ಪೇಸಿಎಂ ಪೋಸ್ಟರ್: ಸಿಸಿಟೀವಿ ದೃಶ್ಯ ಆಧರಿಸಿ ಐವರು ಕಾಂಗ್ರೆಸ್ ಕಾರ‍್ಯಕರ್ತರ ಸೆರೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬೆಂಗಳೂರಿನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಂಗ್ಯಭರಿತ ‘ಪೇಸಿಎಂ’ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು (ಸೆ.23): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬೆಂಗಳೂರಿನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಂಗ್ಯಭರಿತ ‘ಪೇಸಿಎಂ’ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಲಗ್ಗೆರೆಯ ವಿಶ್ವಮೂರ್ತಿ, ಸಿದ್ದಯ್ಯ, ವಿನೋದ್, ಮದನ್ ಹಾಗೂ ಸಂಜಯ್ ಬಂಧಿತರಾಗಿದ್ದು, ಈ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಮುಖ್ಯಸ್ಥ ಬಿ.ಆರ್.ನಾಯ್ಡು, ಗಗನ್ ಹಾಗೂ ಪವನ್ ಸೇರಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.
ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಬಗ್ಗೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಲಗ್ಗೆರೆಯ ಈ ಐವರನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡಿರುವ ಇನ್ನುಳಿದವರ ಪತ್ತೆಗೆ ತನಿಖೆ ಪ್ರಗತಿಯಲ್ಲಿದೆ. ವಿಚಾರಣೆ ಸಲುವಾಗಿ ಬಿ.ಆರ್.ನಾಯ್ಡು ಅವರನ್ನು ವಶಕ್ಕೆ ಪಡೆಯಲಾಗಿತ್ತು’ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
Pay CM Posters: ಕಾಂಗ್ರೆಸ್, ಬಿಜೆಪಿ ಪೋಸ್ಟರ್ ಫೈಟ್: ಪೇ ಸಿಎಂಗೆ ಕಮಲ ಪಡೆ ಕೌಂಟರ್
ಏನಿದು ವಿವಾದ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶೇ.40 ಕಮಿಷನ್ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಕಾಂಗ್ರೆಸ್ ಪಕ್ಷ ಅಂಟಿಸಿತ್ತು. ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳುವ ಮಾರ್ಗದ ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಶೇಷಾದ್ರಿಪುರ ಹಾಗೂ ಹೈಗ್ರೌಂಡ್ಸ್ ವ್ಯಾಪ್ತಿಯ ಗೋಡೆಗಳಿಗೆ ‘ಪೇ ಸಿಎಂ’ ಹೆಸರಿನ ಪೋಸ್ಟರ್‌ಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್ನಲಾದ ಕೆಲವರು ಹಾಕಿದ್ದರು. ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮುಖ್ಯಮಂತ್ರಿಗಳಿಗೆ ಭಾರಿ ಮುಜುಗರ ತಂದಿದ್ದವು.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಜೆ.ಸಿ.ನಗರ, ಸಂಜಯನಗರ, ಶೇಷಾದ್ರಿಪುರ, ಸದಾಶಿವನಗರ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ಆರೋಪದ ಮೇರೆಗೆ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಬುಧವಾರ ರಾತ್ರಿಯಿಂದಲೇ ಪೋಸ್ಟರ್ ಅಂಟಿಸಿದವರ ಪತ್ತೆಗೆ ಹುಡುಕಾಟ ನಡೆಸಿದ್ದ ಪೊಲೀಸರು, ಗುರುವಾರ ಮುಂಜಾನೆ ಹೊತ್ತಿಗೆ ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು.
ಹೈಗ್ರೌಂಡ್ಸ್ ಠಾಣೆಗೆ ಬಂದು ಡಿಕೆಶಿ, ಶಾಸಕರ ಆಕ್ರೋಶ: ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಹಿನ್ನಲೆಯಲ್ಲಿ ರೊಚ್ಚಿಗೆದ್ದ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಲ ಶಾಸಕರು, ಹೈಗ್ರೌಂಡ್ಸ್ ಠಾಣೆಗೆ ಗುರುವಾರ ತೆರಳಿ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷ ಬಿ.ಆರ್.ನಾಯ್ಡು ಹಾಗೂ ಗಗನ್ ಸೇರಿದಂತೆ ಕೆಲವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ಕರೆ ತಂದಿದ್ದರು.
Pay CM Posters: ಪೇ ಸಿಎಂ ಪೋಸ್ಟರ್ ತನಿಖೆಗೆ ಪೊಲೀಸ್ ಆಯುಕ್ತ ಆದೇಶ
ಈ ವಿಷಯ ತಿಳಿದು ಕೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ವಕೀಲ ಪೊನ್ನಣ್ಣ ಸೇರಿದಂತೆ ಕೆಲವು ಮುಖಂಡರು ಠಾಣೆಗೆ ತೆರಳಿ ಪೊಲೀಸರನ್ನು ಭೇಟಿಯಾಗಿ ಪ್ರತಿಭಟನೆ ಸಲ್ಲಿಸಿದರು. ಇನ್ನೊಂದೆಡೆ ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಪರಿಣಾಮ ಕೆಲ ಹೊತ್ತು ಬಿಗುವಿನ ವಾತಾವರಣ ನೆಲೆಸಿತು. ಕೊನೆಗೆ ಬಿ.ಆರ್.ನಾಯ್ಡು, ಗಗನ್ ಹಾಗೂ ಪವನ್ ಅವರನ್ನು ವಿಚಾರಣೆ ನಡೆಸಿ ಪೊಲೀಸರು ಬಿಡುಗಡೆಗೊಳಿಸಿದರು. ನಂತರ ಪರಿಸ್ಥಿತಿ ಸಹ ಶಾಂತವಾಯಿತು.