ನಮ್ಮ ಇಡೀ ಕುಟುಂಬ ಪಂಚಮಸಾಲಿ ಸಮಾಜ ಮೀಸಲಾತಿ ಹೋರಾಟದಲ್ಲಿ ಇರಲಿದೆ. ನಮ್ಮ ಬದ್ಧತೆಉಳಿಸಿಕೊಳ್ಳುತ್ತೇವೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮಘಟ್ಟ ತಲುಪಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. 

ಬೆಳಗಾವಿ (ಜು.12): ನಮ್ಮ ಇಡೀ ಕುಟುಂಬ ಪಂಚಮಸಾಲಿ ಸಮಾಜ ಮೀಸಲಾತಿ ಹೋರಾಟದಲ್ಲಿ ಇರಲಿದೆ. ನಮ್ಮ ಬದ್ಧತೆಉಳಿಸಿಕೊಳ್ಳುತ್ತೇವೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮಘಟ್ಟ ತಲುಪಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಕುವೆಂಪು ನಗರದ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ ಸಮಾಜದ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಶ್ರೀಗಳ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಬೇರೆ ಸಮಾಜಕ್ಕೆ ಅನ್ಯಾಯ ಮಾಡಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಈ ಮಾತನ್ನು ಶ್ರೀಗಳು ಹೋರಾಟದ ಮೊದಲ ದಿನವೇ ಹೇಳಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕ, ಸಚಿವರನ್ನು ಒಟ್ಟಿಗೆ ಸೇರಿಸಿ ಚರ್ಚೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು. ನಾವು ಬಸವ ತತ್ವದ ಮೇಲೆ ನಡೆಯುವವರು. ಸಮಯ ಪ್ರಜ್ಞೆ ನಮಗಿದ್ದು, ತಾಳ್ಮೆಯಿಂದ ಹೋರಾಡುತ್ತೇವೆ. ಆದರೆ, ನಮ್ಮ ತಾಳ್ಮೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗ ಮೀಸಲಾತಿ ತೆಗೆದುಕೊಂಡಿಲ್ಲ ಎಂದರೆ ಮುಂದೆ ಸಿಗಲು ಸಾಧ್ಯವಿಲ್ಲ. ಈಗ ನಿರ್ಣಾಯಕ ಘಟಕ್ಕೆ ಬಂದು ನಿಂತಿದೆ ಎಂದು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಮೊದಲಿನಿಂದಲೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ 2ಡಿ ಮೀಸಲಾತಿ ಕೊಟ್ಟಿತ್ತು. ಅದು ನಮಗೆ ಬೇಡ. 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರೆಸಿದ್ದೇವೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಎದೆಗುಂದುವುದು ಬೇಡ. ಏನೋ ತಪ್ಪಾಗಿದೆ. ಇಡೀ ಸಮಾಜ ನಿಮ್ಮ ಜೊತೆಗಿರುತ್ತದೆ. ಮೃಣಾಲ ಹೆಬ್ಬಾಳಕರ ಯುವ ನಾಯಕ. ಜನರ ಹೃದಯದಲ್ಲಿದ್ದಾರೆ. ಆದರೆ, ಚುನಾವಣೆ ರಾಜಕೀಯವೇ ಬೇರೆ ಎಂದು ಶ್ರೀಗಳು ಸಚಿವರಿಗೆ ಧೈರ್ಯ ತುಂಬಿದರು.

ಸಚಿವ ಸಂಪುಟ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಈಶ್ವರ ಖಂಡ್ರೆ ಅವರು ಮೀಸಲಾತಿ ಪರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಅಧಿವೇಶನದಲ್ಲೂ ಮಾತನಾಡುವ ವಿಶ್ವಾಸವಿದೆ. ಎಲ್ಲರೂ ಸೇರಿ ಧ್ವನಿ ಎತ್ತಿದರೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ. ಇಡೀ ಸಮಾಜವೇ ಅವರ ಜೊತೆಗಿರುತ್ತದೆ ಎಂದು ಹೇಳಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಆರ್.ಕೆ. ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕಿ, ನಂದು ಕಾರಜೋಳ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆನಂದ ಗುಡಸ, ರಾವಸಾಬ್ ಪಾಟೀಲ, ರಾಜು ಮಗದುಮ್ಮ, ಬಸವರಾಜ ಕೊಟ್ಟೂರಶೆಟ್ಟಿ, ಸುರೇಶ ಹೊಸಪೇಟ, ಶಿವಪ್ಪ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು-ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ

ನಾನು ಕಿತ್ತೂರು ರಾಣಿ ಚನ್ನಮ್ಮನವರ ವಂಶಸ್ಥಳು. ಚನ್ನಮ್ಮ ಎದೆಗುಂದದೆ ಹೋರಾಟ ಮಾಡಿದ್ದಾಳೆ. ಗೆದ್ದಾಗ ಸೊಕ್ಕು ತೋರುವುದು, ಸೋತಾಗ ಸೊರಗುವುದು ನಮ್ಮ ಗುಣವಲ್ಲ. ರಾಜಕಾರಣ ನಿಂತ ನೀರಲ್ಲ. ಸಮಾಜದ ಎಲ್ಲಾ ಬಾಂಧವರು ನನ್ನ ಪರವಾಗಿ ನಿಂತಿರುವುದಕ್ಕೆ ನಾನು ಋಣಿಯಾಗಿದ್ದೇನೆ. ಸಮಾಜದ ಪರ ನಾನು ನನ್ನ ಬದ್ಧತೆ ಉಳಿಸಿಕೊಳ್ಳುವೆ.
- ಲಕ್ಷ್ಮೀ ಹೆಬ್ಬಾಳಕರ, ಸಚಿವೆ