Asianet Suvarna News Asianet Suvarna News

PayCM Posters: ಪರಿಷತ್‌ನಲ್ಲಿ ‘ಪೇಸಿಎಂ ಪೋಸ್ಟರ್‌’ ಕೋಲಾಹಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರ ಬಳಸಿ ‘ಪೇ ಸಿಎಂ’ ಭಿತ್ತಿಪತ್ರ ಅಂಟಿಸಿರುವ ಪ್ರಕರಣ ಉಭಯ ಸದನಗಳಲ್ಲಿ ಗುರುವಾರ ಪ್ರತಿಧ್ವನಿಸಿ ಭಾರಿ ಕೋಲಾಹಲ ಸೃಷ್ಟಿಸಿತು. 

paycm posters uproar in karnataka assembly council protest and creat hydrama by congress gvd
Author
First Published Sep 23, 2022, 3:20 AM IST

ವಿಧಾನ ಪರಿಷತ್‌ (ಸೆ.23): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರ ಬಳಸಿ ‘ಪೇ ಸಿಎಂ’ ಭಿತ್ತಿಪತ್ರ ಅಂಟಿಸಿರುವ ಪ್ರಕರಣ ಉಭಯ ಸದನಗಳಲ್ಲಿ ಗುರುವಾರ ಪ್ರತಿಧ್ವನಿಸಿ ಭಾರಿ ಕೋಲಾಹಲ ಸೃಷ್ಟಿಸಿತು. ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಆಡಳಿತಾರೂಢ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆದು ಗದ್ದಲದ ವಾತಾವರಣ ಉಂಟಾಯಿತು. ವಿಶೇಷವಾಗಿ ಮೇಲ್ಮನೆಯಲ್ಲಿ ದಿನದಗದ್ದಲದ ನಡುವೆ ಕಲಾಪದ ‘ಶಾಸ್ತ್ರ’ ನಡೆಸಲಾಯಿತು.

ವಿಧಾನ ಪರಿಷತ್‌ನಲ್ಲಿ ಪ್ರಕರಣದ ಸಂಬಂಧ ತಮ್ಮ ಪಕ್ಷದ ಕಾರ್ಯಕರ್ತರನ್ನು ಪೊಲೀಸರನ್ನು ಬಂಧಿಸಿರುವ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಶಾಸಕರು ಒತ್ತಾಯಿಸಿ ನಡೆಸಿದ ಧರಣಿಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಾಕಷ್ಟುಬಾರಿ ಮನವಿ ಮಾಡಿದರೂ ಧರಣಿಯಿಂದ ಹಿಂದೆ ಸರಿಯದ ಪರಿಣಾಮ ಸಭಾಪತಿ ರಘುನಾಥ್‌ರಾವ್‌ ಮಲ್ಕಾಪುರೆ ಅವರು ಗದ್ದಲದ ಮಧ್ಯ ಪ್ರಶ್ನೋತ್ತರ, ಶೂನ್ಯ ವೇಳೆ ಕಲಾಪ, ಹಾಗೂ ಒಂದು ವಿಧೇಯಕ ಅಂಗೀಕಾರ ಪ್ರಕ್ರಿಯೆ ನಡೆಸಿದರು.

Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್

ಆದರೆ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ಪಿ. ರಾಜೀವ್‌ ಅವರು ಪ್ರಸ್ತಾಪಿಸಿದ ವಿಷಯ ಕೆಲ ಕಾಲ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಈ ಭಿತ್ತಿಚಿತ್ರ ಅಂಟಿಸಿದ್ದಾರೆ ಎಂದಾಗ ಕೆಲಕಾಲ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ, ತಪ್ಪು ಮಾಡಿದ್ದರೆ ಕಾನೂನಡಿ ಕ್ರಮ ಕೈಗೊಳ್ಳಲು ಅಭ್ಯಂತರ ಇಲ್ಲ. ಅದನ್ನು ನಾವು ಎದುರಿಸಲು ಸಿದ್ದರಿದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು. ಕಾನೂನು ಸಚಿವ ಮಾಧುಸ್ವಾಮಿ ಅವರು, ‘ಕಾಂಗ್ರೆಸ್‌ನವರು ಮಾಡಿದ್ದಾರೆ ಎಂದು ಹೇಳುವುದಿಲ್ಲ. ತಪ್ಪು ಯಾರು ಮಾಡಿದ್ದಾರೋ ಅವರ ಆತ್ಮಸಾಕ್ಷಿಗೆ ಬಿಡೋಣ’ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಮೇಲ್ಮನೆಯ ಕಲಾಪ ನುಂಗಿದ ಧರಣಿ: ಇತ್ತ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು, ‘ಪೇ ಸಿಎಂ’ ಭಿತ್ತಿ ಪತ್ರ ಅಂಟಿಸಿರುವ ಪ್ರಕರಣ ಸಂಬಂಧ ಪೊಲೀಸರು ನಿನ್ನೆ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತರ ಮನೆಗೆ ನುಗ್ಗಿ ಹೆಂಗಸರು, ಮಕ್ಕಳಿಗೆ ಬೆದರಿಸಿ ಬಂಧಿಸಿದ್ದಾರೆ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಇದಕ್ಕೆ ಒಪ್ಪದ ಸಭಾಪತಿಯವರು ನೋಟಿಸ್‌ ನೀಡಿದರೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಸಭಾಪತಿಗಳು ಚರ್ಚೆಗೆ ಅವಕಾಶ ನಿರಾಕರಿಸಿದ್ದರಿಂದ ಕಾಂಗ್ರೆಸ್‌ ಸದಸ್ಯರು ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿದರು. ಪರಸ್ಪರ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಮುಂದುವರೆದ ಧರಣಿ, ಪರಸ್ಪರ ಆರೋಪ: ಪುನಃ ಸದನ ಆರಂಭವಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್‌ ನೋಟಿಸ್‌ ನೀಡಿದರೆ ಚರ್ಚಿಸಿ ಉತ್ತರಿಸಲು ಸರ್ಕಾರ ಸಿದ್ಧ, 40, 100 ಪರ್ಸೆಂಟ್‌ ಬಗ್ಗೆ ಸಹ ಚರ್ಚಿಸಲು ಸಿದ್ಧ’ ಎಂದು ಹೇಳಿದರು. ಪೇಸಿಎಂ ಪ್ರಕರಣದ ಬಗ್ಗೆ ದೂರು ದಾಖಲಾಗಿರುವುದರಿಂದ ಕ್ರಮಕೈಗೊಳ್ಳಲಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಕುರಿತ ಭಿತ್ತಿ ಪತ್ರ ಪ್ರದರ್ಶನ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Pay CM Posters: ಪೇ ಸಿಎಂ ಪೋಸ್ಟರ್‌ ತನಿಖೆಗೆ ಪೊಲೀಸ್‌ ಆಯುಕ್ತ ಆದೇಶ

ಗದ್ದಲದ ನಡುವೆ ನಡೆದ ಕಲಾಪ: ಆದರೆ ಈ ಮಾತಿಗೆ ಒಪ್ಪದೇ ಕಾಂಗ್ರೆಸ್‌ ಧರಣಿ ಮುಂದುವರೆಸಿದಾಗ ಸಭಾಪತಿಗಳು ಪ್ರಶ್ನೋತ್ತರ ಕೈಗೆತ್ತಿಕೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಭ್ರಷ್ಟಾಚಾರದ ಬರಹಗಳ ಭಿತ್ತಿಚಿತ್ರ ಪ್ರದರ್ಶಿಸಿ ಘೋಷಣೆ ಕೂಗತೊಡಗಿದರು. ಗದ್ದಲ ಹಾಗೂ ಕಾಂಗ್ರೆಸ್‌ ಸದಸ್ಯರ ತೀವ್ರ ವಿರೋಧದ ನಡುವೆಯೇ ಸಭಾಪತಿಗಳು ಪ್ರಶ್ನೋತ್ತರ, ಶೂನ್ಯವೇಳೆ ಹಾಗೂ ಕರ್ನಾಟಕ ರಾಜ್ಯ ವಿವಿ ತಿದ್ದುಪಡಿ ವಿಧೇಯಕವನ್ನು ಧ್ವನಿ ಮತದ ಮೂಲಕ ಅಂಗೀಕರಿಸಿ, ಸದನವನ್ನು ಮಧ್ಯಾಹ್ನ 3ಗಂಟೆವರೆಗೆ ಮುಂದೂಡಿದರು.

Follow Us:
Download App:
  • android
  • ios