Man Behind PayCM: ಸರ್ಕಾರಕ್ಕೆ ತಿವಿಯಲು 'ಐಟಿ' ಐಡಿಯಾ, ಪೇಸಿಎಂ ಅಭಿಯಾನದ ಮಾಸ್ಟರ್‌ ಮೈಂಡ್‌ ಮಾತು!

ರಾಜ್ಯ ರಾಜಕೀಯದಲ್ಲಿ ಈಗ ಪೇಸಿಎಂನದ್ದೇ ಸುದ್ದಿ. ಕಾಂಗ್ರೆಸ್‌ ಮಾಡಿರುವ ಈ ಕ್ಯಾಂಪೇನ್‌ ಹಾಗೂ ಐಡಿಯಾಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ರಾಜಕೀಯ ಏನೇ ಇರಲಿ, ಐಟಿ ಸಿಟಿಯಲ್ಲಿ ಸರ್ಕಾರದ ಮೇಲಿನ ಆರೋಪಗಳನ್ನು ಜನರಿಗೆ ತಿಳಿಸಲು ಐಟಿ ರೀತಿಯಲ್ಲೇ ಯೋಚನೆ ಮಾಡಿದ ಅಭಿಯಾನದ ಹಿಂದಿನ ಟೀಮ್‌ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕ್ಯಾಂಪೇನ್‌ನಲ್ಲಿ ಕೆಲಸ ಮಾಡಿದ ವ್ಯಕ್ತಿ ಈ ಯೋಚನೆಯ ಬಗ್ಗೆ ಮಾತನಾಡಿದ್ದಾರೆ.

PayCm campaign master mind Form Karnataka Congress  allegations commission against the BJP government san

ಬೆಂಗಳೂರು (ಸೆ.23): ರಾಜಕೀಯದಲ್ಲಿ ಯಶಸ್ಸು ಕಾಣಲು ನೂರಾರು ಮಾರ್ಗಗಳಿವೆ. ಸಮಾವೇಶ, ಪಾದಯಾತ್ರೆಗಳದ್ದು ಒಂದು ಮುಖವಾದರೆ, ಡಿಜಿಟಲ್‌ ವಲಯ ಇನ್ನೊಂದು ಮುಖ. ಬಿಜೆಪಿ ಐಟಿ ಸೆಲ್‌ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕ್ಯಾಂಪೇನ್‌ಗಳನ್ನು ಮಾಡಿದೆ. ಇಲ್ಲಿಯವರೆಗೂ ಬಿಜೆಪಿ ತಂತ್ರಗಾರಿಕೆಗೆ ಟಕ್ಕರ್‌ ಕೊಡಲು ಒದ್ದಾಡುತ್ತಿದ್ದ ರಾಜ್ಯ ಕಾಂಗ್ರೆಸ್‌, ಪೇಸಿಎಂ ಕ್ಯಾಂಪೇನ್‌ ಮೂಲಕ ಜಿಗಿದೆದ್ದಿದೆ. ಐಟಿ ಹಬ್‌ ಬೆಂಗಳೂರಿಗೆ ಐಟಿ ರೀತಿಯಲ್ಲೇ ಯೋಚನೆ ಮಾಡಿ ಕಾಂಗ್ರೆಸ್‌ ಸರ್ಕಾರವನ್ನು ತಿವಿದಿರುವ ಅಭಿಯಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಖ್ಯಾತ ಡಿಜಿಟಲ್ ವ್ಯಾಲೆಟ್‌ ಕಂಪನಿಯ ಹೆಸರನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ. ರಾಜ್ಯ ಸರ್ಕಾರದ ಕಮಿಷನ್‌ ಆರೋಪದ ಜನರಿಗೆ ರೀಚ್‌ ಮಾಡುವಲ್ಲಿ ಸೋಲುತ್ತಿದ್ದ ಕಾಂಗ್ರೆಸ್‌, ಪೇಸಿಎಂ ಮೂಲಕ ಅದರಲ್ಲಿ ಯಶಸ್ವಿಯಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿರುವುದು ಇಂಥದ್ದೊಂದು ಯೋಚನೆ. ಕ್ಯುಆರ್‌ಕೋಡ್‌, ಅದನ್ನು ಅದನ್ನು ಸ್ಕ್ಯಾನ್‌ ಮಾಡಿದಾಗ 40% ಕಮಿಷನ್‌ ಕುರಿತಾದ ವೆಬ್‌ಸೈಟ್‌ಗೆ ಹೋಗುವ ಈ ಯೋಚನೆಗಳು ಬಂದಿದ್ದೇಗೆ ಅನ್ನೋದನ್ನ, ಈ ಅಭಿಯಾನದ ಹಿಂದೆ ಕೆಲಸ ಮಾಡಿದ ಕಾಂಗ್ರೆಸ್‌ನ ಐಟಿ ಸೆಲ್‌ನ ಅಧಿಕಾರಿಯೊಬ್ಬರು ಏಷ್ಯಾನೆಟ್‌ ಕನ್ನಡ ವೆಬ್‌ಸೈಟ್‌ ಜೊತೆ ಮಾತನಾಡಿದ್ದಾರೆ. ಹೆಸರು ಹೇಳಲಿಚ್ಛಿಸದ ಅಧಿಕಾರಿ, ಈ ಅಭಿಯಾನ ಇಷ್ಟು ದೊಡ್ಡಮಟ್ಟದಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಇಟ್ಟಿದ್ದಾಗಿ ಹೇಳಿದರು.

