ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ: ಸಿ.ಟಿ.ರವಿ
ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ, ಯಾವ ಊರಲ್ಲೂ ಜನ ಬೆಟ್ಟು ಮಾಡಿ ತೋರಿಸದ ಹಾಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು (ಮಾ.29): ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ, ಯಾವ ಊರಲ್ಲೂ ಜನ ಬೆಟ್ಟು ಮಾಡಿ ತೋರಿಸದ ಹಾಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ತಾಲೂಕಿನ ಉಂಡಾಡಿಹಳ್ಳಿಯಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಂಡಾಡಿಹಳ್ಳಿ ಗ್ರಾಮಸ್ಥರ ನನ್ನ ಸಂಬಂಧ ಇಂದು ನಿನ್ನೆಯದಲ್ಲ, ಅದು ಅವಿನಾಭಾವ ಸಂಬಂಧ. ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ನನ್ನ ಕಾಲೇಜು ದಿನಗಳಿಂದಲೂ ಬೆಸೆದ ಈ ಸಂಬಂಧ ಇನ್ನೂ ಗಟ್ಟಿಯಾಗೇ ಉಳಿದಿದೆ ಎಂದರು.
ಕೆಲಸ ಮಾಡುವವರಿಗೆ ಓಟು ಕೊಡಿ ಲೆಟರ್‌ಹೆಡ್ ಮಾರಿಕೊಳ್ಳುವವರಿಗೆ ನೀಡಿದರೆ ಊರಿಗೆ ಕೆಟ್ಟಹೆಸರು, ನನ್ನ ಕೇಸನ್ನು ಜನರಿಗೆ ಒಪ್ಪಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಮತದಾರರೆ ನ್ಯಾಯಾ ಧೀಶರು, ಬಡವ, ಶ್ರೀಮಂತ, ಜಾತಿಗೊಂದು ರೀತಿ ಓಟಿಲ್ಲ ಎಲ್ಲರಿಗೂ ಒಂದೆ ಓಟು, ಯಾರಾದರೂ ಕೋರ್ಟ್‌ನಲ್ಲಿ ಕೇಸು ಹಾಕಿದಾಗ ಲಾಯರ್‌ಗೆ ಒಪ್ಪಿಸುತ್ತೀರಿ ಹಾಗಾಗಿ ನನ್ನ ಪರವಾಗಿ ನೀವೆ ವಕೀಲರು ನನ್ನ ಪರವಾದ ಕೇಸು ನಿಮಗೆ ವಹಿಸಿದ್ದೇನೆ ಜನತಾ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಾಡಿ ಜನರಿಗೆ ಮನವರಿಕೆ ಮಾಡಿಕೊಡಿ.
ಚುನಾವಣೆ ಹಿನ್ನೆಲೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಭರ್ಜರಿ ಬೇಟೆ!
ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್ ನಿಂದ ಹೆದ್ದಾರಿ ರಸ್ತೆಗಳ ಅಭಿವೃದ್ಧಿವರೆಗೂ ಬೇರಾರಯರ ಹೆಸರು ಹೇಳಲು ಸಾಧ್ಯವಿಲ್ಲ ಹಾಗಾಗಿ ವಿರೋಧಿಗಳಿಗೆ ಉಳಿದಿರುವುದೊಂದೆ ಅದು ಅಪಪ್ರಚಾರ, ವಿರೋಧಿಗಳು ಅಪಪ್ರಚಾರ ಮಾಡುವಾಗ ಪ್ರಚಾರ ನೀವು ಮಾಡಬೇಕು ಎಂದರು. ಉಂಡಾಡಿಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ರು. ಬಿಡುಗಡೆಯಾಗಿದ್ದು 50 ಲಕ್ಷ ಹೆಚ್ಚುವರಿಯಾದರೂ ಗ್ರಾಮಸ್ಥರು ಮೆಚ್ಚುವ, ಜನಕ್ಕೆ ಉಪಯುಕ್ತವಾದ ಭವನ ನಿರ್ಮಿಸಲಾಗುತ್ತದೆ. ಕಳೆದ 5 ವರ್ಷಗಳಲ್ಲಿ ಬೀಕನಹಳ್ಳಿ ಪಂಚಾಯ್ತಿ ವ್ಯಾಪ್ತಿಗೆ 24.98 ಕೋಟಿ ಅನುದಾನ ನೀಡಿ ಗ್ರಾಮಗಳ ಅಭಿವೃದ್ಧಿ ಪಡಿಸಲಾಗಿದೆ.
