2023ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತಷ್ಟುಯೋಜನೆ ಅನುಷ್ಠಾನಗೊಳಿಸಲಾಗುವುದು.

ಪಾಂಡವಪುರ (ಮಾ.30): 2023ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತಷ್ಟುಯೋಜನೆ ಅನುಷ್ಠಾನಗೊಳಿಸಲಾಗುವುದು. ನಾನು ಮತ್ತೆ ಶಾಸಕನಾಗಿ ಆಯ್ಕೆಯಾಗಲು ಕ್ಷೇತ್ರದ ಜನತೆ ಸಹಕಾರ ನೀಡಬೇಕೆಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು. ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದ ಚಿನಕುರಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಶಾಸಕ, ಸಚಿವನಾಗಿ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆ ಅನುಷ್ಠಾನಗೊಳಸಿದ್ದೇವೆ. ಇನ್ನೂ ಹಲವರು ಯೋಜನೆ ಪೂರ್ಣಗೊಳ್ಳಬೇಕಾಗಿದೆ ಎಂದರು.

ಕ್ಷೇತ್ರಕ್ಕೆ ಮತ್ತಷ್ಟುಯೋಜನೆ ಮಂಜೂರು ಮಾಡಿಸಿ ಕ್ಷೇತ್ರದ ಜನರು ನೆಮ್ಮದಿಯಿಂದ ಜೀವನ ನಡಸುವಂತೆ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮಲ್ಲರ ಮನೆ ಮಗ ಸಿ.ಎಸ್‌.ಪುಟ್ಟರಾಜು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕಿದೆ. ಅದಕ್ಕಾಗಿ ಕ್ಷೇತ್ರದ ಮಹಾಜನತೆ ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು. ಡಿಂಕದಮ್ಮನ ದೇವಸ್ಥಾನದಲ್ಲಿ ಪೂಜೆಸಲ್ಲಿಸುವ ವೇಳೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಇದು ಶುಭಸೂಚನೆಯಾಗಿದೆ. ಸಚಿವನಾಗಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮಲ್ಲಿಗೆರೆ ಏತನೀರಾವರಿ ಯೋಜನೆಗಳ ಮೂಲಕ ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ ಎಂದರು.

ಚುನಾವಣೆ ಹಿನ್ನೆಲೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಭರ್ಜರಿ ಬೇಟೆ!

ಬೇಬಿಬೆಟ್ಟದಲ್ಲಿ 2 ಕೋಟಿ ರು. ವೆಚ್ಚದಲ್ಲಿ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಜತೆಗೆ ಡಿಂಕಾ ಗ್ರಾಮದ ಶಕ್ತಿ ದೇವತೆ ಡಿಂಕದಮ್ಮ ದೇವಸ್ಥಾನ ನಿರ್ಮಾಣಕ್ಕೂ 2.50 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿದೆ ಎಂದರು. ನಾನೇನು ಇನ್ನೊಬ್ಬರ ರೀತಿ ನಾಲ್ಕುವರೆ ವರ್ಷ ವಿದೇಶದಲ್ಲಿ ಇದ್ದು ಚುನಾವಣೆ ಸಮಯದಲ್ಲಿ ಬಂದವನಲ್ಲ. ಕೊರೋನಾ ವೇಳೆ ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡಿದ್ದೇನೆ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ನೀಡಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟುಯೋಜನೆ ಮಂಜೂರು ಮಾಡಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದೇನೆ. ಮುಂದೆಯೂ ಸಹ ಕ್ಷೇತ್ರದ ಅಭಿವೃದ್ಧಿಗೆ ಹತ್ತಾರ ಕಾರ್ಯಕ್ರಮ ರೂಪಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ಯಶವಂತ್‌ ಕುಮಾರ್‌ ಮಾತನಾಡಿ, ಸಿ.ಎಸ್‌.ಪುಟ್ಟರಾಜು ಮೂರು ಬಾರಿ ಶಾಸಕರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇಂತಹ ಶಾಸಕರನ್ನು ಪಡೆದ ನಾವುಗಳೇ ಪುಣ್ಯವಂತರು. ಇಂತಹ ಶಾಸಕರನ್ನು ಮತ್ತೊಮ್ಮೆ 2023ರ ಚುನಾವಣೆಯಲ್ಲಿ ಅತ್ಯದಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಕೊಡುವ ಶಪತವನ್ನು ಆದಿಶಕ್ತಿ ಡಿಂಕದಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ನಾವೆಲ್ಲರು ಸ್ವೀಕರಿಸಬೇಕೆಂದು ಮನವಿ ಮಾಡಿದರು. ಇದಕ್ಕೂ ಮುನ್ನ ಶಾಸಕ ಸಿ.ಎಸ್‌.ಪುಟ್ಟರಾಜು ಅವರನ್ನು ಡಿಂಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಜೆಡಿಎಸ್‌ ಮುಖಂಡರು ಪೂರ್ಣಕುಂಭ, ವಿವಿಧ ಕಲಾತಂಡಗಳ ಮೂಲಕ ಅದ್ದೂರಿಯಾಗಿ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು.