ಇದರ ನಡುವೆ ಚುನಾವಣಾ ಚಾಣಾಕ್ಷ ಸುನಿಲ್ ಕನುಗೋಳು (Sunil Kanugolu) ಟೀಮ್‌  ಜೊತೆ ಕಾಂಗ್ರೆಸ್ ನಾಯಕರು ಶುಕ್ರವಾರ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಟಾಸ್ಕ್ ಫೋರ್ಸ್ - 2024 ಟೀಮ್ ನಲ್ಲಿರುವ ಸುನಿಲ್ ಕನಗೋಳು ಈಗಾಗಳೇ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಬಿಜೆಪಿಯ ಐಟಿ ಸೆಲ್‌ಗೆ ಕೌಂಟರ್‌ ಕೊಟ್ಟಿದ್ದೇವೆ: ಪೇಸಿಎಂ (PayCM) ಅಭಿಯಾನ ಯಶಸ್ಸು ಕಂಡಿರೋದು, ಪಕ್ಷದ ಲಾಭದೊಂದಿಗೆ ಕಾಂಗ್ರೆಸ್‌ ಐಟಿ ಸೆಲ್‌ನ (Congress IT Cell) ಸಾಮರ್ಥ್ಯವನ್ನು ತೋರಿದೆ. ಬಿಜೆಪಿಯ ಐಟಿ ಸೆಲ್‌ ಈವರೆಗೂ ಇಂಥ ಸಾಕಷ್ಟು ಕ್ಯಾಂಪೇನ್‌ಗಳನ್ನ ಮಾಡಿದೆ. ಅವರಿಗೆ ಕೌಂಟರ್‌ ಕೊಟ್ಟು ನಮ್ಮಿಂದ ಕೂಡ ಸಾಧ್ಯ ಎನ್ನುವುದು ಈ ಮೂಲಕ ತೋರಿಸಿದ್ದೇವೆ. ಸರ್ಕಾರ ವಿರುದ್ಧ ಮಾತನಾಡೋಕೆ ನಮ್ಮಲ್ಲಿ ಸಾಕಷ್ಟು ವಿಚಾರಗಳು ಇದ್ದವು. ಆದರೆ, ಜನರಿಗೆ ರೀಚ್‌ ಮಾಡೋಕೆ ಕೆಲವೊಮ್ಮೆ ಸೋಲು ಕಂಡಿದ್ದೆವು. ಈಗ ನಮ್ಮ ಟೀಮ್‌, ಜನರ ನಡುವಲ್ಲೇ ಇರುವ ಸಮಸ್ಯೆಗಳು, ಅವರು ಯಾವುದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ ಅನ್ನೋದನ್ನ ನೋಡಿಕೊಂಡು, ಅತ್ಯಂತ ಸರಳವಾಗಿ ಹೇಳಬೇಕು ಎಂದು ತೀರ್ಮಾನ ಮಾಡಿದ್ದೆವು.

