ಮೊದಲಿನಿಂದಲೂ ಎನ್‌ಸಿಪಿ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ಅಜಿತ್‌ಗೆ ಇತ್ತೀಚೆಗೆ ಶರದ್‌ ಪವಾರ್‌ ಶಾಕ್‌ ನೀಡಿದ್ದರು. ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಹಿರಿಯ ನಾಯಕ ಪ್ರಫುಲ್‌ ಪಟೇಲ್‌ ಜೊತೆಗೆ ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಿಸಿದ್ದರು.

ಮುಂಬೈ (ಜುಲೈ 3, 2023): ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದ ಅಜಿತ್‌ ಪವಾರ್‌ರದ್ದು ಭಂಡ ಧೈರ್ಯ, ರಾಜಕೀಯ ಮಹತ್ವಕಾಂಕ್ಷೆಯ, ಅಂದುಕೊಂಡಿದನ್ನು ಮಾಡಿ ತೋರಿಸುವ ವಿಭಿನ್ನ ವ್ಯಕ್ತಿತ್ವ. ಅದಕ್ಕೆಂದೇ ಅವರು ವೈರಿ ಪಕ್ಷ ಬಿಜೆಪಿ ಜತೆ ಕೈಜೋಡಿಸಿದ್ದಾರೆ.

ಮೊದಲಿನಿಂದಲೂ ಎನ್‌ಸಿಪಿ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ಅಜಿತ್‌ಗೆ ಇತ್ತೀಚೆಗೆ ಶರದ್‌ ಪವಾರ್‌ ಶಾಕ್‌ ನೀಡಿದ್ದರು. ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಹಿರಿಯ ನಾಯಕ ಪ್ರಫುಲ್‌ ಪಟೇಲ್‌ ಜೊತೆಗೆ ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನೂ ನೇಮಿಸಿದ್ದರು. ಇದು ಪಕ್ಷದ ಚುಕ್ಕಾಣಿ ಇನ್ನು ತನ್ನ ಕೈಗೆ ಸಿಗದು ಎಂದು ಅಜಿತ್‌ಗೆ ಖಾತರಿಪಡಿಸಿತ್ತು. ನನಗೆ ವಿಪಕ್ಷ ನಾಯಕ ಹುದ್ದೆ ಬೇಡ. ಪಕ್ಷದ ಯಾವುದಾದರೂ ಹುದ್ದೆ ಕೊಡಿ ಎಂದು ಬಹಿರಂಗವಾಗಿ ಹೇಳಿದ್ದರು. ಅದಾದ ಬೆನ್ನಲ್ಲೇ ಬಂಡಾಯ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಿದ ಅಜಿತ್‌ ಇದೀಗ ಇತರೆ 8 ಜನರ ಜೊತೆಗೂಡಿ ಬಿಜೆಪಿ ಸರ್ಕಾರ ಸೇರಿದ್ದಾರೆ.

ಇದನ್ನು ಓದಿ: ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ: ಚುನಾವಣಾ ಆಯೋಗಕ್ಕೂ ಮಾಹಿತಿ

ಹಾಗಂತ ಇದು ಅಜಿತ್‌ ಬಂಡಾಯದ ವಿಷಯ ಶರದ್‌ ಪವಾರ್‌ಗೆ ಗೊತ್ತಿರಲಿಲ್ಲ ಎಂದೇನಿಲ್ಲ. ಅಜಿತ್‌ ಬಂಡಾಯ ಏಳಬಹುದು ಎಂಬ ಕಾರಣಕ್ಕೇ ಅವರು ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕಾರ್ಯಕರ್ತರು ಶರದ್‌ ಪವಾರ್‌ ಪರ ನಿಂತು, ರಾಜೀನಾಮೆ ಬೇಡ ಎಂದು ಬೆನ್ನು ಹತ್ತಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಶರದ್‌ ರಾಜೀನಾಮೆ ಹಿಂಪಡೆದಿದ್ದರು ಹಾಗೂ ಪುತ್ರಿಗೆ ಪಕ್ಷದ ಕಾರ್ಯಾಧ್ಯಕ್ಷ ಪಟ್ಟ ಕಟ್ಟಿದ್ದರು. ಇದು ಅಜಿತ್‌ ಅಸಮಾಧಾನಕ್ಕೆ ಕಾರಣವಾಯಿತು.

