲ್ಲಿ ಬಿಜೆಪಿ ಟಿಕೆಟ್‌ ಪೈಪೋಟಿ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಗೆಲ್ಲುವಂತಹ ಪಾರ್ಟಿಗೆ ಫೈಟ್‌ ಇದ್ದೇ ಇರುತ್ತದೆ. ಏಪ್ರಿಲ್‌ ಮೊದಲನೇ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಎಸ್‌ಡಿಪಿಐಗೆ ಸೊಪ್ಪು ಹಾಕಲ್ಲ: ಎಸ್‌ಡಿಪಿಐ ಮುಖಂಡರು ನನ್ನ ಹೊಗಳಲು ಸಾಧ್ಯವಾ? ಎಸ್‌ಡಿಪಿಐ ಒಂದು ದೇಶ ದ್ರೋಹದ ಸಂಸ್ಥೆ. ಅವರು ಯಾವಗಲೂ ದೇಶದ ವಿರುದ್ಧ ಚಟುವಟಿಕೆ ಮಾಡುವವರು. ಭಾರತದ ಅಲ್ಪಸಂಖ್ಯಾತರ ವಿರೋಧಿಗಳಾಗಿರುವ ಎಸ್‌ಡಿಪಿಐ ಅವರಿಂದ ನಾನು ಹೊಗಳಿಕೆ ಬಯಸುವುದಿಲ್ಲ. ಅವರು ನಮ್ಮ ಚಿಂತನೆಗಳಿಗೆ ವಿರೋಧಿಗಳೇ ಆಗಿದ್ದಾರೆ. ಅವರ ಹೇಳಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ. ಎಸ್‌ಡಿಪಿಐ ಮುಖಂಡರ ಹೇಳಿಕೆ ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಕಿತ್ತೂರು ಕರ್ನಾಟಕದ ಅಭಿವೃದ್ಧಿ ಬದ್ಧ: ಕಿತ್ತೂರು ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಆಧ್ಯತೆ ಮೇರೆಗೆ ಚನ್ನಮ್ಮನ ಕಿತ್ತೂರು ಬಳಿ 300 ಎಕರೆ ಪ್ರದೇಶದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ನಗರದ ಸುವರ್ಣ ವಿಧಾನಸೌಧ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. 

ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್‌.ಪುಟ್ಟರಾಜು

ಈಗಾಗಲೇ ಈ ಭಾಗದ ಪ್ರದೇಶಗಳ ಕೃಷಿ, ನೀರಾವರಿ ಸೇರಿದಂತೆ ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ. ಮುಂದಿನ ದಿನಗಳಲಿ ಕೃಷಿ, ನೀರಾವರಿ, ಕೃಷಿ ಆಧಾರಿತ ಉದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳು ಸಮಗ್ರ ಅಭಿವೃದ್ಧಿಗೊಳ್ಳಲಿವೆ. ಅಲ್ಲದೇ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ಮಾಡಿದ್ದಲ್ಲಿ ಸುಮಾರು 1ಲಕ್ಷ ಯುವಕರಿಗೆ ಉದ್ಯೋಗ ಅವಕಾಶಗಳು ಸಿಗಲಿವೆ. ಅಲ್ಲದೆ, ಈ ಭಾಗದ ಸಮಗ್ರ ಅಭಿವೃದ್ಧಿಯಾಗುವುದರ ಜತೆಗೆ ದೇಶದ ಅಭಿವೃದ್ಧಿಗೆ ಮಾದರಿಯಾಗಲಿದೆ. ಅಲ್ಲದೆ, ಬೆಳಗಾವಿ ಆರ್ಥಿಕ ವಲಯವಾಗಿ ಬೆಳೆಯಲು ಪೂರಕವಾದ ಎಲ್ಲ ರೀತಿಯ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.