ಪೇಸಿಎಂ ಎನ್ನುವ ಹೆಸರೇ ಯಾಕೆ?: ಬಿಜೆಪಿ (BJP) ಕಳೆದ ಚುನಾವಣೆಗಳಲ್ಲಿ ಡಿಜಿಟಲ್‌ಅಲ್ಲಿ ಉತ್ತಮವಾಗಿ ಬಳಸಿಕೊಂಡಿತ್ತು. ಅದೇ ಸ್ಟ್ರ್ಯಾಟಜಿಯನ್ನು ನಾವು ಬಳಸಿಕೊಂಡಿದ್ದೇವೆ. ಪೇಟಿಎಂ ಎನ್ನುವ ಡಿಜಿಟಲ್‌ ವ್ಯಾಲೆಟ್‌ ಕಂಪನಿ ನಮ್ಮಲ್ಲಿ ತುಂಬಾ ಹಳೆಯದು. ಗೂಗಲ್‌ ಪೇ, ಫೋನ್‌ ಪೇ ಮೂಲಕ ಪಾವತಿಯನ್ನೂ ಕೆಲವೆಡೆ ಪೇಟಿಎಂ ಮಾಡು ಎಂದೇ ಹೇಳ್ತಾರೆ. ಪೇಟಿಎಂ ಎನ್ನುವ ಹೆಸರು ಸಿಎಂ ಎನ್ನುವ ಶಬ್ದಕ್ಕೆ ಒಳ್ಳೆಯ ಪ್ರಾಸವಾಗಿ ಕೂಡುತ್ತದೆ. ಹಾಗಾಗಿ ಪೇಸಿಎಂ ಎನ್ನುವುದನ್ನು ಬಳಸಿಕೊಂಡೆವು. ಟೀಮ್‌ನ ಒಬ್ಬ ವ್ಯಕ್ತಿ ಈ ಹೆಸರನ್ನು ಸೂಚಿಸಿದರು. ಒಟ್ಟಾರೆ ಜನರಿಗೆ ಅಷ್ಟು ಸುಲಭವಾಗಿ ತಲುಪೋದು ಹೇಗೆ ಎಂದಾಗ ಹುಟ್ಟಿದ್ದು ಈ ಐಡಿಯಾ.  ಬಹುಶಃ 2017ರಿಂದ ಜನ ತಮ್ಮ ಕೈಯಲ್ಲಿ ಕ್ಯಾಶ್‌ ಇಡೋದನ್ನೇ ಬಿಟ್ಟುಬಿಟ್ಟಿದ್ದಾರೆ. ಎಲ್ಲೇ ಹೋಗ್ಲಿ ಆನ್‌ಲೈನ್‌ ಪೇ ಮಾಡೋದೇ ಆಗಿದೆ. ಡಿಜಿಟಲ್‌ ಪೇಯಲ್ಲಿ ಆರಂಭಿಕವಾಗಿ ಇದ್ದಿದ್ದು ಪೇಟಿಎಂ (PayTM). ಜನರ ಬಾಯಲ್ಲಿ ಈ ಶಬ್ದವಿದೆ. ಆ ಕಾರಣಕ್ಕಾಗಿ ಇದೇ ಹೆಸರನ್ನ ಸ್ವಲ್ಪ ಬದಲಾಯಿಸಿ ಉಳಿಸಿಕೊಂಡೆವು. ಈ ಅಭಿಯಾನ ಖಂಡಿತವಾಗಿ ಯಶಸ್ಸು ಆಗುತ್ತೆ ಅನ್ನೋದು ಗೊತ್ತಿತ್ತು.

ಇದೊಂದು ಟೀಮ್‌ ವರ್ಕ್‌: ಸಾಮಾನ್ಯವಾಗಿ ಇಂಥ ಅಭಿಯಾನ ಯಾರೋ ಒಬ್ಬ ವ್ಯಕ್ತಿ ಮಾಡೋದಿಲ್ಲ. ಒಂದು ಟೀಮ್‌ ಇರುತ್ತೆ. ಟೀಮ್‌ನಲ್ಲಿ ಇದರ ವಿಚಾರ ಅಮೂಲಾಗ್ರವಾಗಿ ಚರ್ಚೆ ಆಗುತ್ತೆ. ಇದರಲ್ಲೂ ಹಾಗೆ, ಹೆಸರಿನಿಂದ ಹಿಡಿದು, ಸ್ಕ್ಯಾನ್‌ ಮಾಡಿದಾಗ ವೆಬ್‌ಸೈಟ್‌ಗೆ ಅದು ಹೋಗಬೇಕು ಎನ್ನುವಂಥ ಎಲ್ಲಾ ಐಡಿಯಾಗಳನ್ನು ಚರ್ಚೆ ಮಾಡಲಾಗಿತ್ತು.