2 ವರ್ಷದಲ್ಲಿ 2ನೇ ಬಾರಿ ಮಹಾ ವಿಪಕ್ಷ ಹೋಳು: ಎರಡೂ ವಿಭಜನೆಯ ಲಾಭ ಬಿಜೆಪಿಗೆ
ಅಜಿತ್‌ ಪವಾರ್‌ ನೇತೃತ್ವದಲ್ಲಿ 9 ಎನ್‌ಸಿಪಿ ಶಾಸಕರು ಭಾನುವಾರ ಎನ್‌ಡಿಎ ಮೈತ್ರಿಕೂಟ ಸೇರುವುದರೊಂದಿಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಅಧಿಕೃತವಾಗಿ ಹೋಳಾಗಿದೆ. ಇದರೊಂದಿಗೆ 2 ವರ್ಷದ ಅವಧಿಯಲ್ಲಿ ಮಹಾರಾಷ್ಟ್ರದ 2ನೇ ಪಕ್ಷವೊಂದು ವಿಭಜನೆಯಾದಂತಾಗಿದೆ. ಎರಡೂ ಬಾರಿ ಇದರ ಲಾಭ ಬಿಜೆಪಿಗೆ ಸಿಕ್ಕಿದೆ ಎಂಬುದು ವಿಶೇಷ.

ಇದನ್ನೂ ಓದಿ: ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ

2022ರಲ್ಲಿ ಶಿವಸೇನೆಯ 56 ಶಾಸಕರ ಪೈಕಿ 40 ಶಾಸಕರು ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಬಂಡೆದ್ದು ಪಕ್ಷವನ್ನು ಒಡೆಯುವ ಮೂಲಕ ಎನ್‌ಡಿಎ ಪಾಳಯ ಸೇರಿ ಸರ್ಕಾರ ರಚಿಸಿದ್ದರು. ಇದೀಗ 9 ಶಾಸಕರೊಂದಿಗೆ ಅಜಿತ್‌ ಪವಾರ್‌ ಎನ್‌ಡಿಎ ಪಾಳಯ ಸೇರುವ ಮೂಲಕ ಆ ಪಕ್ಷವೂ ಹೋಳಾಗಿದೆ. ಎನ್‌ಸಿಪಿಯ 53 ಶಾಸಕರ ಪೈಕಿ 40 ಜನರ ಬೆಂಬಲ ತನಗೆ ಇದೆ ಎಂದು ಪವಾರ್‌ ಹೇಳಿಕೊಂಡಿದ್ದಾರೆ. 

ಇದು ಖಚಿತವಾದರೆ ಎನ್‌ಸಿಪಿ ಸಂಪೂರ್ಣ ಹೋಳಾಗುವುದು ಖಚಿತ. ಜೊತೆಗೆ ಈ ಹಿಂದೆ ಏಕನಾಥ್‌ ಶಿಂಧೆ ಬಣವೇ ಮೂಲ ಶಿವಸೇನೆ ಎಂದು ಚುನಾವಣಾ ಆಯೋಗ ಮಾನ್ಯತೆ ನೀಡಿದ ಹಾಗೆ, ಅಜಿತ್‌ ಪವಾರ್‌ ಬಣಕ್ಕೆ ಮೂಲ ಎನ್‌ಸಿಪಿ ಬಣ ಎಂಬ ಮಾನ್ಯತೆ ದಕ್ಕುವ ಸಾಧ್ಯತೆಯೂ ದಟ್ಟವಾಗಿದೆ.

ಇದನ್ನೂ ಓದಿ: ಸಂಪುಟ ಪುನಾರಚನೆ ಗುಸುಗುಸು ಮಧ್ಯೆ ಇಂದು ಮೋದಿ ಮಂತ್ರಿಮಂಡಲ ಸಭೆ: ಎನ್‌ಸಿಪಿ ಪ್ರಫುಲ್‌ ಪಟೇಲ್‌ಗೆ ಮಂತ್ರಿಗಿರಿ?