ಕರ್ನಾಟಕದ ಅನ್ನಭಾಗ್ಯ ಯೋಜನೆಯು ಜನರನ್ನು ಸೋಮಾರಿಗಳನ್ನಾಗಿಸುತ್ತಿದೆ ಎಂಬ ಟೀಕೆಗಳ ನಡುವೆ, ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈ ಯೋಜನೆಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಾಲ್ಯದಲ್ಲಿ ನಡೆದ ಒಂದು ಘಟನೆ, ಬಡತನದಲ್ಲಿ ಹಸಿವಿನಿಂದ ಬಳಲುವವರಿಗೆ ಅನ್ನ ಸಿಗಬೇಕೆಂಬ ಅವರ ಮಹದಾಸೆಗೆ ಹೇಗೆ ಕಾರಣವಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಕರ್ನಾಟಕದಲ್ಲಿ ಬಡವರು ಹಸಿದುಕೊಂಡು ಇರಬಾರದು ಎನ್ನುವ ಕಾರಣದಿಂದ 2013 ರಿಂದ ಸಿಎಂ ಸಿದ್ದರಾಮಯ್ಯ ಅವರು ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತಂದಿದ್ದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಕಾಲಕ್ಕೆ ತಕ್ಕಂತೆ ಅಕ್ಕಿ ಹಾಗೂ ಇತರ ಬೇಳೆಕಾಳುಗಳ ವಿತರಣೆಯನ್ನು ಹೆಚ್ಚಿಸುತ್ತಾ ಬರಲಾಗಿದೆ. ಬಿಪಿಎಲ್​ ಕಾರ್ಡ್​ನ ದುರುಪಯೋಗ ಮಾಡಿಕೊಂಡು ಬೆಂಗಳೂರಿನಂಥ ಮಹಾನಗರಗಳಲ್ಲಿ ಸ್ವಂತ ಮನೆ ಹೊಂದಿ ಬಾಡಿಗೆಗೆ ಮನೆ ಬಿಟ್ಟಿರುವವರು ಕೂಡ ಇದರ ಬಳಕೆ ಮಾಡಿಕೊಳ್ಳುತ್ತಲೇ ಬಂದು ಹಲವು ವರ್ಷಗಳೇ ಗತಿಸಿವೆ. ಇತ್ತೀಚಿಗೆ ಇದಕ್ಕೆ ಕಡಿವಾಣ ಕೂಡ ಹಾಕಲಾಗಿದೆ. ಅಕ್ರಮ ಬಳಕೆದಾರರನ್ನು ಗುರುತಿಸುವುದು ತುಸು ಕಷ್ಟವೇ ಆಗಿದ್ದರೂ, ಇದು ಅರ್ಹರಿಗೆ ಮಾತ್ರ ಸಿಗಬೇಕು ಎನ್ನುವ ಕಾರಣದಿಂದ ನಿಯಮಗಳನ್ನು ಆಗಾಗ್ಗೆ ಜಾರಿಗೆ ತರಲಾಗುತ್ತಿದೆ.

ಯೋಜನೆ ಬಗ್ಗೆ ಅಪಸ್ವರ

ಅದೇನೇ ಇದ್ದರೂ, ಈ ಯೋಜನೆಯಿಂದ ಬಡಜನರಿಗೆ ಅನುಕೂಲ ಆಗುತ್ತಿರುವುದು ನಿಜವಾದರೂ, ಇದರಿಂದಾಗಿ ಕೆಲಸಕ್ಕೆ ಜನರು ಸಿಗುತ್ತಿಲ್ಲ, ಕೆಲಸ ಮಾಡದೇ ಜನರು ಸೋಮಾರಿಗಳಾಗುತ್ತಿದ್ದಾರೆ ಎನ್ನುವ ಹಲವಾರು ಆರೋಪಗಳೂ ಕೇಳಿಬರುತ್ತಲೇ ಇವೆ. ಈ ಬಗ್ಗೆ ಇದೀಗ ಕರ್ನಾಟಕದ ಕಾಂಗ್ರೆಸ್ ವಕ್ತಾರೆ, ಎಐಸಿಸಿ (AICC) ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಸಂಯೋಜಕಿ ಆಗಿರುವ ಹಾಗೂ ತಮ್ಮ ಅದ್ಭುತ ಮಾತುಗಳಿಂದ ಪ್ರಭಾವ ಬೀರುವ ಭವ್ಯಾ ನರಸಿಂಹಮೂರ್ತಿ ಅವರು, ಈ ಯೋಜನೆ ಹಿಂದಿರುವ ಕುತೂಹಲದ ಉದ್ದೇಶವನ್ನು ತಿಳಿಸಿದ್ದಾರೆ. Rapid Rashmi Youtube Channel ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಅನ್ನಭಾಗ್ಯದ ಬಗ್ಗೆ ಸಿದ್ದರಾಮಯ್ಯ