PayCM Posters: ಪರಿಷತ್‌ನಲ್ಲಿ ‘ಪೇಸಿಎಂ ಪೋಸ್ಟರ್‌’ ಕೋಲಾಹಲ

ಅಂದಾಜು 1 ತಿಂಗಳ ಕೆಲಸ: ನಿಮ್ಮಹತ್ರ ಇದ್ಯಾ ಉತ್ತರ ಅನ್ನೋ ಕ್ಯಾಂಪೇನ್‌ಅನ್ನು ನಾವು ಮಾಡಿದ್ದೆವು. ಅದಾದ ನಂತರ 40% ಸರ್ಕಾರ ಅನ್ನೋ ಕ್ಯಾಂಪೇನ್‌ ಮಾಡಿದ್ದೆವು. ಇದಾದ ಬಳಿಕ, ಈ ವಿಚಾರ ಜನರಿಗೆ ಇನ್ನಷ್ಟು ಡೀಪ್‌ ಆಗಿ ವಿಚಾರ ತಲುಪಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ತುಂಬಾ ಬೇಗ ಕನೆಕ್ಟ್‌ ಆಗಬೇಕು ಅನಿಸಿತ್ತು. ಅದಕ್ಕಾಗಿ ಒಂದು ತಿಂಗಳಿನಿಂದ, ಬಹುಶಃ ಆಗಸ್ಟ್‌ ಆರಂಭದಿಂದ ಈ ಅಭಿಯಾನದ ಪ್ಲ್ಯಾನ್‌ ಮಾಡಿದ್ದೆವು.

ಪೇಸಿಎಂ ಪೋಸ್ಟರ್‌: ಸಿಸಿಟೀವಿ ದೃಶ್ಯ ಆಧರಿಸಿ ಐವರು ಕಾಂಗ್ರೆಸ್‌ ಕಾರ‍್ಯಕರ್ತರ ಸೆರೆ

ಹೈಕಮಾಂಡ್‌ನಿಂದ ಭೇಷ್‌: ಬಿಜೆಪಿಯಂಥ ಪಾರ್ಟಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕೌಂಟರ್‌ ಕೊಟ್ಟಿರೋದಕ್ಕೆ ಹೈಕಮಾಂಡ್‌ ಕೂಡ ಖುಷಿ ಪಟ್ಟಿದೆ. ಹೌದು, ಈ ಅಭಿಯಾನ ಯಶಸ್ಸು ಕಂಡ ಬೆನ್ನಲ್ಲಿಯೇ ಹಿರಿಯ ನಾಯಕರಿಂದಲೂ ಕರೆ ಸ್ವೀಕರಿಸಿದ್ದೇವೆ. ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಿಜೆಪಿ ಇಂಥ ಕ್ಯಾಂಪೇನ್‌ಗಳನ್ನು ಮಾಡಲು ಹೆಸರುವಾಸಿ. ಇಂದು ಪೇಸಿಎಂ ಎನ್ನುವ ಶಬ್ದ ಕಾಂಗ್ರೆಸ್‌ನ ಹಿರಿಯ ನಾಯಕರಿಂದ ಪಕ್ಷದ ಕಟ್ಟಕಡೆಯ ವ್ಯಕ್ತಿಯವರೆಗೂ ಮುಟ್ಟಿದೆ. ರಾಜ್ಯದ ಜನರು ಟ್ವಿಟರ್‌ನಲ್ಲಿ ಟ್ವೀಟ್‌, ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ಸ್ಟೇಟಸ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಟ್ರೋಲ್‌ ಪೇಜ್‌ಗಳೂ ಕೂಡ ಇದನ್ನು ಬಳಸಿಕೊಂಡಿವೆ. ಅಷ್ಟರ ಮಟ್ಟಿಗೆ ಇದು ರೀಚ್‌ ಆಗಿರುವ ಖುಷಿ ಇದೆ. ಎನ್ನುತ್ತಾರೆ. ನಿನ್ನೆ ಬೆಳಗ್ಗೆಯೇ ಹಿರಿಯ ನಾಯಕರು ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ರೀಚ್‌ ಇನ್ನಷ್ಟೇ ಗೊತ್ತಾಗಬೇಕಿದೆ: #PayCM ಎನ್ನುವ ಶಬ್ದ ತುಂಬಾ ಜನರಿಗೆ ರೀಚ್‌ ಆಗಿದೆ. ಬಹುಶಃ ತುಂಬಾ ದೊಡ್ಡ ಮಟ್ಟಕ್ಕೆ ರೀಚ್‌ ಆಗಿರುವ ಲಕ್ಷಣವಂತೂ ಕಾಣ್ತಿದೆ. ಆದರೆ, ಎಷ್ಟು ಲಕ್ಷ ಮಂದಿ ರೀಟ್ವೀಟ್‌ ಮಾಡಿದ್ದಾರೆ. ಅದರ ಎಂಗೇಜ್‌ಮೆಂಟ್ಸ್‌, ರೀಚ್ ಎಷ್ಟಾಗಿದೆ ಅನ್ನೋದನ್ನ ಇನ್ನಷ್ಟೇ ಚೆಕ್‌ ಮಾಡಬೇಕು ಎನ್ನುತ್ತಾರೆ.
 

Latest Videos
Follow Us:
Download App:
  • android
  • ios