ಯಾವ ಊರಿನಲ್ಲೂ ಕೆಲಸದ ಬಗ್ಗೆ ಯಾರೂ ಬೆಟ್ಟು ಮಾಡಿ ತೋರಿಸದಂತೆ ಸ್ಪಂದಿಸಲಾಗಿದೆ. ಗ್ರಾಮ ಠಾಣಾ ವಿಷಯದಲ್ಲಿ ಯಾರೂ ಆತಂಕ ಪಡಬೇಡಿ ಹೆದರುವ ಅವಶ್ಯವಿಲ್ಲ, ಯಾರಿಗೂ ಅನ್ಯಾಯವಾಗಲು ಬಿಡಲ್ಲ. ಗ್ರಾಮಸ್ಥರ ಬೇಡಿಕೆಯಂತೆ ಈಗಾಗಲೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ. ಚುನಾವಣೆ ಸಂದರ್ಭ ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತವಾಗುತೆ,್ತ ನಾನು ಇದ್ದದ್ದು ಇದ್ದಂಗೆ ಹೇಳಿದರೂ ಕೆಲವರಿಗೆ ಕಷ್ಟವಾಗುತ್ತದೆ ಹಾಗಾಗಿ ಏನೂ ಹೇಳುವುದಿಲ್ಲ ಎಂದು ಹೇಳಿದರು.
ಜಯಬಸವ ತಪೋವನದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಈ ಗ್ರಾಮದ ಗ್ರಾಮಸ್ಥರು ಹೂವಿನ ವ್ಯಾಪಾರ, ಕೃಷಿ ಕಾಯಕ ಮಾಡುತ್ತ ಯಾರ ಹಂಗಿಗೂ ಹೋಗದೆ ಕರ್ತವ್ಯನಿಷ್ಠೆ ಧರ್ಮದಿಂದ ಬದುಕು ಸಾಗಿಸುತ್ತಿರುವ ಬಹಳ ಶ್ರಮ ಜೀವಿಗಳು. ಬನ್ನಿರಾಯ ಸ್ವಾಮಿ ಅಗ್ನಿ ವಂಶಸ್ಥರು ಅವರು ಕ್ಷತ್ರಿಯ ಮೂಲ ಪುರುಷರು, ಬೆಂಗಳೂರಿನಲ್ಲಿರುವ ಚಿಗಳ ಪೇಟೆ, ಚಿಕ್ಕಪೇಟೆಯಲ್ಲಿ ಮಾಡುವ ಹೂವಿನ ಕರಗದ ವ್ಯವಸ್ಥೆಯನ್ನು ಈ ಸಮುದಾಯದವರೆ. ಕರ್ತವ್ಯದಲ್ಲಿ ಎಂದೂ ಹಿಂದೆ ಬಿದ್ದವರಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ಪಟ್ಟಿ ಶೀಘ್ರವೇ ಘೋಷಣೆ: ನಳಿನ್ ಕುಮಾರ್ ಕಟೀಲ್
ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್ ಮಾತನಾಡಿ, ಉಂಡಾಡಿಹಳ್ಳಿ ಗ್ರಾಮದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯುತ್ಸವದ ಮೂಲಕ ಗ್ರಾಮಸ್ಥರು ಒಗ್ಗೂಡಿ ಧಾರ್ಮಿಕ ಆಚರಣೆ ಮಾಡುತ್ತಿದ್ದೀರಿ. ಆಡಿದ ಮಾತಿಗೆ ತಪ್ಪಿಸಿಕೊಳ್ಳದ ಜನ ನೀವು ಅದೇ ರೀತಿ ರಸ್ತೆ, ಚರಂಡಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ಶಾಸಕ ಸಿ.ಟಿ.ರವಿ ಕೂಡ ಅಭಿವೃದ್ಧಿ ವಿಷಯದಲ್ಲಿ ಮಾತು ತಪ್ಪಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಗ್ರಾಪಂ ಅಧ್ಯಕ್ಷೆ ಭಾಗೀರಥಿ ಜಯಣ್ಣ, ತಿಮ್ಮೇಗೌಡ, ಗೌರೇಗೌಡ, ಧರ್ಮಣ್ಣ, ನಿಂಗೇಗೌಡ, ಶಂಕರ್ ಇದ್ದರು.