ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಕಪ್ಪು ಕಾಗೆ ರೀತಿ ಆಗಿದ್ದಾರೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಗುಂಡ್ಲುಪೇಟೆ (ನ.06): ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಕಪ್ಪು ಕಾಗೆ ರೀತಿ ಆಗಿದ್ದಾರೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ತಾಲೂಕಿನ ಕಲ್ಕಟ್ಟೆ ಬಳಿ ಬಿಜೆಪಿ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರಾಂತದವರಾಗಿದ್ದು, ಇವರು ಮೈಸೂರು ಪ್ರಾಂತಕ್ಕೆ ಕಪ್ಪು ಚುಕ್ಕೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಭ್ರಷ್ಠಾಚಾರದ ಬಗ್ಗೆ ಪ್ರಶ್ನಿಸಿದರೆ ಕಾಗೆಯಲ್ಲಿ ಬಿಳಿ ಚುಕ್ಕೆ ಹುಡುಕಿ ಎನ್ನುತ್ತಿಲ್ಲ, ಕಪ್ಪು ಚುಕ್ಕೆ ಹುಡುಕಿ ಎಂದು ಹೇಳುವ ಸಿದ್ದರಾಮಯ್ಯ ಕಾಗೆ ರೀತಿ ಕಪ್ಪಾಗಿದ್ದಾರೆ ಎಂದು ಕುಟುಕಿದರು.
ಬುರುಡೆ ದಾಸ: ಮೈಸೂರು ರಾಜರಿಗಿಂತ ನಮ್ಮಪ್ಪ ಹೆಚ್ಚಿನ ಕೆಲಸ ಮಾಡಿದ್ದಾರೆ ಎಂದು ಹೋಲಿಕೆ ಮಾಡಲೊರಟಿರುವ ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಬುರುಡೆ ದಾಸ. ಮೈಸೂರು ಮಹರಾಜರು ಎಲ್ಲಿ, ಸಿದ್ದರಾಮಯ್ಯ ಎಲ್ಲಿ, ಈ ರೀತಿ ಮಹಾರಾಜರಿಗೆ ಹೋಲಿಕೆ ಮಾಡುತ್ತೀರಲ್ಲ, ಮಾನ, ಮಾರ್ಯಾದೆ ಇದೆಯಾ ನಿಮಗೆ ಎಂದು ಯತೀಂದ್ರ ವಿರುದ್ಧ ಹರಿ ಹಾಯ್ದರು. ರಾಜ್ಯ ಸರ್ಕಾರ ಐಸಿಯುನಲ್ಲಿದೆ. ರೈತರು, ಸಾರ್ವಜನಿಕರು ಸೇರಿದಂತೆ ಯಾರೇ ಏನೇ ಹೇಳಿದರೂ ಕೇಳುತ್ತಿಲ್ಲ. ಐಸಿಯುನಿಂದ ಜನರಲ್ ವಾರ್ಡ್‌ಗೆ ಬರೋ ತನಕ ಕೆರೆಗೆ ನೀರು ತುಂಬಿಸಿಲ್ಲ ಎಂದು ವ್ಯಂಗವಾಡಿದರು.
ನ್ಯಾಯ ಕೇಳಿದರೆ ಮೇಲ್ ಬೀಳ್ತಾರಾ?: ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಮಾತೆತ್ತಿದ್ರೆ ಗ್ಯಾರಂಟಿ ಎಂದು ದಿನ ದೂಡುತ್ತಿದ್ದಾರೆ ಎಂದು ಹೇಳಿದರು. ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಎಸ್ಇಪಿ, ಟಿಎಸ್ ಪಿ ಹಣ ಗ್ಯಾರಂಟಿಗೆ ಬಳಸಿಕೊಂಡರೂ ದಲಿತ ಸಚಿವರು ಮಾತನಾಡುತ್ತಿಲ್ಲ. ಈ ಸರ್ಕಾರ ಬಂದ ದಿನದಿಂದಲೂ ದಲಿತ ಸಚಿವರು ಧ್ವನಿ ಎತ್ತುತ್ತಿಲ್ಲ, ಸಿದ್ದರಾಮಯ್ಯ ಏನ್ ಟೆರರಿಸ್ಟಾ, ನ್ಯಾಯ ಕೇಳಿದರೆ ಮೇಲ್ ಬೀಳ್ತಾರಾ?. ಈ ಸರ್ಕಾರ ನವೆಂಬರ್ ಕ್ರಾಂತಿ ವಿಚಾರದಿಂದ ಐಸಿಯುನಲ್ಲಿದೆ ಎಂದು ಕಿಡಿಕಾರಿದರು.
ಹರಿಯಾಣದಲ್ಲಿ ವೋಟ್ ಚೋರಿ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ
ಸಂಸದ ರಾಹುಲ್ ಗಾಂಧಿ ದೊಡ್ಡ ಚೋರ್, ಅವರ ಖಾಂದಾನ್ ದೊಡ್ಡ ಚೋರ್. ಡಾ.ಬಿ.ಆರ್.ಅಂಬೇಡ್ಕರ್ 1952ರಲ್ಲಿ ಚುನಾವಣೆಗೆ ನಿಂತಾಗ 14 ಸಾವಿರ ಮತಗಳಿಂದ ಸೋತರು. ಆ ವೇಳೆ 74 ಸಾವಿರ ಮತ ತಿರಸ್ಕೃತಗೊಂಡಿತ್ತು. ಸರಿಯಾಗಿ ಚುನಾವಣೆ ಆಗಿದ್ದರೇ ಅಂಬೇಡ್ಕರ್ ಗೆಲ್ಲುತ್ತಿದ್ದರು, ಆದರೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬುದಕ್ಕೆ ಕುಲಗೆಟ್ಟ ಮತ ಮಾಡಿದ ಕಾರಣದಿಂದ ಆ ಕಾರಣಕ್ಕೆ ಅವರು ಚೋರ್. ಅದಾದ ಮೇಲೆ ಇಂದಿರಾ ಗಾಂಧಿ ಚೋರ್, ರಾಜೀವ್ ಗಾಂಧಿ ಚೋರ್, ರಾಹುಲ್ ಗಾಂಧಿನೂ ಚೋರ್, ಚೋರ್ ಗಳೆಲ್ಲಾ ಸೇರಿ ಇವತ್ತು ಏನೂ ಚೋರಿ ಮಾಡಲಾಗದ ಮೆಷಿನ್ ಗಳನ್ನು ಚೋರಿ ಅಂತಿದ್ದಾರೆ. ಮಹಾತ್ಮ ಗಾಂಧಿ ಕುಟುಂಬದ ಬಗ್ಗೆ ಅಲ್ಲ ಈ ಗಾಂಧಿಗಳು ನಕಲಿ ಗಾಂಧಿ ಫ್ಯಾಮಿಲಿ, ನೆಹರೂ ಕಾಲದಲ್ಲಿ ಗಾಂಧಿ ಹೆಸರು ಇರಲಿಲ್ಲ. ಆಮೇಲೆ ಎಲ್ಲಿ ಬಂತು ಇವರಿಗೆ ಗಾಂಧಿ ಹೆಸರು, ಇವರು ನಕಲಿ ಗಾಂಧಿ ಫ್ಯಾಮಿಲಿ ಎಂದು ಕಿಡಿಕಾರಿದರು.