ಬೃಹತ್‌ ಸೇವಿನ ಹಾರ, ಗುಲಾಬಿ ಹೂವಿನ ಹಾರಗಳನ್ನು ಹಾಕಿ ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಆದಿಶಕ್ತಿ ಡಿಂಕದಮ್ಮ ದೇವಿಗೆ ಪೂಜೆಸಲ್ಲಿಸಿದರು. ವೇದಿಕೆಯಲ್ಲಿ ಬನ್ನಂಗಾಡಿ ಗ್ರಾಮದ ಕಾಂಗ್ರೆಸ್‌ ಮುಖಂಡ ಮಹೇಂದ್ರ ಸೇರಿದಂತೆ ರೈತಸಂಘ, ಕಾಂಗ್ರೆಸ್‌ ತೊರೆದು ನೂರಾರು ಕಾರ್ಯಕರ್ತರು ಸಿ.ಎಸ್‌.ಪುಟ್ಟರಾಜು ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು.

ಬಿಜೆಪಿ ಅಭ್ಯರ್ಥಿ ಪಟ್ಟಿ ಶೀಘ್ರವೇ ಘೋಷಣೆ: ನಳಿನ್‌ ಕುಮಾರ್‌ ಕಟೀಲ್‌

ಈ ವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಜೆಡಿಎಸ್‌ ಅಧ್ಯಕ್ಷ ಎಸ್‌.ಎ.ಮಲ್ಲೇಶ್‌, ತಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್‌, ಗ್ರಾಪಂ ಅಧ್ಯಕ್ಷರಾದ ಭವಾನಿ, ಚಂದ್ರಶೇಖರಯ್ಯ, ಶೃತಿನಾಗೇಶ್‌, ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಬನ್ನಂಗಾಡಿ ಶ್ರೀನಿವಾಸ್‌, ಬಿ.ಆರ್‌.ಪ್ರಸನ್ನ, ಕೆ.ಎಸ್‌.ಜಯರಾಮು, ಶೀಲಾ ಜಗದೀಶ್‌, ಪುಟ್ಟರಾಜು, ಜಗದೀಶ್‌, ಸೋಮಶೇಖರ್‌, ಚಂದ್ರೇಗೌಡ, ಎಂ.ಎಸ್‌. ಜಗದೀಶ್‌, ಕಲಿಗಣೇಶ್‌, ರುದ್ರಪ್ಪ, ಆರ್‌.ಎಂ.ಪುಟ್ಟರಾಜು, ಶಿಂಢಭೋಗನಹಳ್ಳಿ ನಾಗಣ್ಣ, ಬಿಂಡಹಳ್ಳಿ ರಾಜೇಶ್‌ ಸೇರಿದಂತೆ ಹಲವರು ಹಾಜರಿದ್ದರು.