ಉಗ್ರರು ಮಾಡಿದ್ದು ಹೇಡಿತನದ ಕೃತ್ಯ, ಹುಡುಕಾಡಿ ಉಗ್ರರನ್ನು ಕೊಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಕ್ರೋಶ ಹೊರಹಾಕಿದರು. 

ವಿಜಯಪುರ (ಏ.30): ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪೆಹಲ್ಗಾಮ್ ಘಟನೆಯನ್ನು ಖಂಡಿಸಬೇಕು. ಉಗ್ರರು ಮಾಡಿದ್ದು ಹೇಡಿತನದ ಕೃತ್ಯ, ಹುಡುಕಾಡಿ ಉಗ್ರರನ್ನು ಕೊಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಕ್ರೋಶ ಹೊರಹಾಕಿದರು. ಪಾಕಿಸ್ತಾನ ಉಗ್ರರು ನಡೆಸಿದ ದಾಳಿಯ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು. ಕಾಶ್ಮೀರದಲ್ಲಿಯೂ ಬೆಂಬಲ‌ ಇಲ್ಲ, ಕಾಶ್ಮೀರಿಗಳು ಭಾರತದ ಪರ, ಶಾಂತಿಯ ಕಡೆಗೆ ಇದ್ದಾರೆ. ಟೂರಿಸಂ ಡೆವಲಪ್ಮೆಂಟ್ ಆದ ಮೇಲೆ ಉಗ್ರರಿಗೆ ನೋಡಲು ಆಗಿಲ್ಲ, ಇದನ್ನೆಲ್ಲ ಕೆಡಿಸಬೇಕು ಎನಿಸಿದೆ ಎಂದರು.

ಇಂಡೋ ಪಾಕ್ ನಡುವೆ ಯುದ್ಧದ ಕಾರ್ಮೋಡ ವಿಚಾರದ ಕುರಿತು ಮಾತನಾಡಿ, ಯೂರೋಪ ರಾಷ್ಟ್ರಗಳು ನಮ್ಮ ಜೊತೆಗೆ ಇರಬೇಕು. ಚೀನಾ, ಅಮೆರಿಕಾ ಸೇರಿ ಎಲ್ಲರೂ ಪರಸ್ಪರ ಉಗ್ರವಾದವನ್ನ ಖಂಡಿಸಬೇಕು. ಪಾಕ್ ಒಂದು ದರಿದ್ರ ದೇಶ, ಪಾಕ್‌ಗೆ ಬೇರೆ ಕೆಲಸ ಇಲ್ಲ. ಅವರ ದೇಶದಲ್ಲೇ ಅವರ ಪರಿಸ್ಥಿತಿ ಹೀನಾಯವಾಗಿದೆ. ಯುದ್ಧಕ್ಕೆ ಹೆದರಿ ಸೈನಿಕರು, ಅಧಿಕಾರಿಗಳು ಓಡಿ ಹೋಗಿದ್ದಾರೆ. ಪೆಹಲ್ಗಾಮ ಘಟನೆ ಹೇಡಿಗಳ ಕೃತ್ಯ, ಹೇಯ ಕೃತ್ಯ. ಈಗ ಕೇಂದ್ರ ಎಚ್ಚೆತ್ತುಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ, ಸೂಕ್ತ ಸೇನೆ, ಪೊಲೀಸ್ ವ್ಯವಸ್ಥೆ ಬೇಕು. ಆಯಕಟ್ಟಿನ ಜಾಗದಲ್ಲಿ ಸೇನೆಯನ್ನು ನಿಯೋಜಿಸಬೇಕು. ಪ್ರವಾಸೋದ್ಯಮ ಆರಂಭವಾಗಬೇಕು. ಪೆಹಲ್ಗಾಮ್ ಭಾರತದ ಸ್ವಿಟ್ಜರ್ಲೆಂಡ್‌‌ ಮತ್ತೆ ಅಲ್ಲಿ ಪ್ರವಾಸೋದ್ಯಮ ಶುರುವಾಗಬೇಕು. ಸೂಕ್ತ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪಾಕ್ ಜೊತೆಗೆ ಯುದ್ಧ ಬೇಡ, ಸಿಎಂ ಹೇಳಿಕೆ ವಿವಾದದ ವಿಚಾರಕ್ಕೆ ಉತ್ತರಿಸಿದ ಅವರು, ಸಿಎಂ ಬೇರೆ ಅರ್ಥದಲ್ಲಿ ಹೇಳಿದ್ದಾರೆ. ಪಾಕ್ ವಿರುದ್ಧ ಯುದ್ಧ ಆಗಲೇಬೇಕು. ಸಿಎಂ ಯುದ್ಧ ಸೆಲ್ಯೂಶನ್ ಅಲ್ಲ ಎಂದಿದ್ದಾರೆ. ಅವರ ಬಳಿ ನ್ಯೂಕ್ಲಿಯರ್ ಇದೆ, ಇತರೆ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಬೇಕು. ಪಾಕ್ ವಿರುದ್ಧ ಯುದ್ದವಾಗಲೇಬೇಕು. ಪಾಕ್‌ಗೆ ತಕ್ಕ ಶಾಸ್ತಿ ಆಗಲೇಬೇಕು. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕ್ರಮ ಕೈಗೊಂಡ ರೀತಿ ಕ್ರಮ ಆಗಬೇಕು. ಪಾಕಿಸ್ತಾನವನ್ನು ಸದೆಬಡಿಯಬೇಕು, ಕೇಂದ್ರದ ಜೊತೆಗೆ, ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳಿವೆ. ಎಚ್ಚರಿಕೆಯಿಂದ, ಪರಿಣಾಮಕಾರಿಯಾಗಿ ಆಗಬೇಕು. ಅಣು ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ. ಮುನ್ನೆಚ್ಚರಿಕೆ ತೆಗೆದುಕೊಂಡು ಯುದ್ಧ ಮಾಡಲಿ. ನಮ್ಮ ದೇಶದ ಜನರಿಗೆ ತೊಂದರೆಯಾದಂತೆ ಯುದ್ಧ ಆಗಲಿ ಎಂದು ಮನವಿ ಮಾಡಿದರು.

ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲ್ಲ: ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟನೆ

ಸಿಎಂ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿಲ್ಲ, ಯಾರು ಎಸ್ಪಿ ಎಂದು ಕೈ ತೋರಿಸಿದ್ದಾರೆ. ಹೊಡೆಯಲು ಹೋಗಿಲ್ಲ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಯಾಕೆ?. ನಾಳೆ ಮೋದಿ ಕಾರ್ಯಕ್ರಮದಲ್ಲಿ ನಾವು 50 ಜನ ಹೋಗಿ ಗಲಾಟೆ ಮಾಡಿದರೆ ಹೇಗೆ?. ಹೆಣ್ಮಕ್ಕಳನ್ನ ಬಳಸಿ ಗಲಾಟೆ ಮಾಡಿಸಿದ್ದಾರೆ. ಬಿಜೆಪಿಯಲ್ಲಿ ಗಂಡಸರು ಇಲ್ವಾ?. ಗಂಡಸರು ಬರಬೇಕಾಗಿತ್ತಲ್ವಾ?.
-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