ಸಿದ್ದರಾಮಯ್ಯನವರು ಸಿಎಂ ಆದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ ಎಂದು ಎಂಎಲ್‌ಸಿ ಎಚ್‌. ವಿಶ್ವನಾಥ್ ಆರೋಪಿಸಿದ್ದಾರೆ.  

ಮೈಸೂರು (ಜ.26): ಸಿದ್ದರಾಮಯ್ಯನವರು ಸಿಎಂ ಆದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ ಎಂದು ಎಂಎಲ್‌ಸಿ ಎಚ್‌. ವಿಶ್ವನಾಥ್ ಆರೋಪಿಸಿದ್ದಾರೆ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು. ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಮೈಸೂರು ಮಹಾರಾಜರ ಬಗ್ಗೆ ಸಿದ್ದರಾಮಯ್ಯನವರು ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರು ಸಿಎಂ ಆದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. 

ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು, ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಮಾಡುತ್ತಾರೆ. ನಾನು ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂಗೆ ಕ್ಲೀನ್ ಚಿಟ್‌ ನೀಡುವ ವದಂತಿ ಕುರಿತು ಪ್ರತಿಕ್ರಿಯಿಸಿ, ಲೋಕಾಯುಕ್ತ ಸರ್ಕಾರದ ಕೈಗೊಂಬೆ. ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡುವುದು ಸರ್ಕಾರ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ: ಕೇಂದ್ರ ಸಚಿವರಾದ ನಂತರ ಎಚ್.ಡಿ. ಕುಮಾರಸ್ವಾಮಿ ಅವರು ದೇಶಾದ್ಯಂತ ಮಿಂಚಿನ ಸಂಚಾರ ಮಾಡಿ ಉತ್ತಮ ಕೆಲಸ ಮಾಡುವ ಮೂಲಕ ಕಾರ್ಖಾನೆ ಗಳಿಗೆ ಪುನಶ್ಚೇತನ ನೀಡುತ್ತಿದ್ದು, ಅವರನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ದೂರಿದರು. ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಜೆಡಿಎಸ್ ವತಿಯಿಂದ ಆಡಳಿಸಿದ್ದ ಮತದಾರರ ಕೃತಜ್ಞತೆ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಕೊಡುಗೆಗಳಿಂದ ರಾಜ್ಯದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ: ವಿಶ್ವನಾಥ್‌

ವೈಜ್ಞಾಗ್‌ ಕಾರ್ಖಾನೆಗೆ 11 ಸಾವಿರ ಕೋಟಿ ನೀಡಿಕೆ: ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದ ಆಂಧ್ರಪ್ರದೇಶದ ವೈಜ್ಞಾಗ್ ಕಾರ್ಖಾನೆಗೆ ತಮ್ಮ ಇಲಾಖೆಯ ವತಿಯಿಂದ 11 ಸಾವಿರ ಕೋಟಿ ನೀಡಿ ಅಲ್ಲಿನ ಕಾರ್ಮಿಕರ ಬದುಕು ಹಸನಾಗುವಂತೆ ಮಾಡಿರುವ ಕೇಂದ್ರ ಸಚಿವರ ಭಾವಚಿತ್ರಕ್ಕೆ ಅಲ್ಲಿನ ಜನತೆ ಕ್ಷಿರಾಭೀಷೇಕ ಮಾಡುತ್ತಿದ್ದರು ನಮ್ಮವರು ಬಳಕೆ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂದರು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನೂರಾರು ಬಾಣಂತಿಯರು ಮೃತಪಟ್ಟಿದ್ದರೂ ರಾಜ್ಯ ಸರ್ಕಾರ ಕಾಳಜಿ ತೊರದಿರುವುದು ಅವರ ಜನ ವಿರೋಧಿ ಮತ್ತು ರಾಜಕೀಯ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ ಎಂದು ಜರಿದರು.