ನಾನಾಗ ಅಮೆರಿಕದಲ್ಲಿದ್ದೆ. ಅದು 2018ರ ಸಮಯ. ಕರ್ನಾಟಕಕ್ಕೆ ಬಂದಾಗ ಅದೇ ಮೊದಲ ಬಾರಿಗೆ ನನಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಅನ್ನಭಾಗ್ಯ ಯೋಜನೆಯ (Anna Bhagya Yojana) ಬಗ್ಗೆ ಅಪಸ್ವರ ಕೇಳಿಬರುತ್ತಿತ್ತು. ಜನ ಸೋಮಾರಿ ಆಗ್ತಾರೆ, ಕೆಲಸಕ್ಕೆ ಬರಲ್ಲ ಎಂದೆಲ್ಲಾ ಹೇಳುತ್ತಿದ್ದರು. ಈ ಬಗ್ಗೆ ನಾನು ಸಿದ್ದರಾಮಯ್ಯ ಅವರಲ್ಲಿ ಕೇಳಿದ್ದೆ. ಅದಕ್ಕೆ ಅವರು ಕಾರ್ಯಕ್ರಮ ಒಂದರಲ್ಲಿ, ಇದರ ಬಗ್ಗೆ ಮಾತನಾಡುತ್ತಾ, ಈ ಯೋಜನೆ ಜಾರಿಗೆ ತಂದಿರುವ ಉದ್ದೇಶವನ್ನು ಹೇಳಿದರು ಎಂದು ಭವ್ಯಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಲೂಸ್​ ಮೋಷನ್​ ಆದ ಘಟನೆ

ಸಿದ್ದರಾಮಯ್ಯನವರ ಬಾಲ್ಯದಲ್ಲಿ ಯಾರಾದರಿಗೂ ಲೂಸ್​ ಮೋಷನ್​ (Loose Motion) ಆಗಿದ್ದರೆ ಅನ್ನ ಊಟ ಮಾಡಿಸುತ್ತಿದ್ದರು. ಬಡವರಿಗೆ ಆ ಸಮಯದಲ್ಲಿ ಅನ್ನ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಅವರು ಶ್ರೀಮಂತರ ಮನೆಗೆ ಹೋಗಿ ಅನ್ನ ಬೇಡುತ್ತಿದ್ದರು. ಆ ಪರಿಸ್ಥಿತಿ ಯಾರಿಗೂ ಬರಬಾರದು, ಕರ್ನಾಟಕ ಜನರು ಹಸಿವಿನಿಂದ ನರಳಬಾರದು ಎನ್ನುವ ಕಾರಣಕ್ಕೆ ನಾನು ಈ ಯೋಜನೆ ಜಾರಿಗೆ ತಂದೆ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಭವ್ಯಾ ನೆನಪಿಸಿಕೊಂಡಿದ್ದಾರೆ. ಈ ಮೂಲಕ, ಈ ಯೋಜನೆಯ ಹಿಂದಿರುವ ಘಟನೆಯನ್ನು ಹಾಗೂ ಬಡವರು ಹೇಗೆ ಹಸಿವಿನಿಂದ ಇರಬಾರದು ಎನ್ನುವ ಮಹದಾಕಾಂಕ್ಷೆಯನ್ನು ಹೊತ್ತು ಈ ಯೋಜನೆ ಜಾರಿಗೆ ತರಲಾಗಿದೆ ಎನ್ನುವ ಬಗ್ಗೆ ಭವ್ಯಾ ನರಸಿಂಹ ಮೂರ್ತಿ ಮಾತನಾಡಿದ್ದಾರೆ.